ಸೇವಾ ದಿನವಾಗಿ ಸಿದ್ಧಗಂಗಾ ಶ್ರೀ ಜಯಂತಿ ಆಚರಣೆ

KannadaprabhaNewsNetwork | Published : Apr 2, 2025 1:04 AM

ಸಾರಾಂಶ

ಶಿವಕುಮಾರ ಸ್ವಾಮೀಜಿಯವರ ಜನ್ಮದಿನವನ್ನು ಸೇವಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಯಾರು ಬೇಕಾದರೂ ಯೋಗಿಗಳಾಗಬಹುದು ಆದರೆ ಮಹಾಯೋಗಿಗಳಾಗುವುದು ಕಷ್ಟವೇ. ಅದು ಸಿದ್ದಿಸಬೇಕಾದರೆ ಕಠಿಣ ಪರಿಶ್ರಮ ಬೇಕಾಗುತ್ತದೆ. ಅದನ್ನು ಮಾಡಿ ತೋರಿಸಿ ನಮ್ಮೊಡನೆ ಅಮರರಾಗಿ ಉಳಿದವರು ಡಾ. ಶಿವಕುಮಾರ ಸ್ವಾಮೀಜಿ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶಿವಕುಮಾರ ಸ್ವಾಮೀಜಿಯವರು ಲಕ್ಷಾಂತರ ಮಕ್ಕಳಿಗೆ ಅನ್ನ, ಅಕ್ಷರ ಹಾಗೂ ಆಶ್ರಯ ನೀಡಿದವರು. ತ್ರಿವಿಧ ದಾಸೋಹದ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ವಿಶ್ವದ ಶ್ರೇಷ್ಠ ಸಂತ’ ಎಂದು ಜಿಲ್ಲಾ ನಗರ್ತ ಸಂಘದ ಅಧ್ಯಕ್ಷ ಕೆ.ಪಿ ಸತೀಶ್, ಹೇಳಿದರು.

ನಗರದ ಭುವನೇಶ್ವರಿ ವೃತ್ತದಲ್ಲಿ ಅಯೋದ್ಯಾ ನಗರ ಶಿವಾಚಾರ್ಯ ವೈಶ್ಯ ನಗರ್ತ ಜನಾಂಗದ ವತಿಯಿಂದ ಮಂಗಳವಾರ ಸಿದ್ದಗಂಗಾ ಮಠದ ಕರ್ನಾಟಕ ರತ್ನ ಪದ್ಮಭೂಷಣ ಡಾ. ಶಿವಕುಮಾರ ಮಹಾ ಸ್ವಾಮಿಗಳವರ 118 ನೇ ಜಯಂತೋತ್ಸವ ಮತ್ತು ನಗರ್ತ ಜನಾಂಗದ ಮೂಲ ಪುರುಷ ಭಕ್ತ ಸಿರಿಯಾಳ ಶೆಟ್ಟಿ ರವರ ಜಯಂತಿಯುದ ಅಂಗವಾಗಿ ಅವರುಗಳ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ನಂತರ ಅನ್ನದಾಸೋಹ ಕ್ಕೆ ಚಾಲನೆ ನೀಡಿ ಮಾತನಾಡಿದರು.

ನಿಸ್ವಾರ್ಥ ಸೇವೆ ಸಲ್ಲಿಸಿದ ಶ್ರೀ

ಶಿವಕುಮಾರ ಸ್ವಾಮೀಜಿಯವರ ಜನ್ಮದಿನವನ್ನು ಸೇವಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು ಬಡವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರು. ನಿಸ್ವಾರ್ಥ ಸೇವೆಯಿಂದ ಜನರ ಮನಸ್ಸು ಗೆದ್ದಿದ್ದರು. ಅದೇ ರೀತಿ ಭಕ್ತ ಸಿರಿಯಾಳ ಶೆಟ್ಟಿ ಸಹಾ ಬಡವರ ಸೇವೆಯಲ್ಲಿ ಪರಮ ಶಿವನ ಸೇವೆ ಎಂದು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು’ ಎಂದರು.

ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಕಲಾ ಚಂದ್ರಶೇಖರ್ ಮಾತನಾಡಿ, ಯಾರು ಬೇಕಾದರೂ ಯೋಗಿಗಳಾಗಬಹುದು ಆದರೆ ಮಹಾಯೋಗಿಗಳಾಗುವುದು ಕಷ್ಟವೇ. ಅದು ಸಿದ್ದಿಸಬೇಕಾದರೆ ಕಠಿಣ ಪರಿಶ್ರಮ ಬೇಕಾಗುತ್ತದೆ. ಅದನ್ನು ಮಾಡಿ ತೋರಿಸಿ ನಮ್ಮೊಡನೆ ಅಮರರಾಗಿ ಉಳಿದವರು ಡಾ. ಶಿವಕುಮಾರ ಸ್ವಾಮೀಜಿಗಳು ಎಂದರು.

ಕಾರ್ಯಕ್ರಮದ ಪ್ರಾಯೋಜಕ ಹಾಗೂ ನಗರ್ತ ಜನಾಂಗದ ಮುಖಂಡ ಸಿ.ಆನಂದ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರ್ತ ಸಂಘದ ಬಿ. ಮಂಜುನಾಥ್, ಬಾಬು ಪ್ರಸಾದ್, ಅಕ್ಕಮಹಾದೇವಿ ಮಹಿಳಾ ಸಂಘದ ಮಂಜುಳಾ ಚಂದ್ರಶೇಖರ್, ನಿರ್ಮಲ ರಾಜಕುಮಾರ್, ಮತ್ತಿತರರು ಇದ್ದರು.

Share this article