- 12 ಅಡಿ ಎತ್ತರ, 4 ಮಕ್ಕಳು ಸುಲಭವಾಗಿ ಎತ್ತಬಹುದಾದಷ್ಟು ಭಾರದ ಕಲಾಕೃತಿ
- ಪೌರಾಣಿಕ ವೇಶದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ 200ಕ್ಕೂ ಹೆಚ್ಚು ಮಕ್ಕಳು
- ಸಂಸ್ಥೆ ನಿರ್ದೇಶಕ ಡಾ.ಜಯಂತ್ ಪರಿಕಲ್ಪನೆ, ಚಿತ್ರಕಲಾ ಶಿಕ್ಷಕರ ಸಾಥ್- 12 ವರ್ಷಗಳಿಂದ ಪೇಪರ್ ಗಣಪನ ತಯಾರಿಸಿ, ಶ್ರದ್ಧಾ-ಭಕ್ತಿಯಿಂದ ಪೂಜೆ
ಕನ್ನಡಪ್ರಭ ವಾರ್ತೆ ದಾವಣಗೆರೆ ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಬುಧವಾರ ಬೆಳಗ್ಗೆ ಪೇಪರ್ ಗಣೇಶನ ಆಕರ್ಷಕ ಮೆರವಣಿಗೆ ನಡೆಸಿ, ಸಂಭ್ರಮದಿಂದ ಪ್ರತಿಷ್ಠಾಪನೆ ಮಾಡಲಾಯಿತು. 12 ಅಡಿ ಎತ್ತರದ ಭವ್ಯಗಣಪತಿಯು ವಿವಿಧ ವೇಷಭೂಷಣಗಳಲ್ಲಿ ಅಲಂಕೃತಗೊಂಡು ಪಾಲ್ಗೊಂಡ ಮಕ್ಕಳು ಎಳೆಯುತ್ತಿದ್ದ ರಥದ ಮೇಲೆ ಗಂಭೀರವದನವಾಗಿ ವಿರಾಜಮಾನನಾಗಿದ್ದ ವೈಭವ ಹಬ್ಬಕ್ಕೆ ಹೊಸ ಹುರುಪು ತಂದಿತ್ತು.
ಬೆಳಗ್ಗೆ 9 ಗಂಟೆಗೆ ಶಾಲೆಯಿಂದ ಪರಿಸರಸ್ನೇಹಿ ಪೇಪರ್ ಗಣಪತಿಯನ್ನು ಮಕ್ಕಳು ಗಾಂಧಿ ವೃತ್ತಕ್ಕೆ ತಂದರು. ಅಲ್ಲಿಂದ ನಂದಿಕೋಲು, ಡೊಳ್ಳು, ವೀರಗಾಸೆ, ಪಟಗಳನ್ನು ಹಿಡಿದ ಮಕ್ಕಳು ಆಗಮಿಸಿ ಮೆರವಣಿಗೆಗೆ ಸಿದ್ಧರಾದರು. ಸಾವಿರಕ್ಕೂ ಹೆಚ್ಚುಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ಶಿಸ್ತುಬದ್ಧವಾಗಿ ಮೆರವಣಿಗೆಯೊಡನೆ ಹೆಜ್ಜೆಹಾಕಿದರು.
ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಸಿದ್ಧಗಂಗಾ ಸಂಸ್ಥೆಯ ಮಕ್ಕಳೇ ತಯಾರಿಸಿದ ಈ ಪೇಪರ್ ಗಣಪತಿ ವೀಕ್ಷಣೆ ಮಾಡಿ, ಭೇಷ್ ಎಂದರು. ಕೆಲವರು ಗಣಪತಿಯನ್ನು ಸ್ಪರ್ಶಿಸಿ, ನಮಿಸಿದರು. 4 ಮಕ್ಕಳು ಎತ್ತಬಹುದಾದಷ್ಟು ಭಾರದ 12 ಅಡಿ ಎತ್ತರದ ಪರಿಸರಸ್ನೇಹಿ ಗಣಪ 10 ದಿನಗಳ ಕಾಲ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ. 11ನೇ ದಿನ ಪೇಪರ್ ಗಣೇಶನನ್ನು ವಿಸರ್ಜಿಸಲಾಗುವುದು.
ಸಂಸ್ಥೆ ನಿರ್ದೇಶಕ ಡಾ.ಜಯಂತ್ ಅವರ ಪರಿಕಲ್ಪನೆಯಲ್ಲಿ ಕಳೆದ 12 ವರ್ಷಗಳಿಂದ ಶಾಲೆಯ ಚಿತ್ರಕಲಾ ಶಿಕ್ಷಕರ ನೆರವಿನಿಂದ ಸುಂದರ ರೂಪ ತಾಳುವ ಪೇಪರ್ ಗಣಪತಿಗೆ ಪ್ರತಿನಿತ್ಯ ಬೆಳಗ್ಗೆ ಶಾಲಾ ಮಕ್ಕಳೇ ಪೂಜಾ ಕಾರ್ಯಗಳ ನೇತೃತ್ವ ವಹಿಸುತ್ತಿದ್ದಾರೆ.
- - -
ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಆಕರ್ಷಕ ಮೆರವಣಿಗೆಯೊಂದಿಗೆ ಪೇಪರ್ ಗಣೇಶನ ಪ್ರತಿಷ್ಠಾಪನೆ ಮಾಡಲಾಯಿತು.