ರೇಡಿಯಂಟ್ ಶಿಕ್ಷಣ ಸಂಸ್ಥೆಗೆ ಸಿದ್ಧಗಂಗಾಶ್ರೀಗಳ ಪ್ರೇರಣೆ: ಬಿಜೆಪಿ ನಾಯಕ ಬಿ.ಎಲ್.ಸಂತೋಷ್‌

KannadaprabhaNewsNetwork |  
Published : Jan 26, 2026, 01:30 AM IST
25ಜಿಪಿಟಿ1ಗುಂಡ್ಲುಪೇಟೆ ತಾಲೂಕಿನ ದೊಡ್ಡತುಪ್ಪೂರು ಬಳಿ ರೇಡಿಯಂಟ್‌ ಶಿಕ್ಷಣ ಸಂಸ್ಥೆಗಳ ಸಮಾರಂಭವನ್ನು ಬಿಜೆಪಿ ನಾಯಕ ಬಿ.ಎಲ್.ಸಂತೋಷ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಜಿ.ನಿಜಗುಣರಾಜು ಉದ್ಯಮಿಯಾಗಿ ಯಶ ಕಂಡಿದ್ದಾರೆ. ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಛಾಪು ಮೂಡಿಸಲು ಮುಂದಾಗಿದ್ದು, ಶಿಕ್ಷಣ ಸಂಸ್ಥೆ ಕಟ್ಟುವುದು ಕಷ್ಟದ ಕೆಲಸ ಆದರೂ ಗ್ರಾಮೀಣ ಪ್ರದೇಶದಲ್ಲಿ ಇಂಥ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಭಾಗದ ಜನರು ಸಂಸ್ಥೆಗೆ ತಮ್ಮ ಮಕ್ಕಳನ್ನು ಸೇರಿಸಿ ಪ್ರೋತ್ಸಾಹಿಸಿ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸಿದ್ಧಗಂಗೆಯ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ ಪ್ರೇರಣೆಯಿಂದ ಉದ್ಯಮಿ ಜಿ.ನಿಜಗುಣರಾಜು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಅವರಿಗೆ ಯಶಸ್ಸು ಸಿಗಲಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಆಶಿಸಿದರು.

ತಾಲೂಕಿನ ದೊಡ್ಡತುಪ್ಪೂರು ಬಳಿ ಜ್ಞಾನ ಸಂಗಮ ಪ್ರತಿಷ್ಠಾನದ ರೇಡಿಯಂಟ್‌ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌, ರೇಡಿಯಂಟ್‌ ಪಿಯು ಕಾಲೇಜು, ರೇಡಿಯಂಟ್‌ ಅಕಾಡೆಮಿ ಉದ್ಘಾಟನಾ ಹಾಗೂ ಡಾ.ಶಿವಕುಮಾರ ಸ್ವಾಮೀಜಿ ಅವರ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿದರು.

ಜಿ.ನಿಜಗುಣರಾಜು ಉದ್ಯಮಿಯಾಗಿ ಯಶ ಕಂಡಿದ್ದಾರೆ. ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಛಾಪು ಮೂಡಿಸಲು ಮುಂದಾಗಿದ್ದು, ಶಿಕ್ಷಣ ಸಂಸ್ಥೆ ಕಟ್ಟುವುದು ಕಷ್ಟದ ಕೆಲಸ ಆದರೂ ಗ್ರಾಮೀಣ ಪ್ರದೇಶದಲ್ಲಿ ಇಂಥ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಭಾಗದ ಜನರು ಸಂಸ್ಥೆಗೆ ತಮ್ಮ ಮಕ್ಕಳನ್ನು ಸೇರಿಸಿ ಪ್ರೋತ್ಸಾಹಿಸಿ ಎಂದರು.

ಶಿಕ್ಷಣ ಸಂಸ್ಥೆ ಕಟ್ಟೋದು ಅಷ್ಟು ಸುಲಭವಲ್ಲ, ಕಷ್ಟದ ಕೆಲಸ ಆದರೂ ವಿದ್ಯೆ ನೀಡಬೇಕು ಎಂಬ ಸಿದ್ಧಗಂಗಾ ಶ್ರೀಗಳ ಪ್ರೇರಣೆಯೊಂದಿಗೆ ಈ ಸಂಸ್ಥೆ ಕಟ್ಟಲಾಗಿದೆ. ಸಂಸ್ಥೆಯನ್ನು ಉಳಿಸಿಕೊಂಡು ಹೋಗೋದು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.

ಶಿಕ್ಷಕರು ಸಹ ಮಕ್ಕಳ ಭವಿಷ್ಯ ಹಾಗೂ ಸಂಸ್ಥೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು ಜೊತೆಗೆ ಮಿತಿ ಮೀರಿದ ಕೆಲಸ ಮಾಡುವ ಮೂಲಕ ಗುಣ ಮಟ್ಟದ ಶಿಕ್ಷಣ ನೀಡುವ ಕೆಲಸ ಆಗಬೇಕಿದೆ. ಸಂಬಳಕ್ಕಾಗಿ ಕೆಲಸ ಮಾಡುವುದನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, ದೇಶ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣವೇ ಶಕ್ತಿಯಾಗಿದ್ದು, ಗುಣ ಮಟ್ಟದ ಶಿಕ್ಷಣ ಸಿಗುವ ಕೆಲಸವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಇದಕ್ಕೆ ಸರ್ಕಾರ ಸಹಕಾರ ನೀಡಬೇಕು ಎಂದರು.

ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮ ಜಾರಿಗೆ ತಂದ ಬಳಿಕ ದೇಶದಲ್ಲಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳು ದೊರಕಿದವು. ದುರಂತ ಎಂದರೆ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂದು ವಿಷಾಧಿಸಿದರು.

ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಿದ್ಧಗಂಗಾ ಮಠಾಧೀಶ ಸಿದ್ದಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿ.ಸೋಮಶೇಖರ್‌ ಹಾಗೂ ಸಂಸ್ಥೆಯ ಕಾರ್ಯದರ್ಶಿ ಶ್ವೇತಾ ಡಿ ಸಂದೀಪ್‌ ಸಂಸ್ಥೆ ಕುರಿತು ಮಾತನಾಡಿದರು.

ಕನಕಗಿರಿ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ, ಶಾಸಕರಾದ ಬಿ.ಪಿ.ಶ್ರೀವತ್ಸ, ಎಚ್.ಕೆ.ಸುರೇಶ್‌, ಮಾಜಿ ಸಚಿವ ಎನ್.ಮಹೇಶ್‌, ಮಾಜಿ ಶಾಸಕರಾದ ಸಿ.ಎಸ್.ನಿರಂಜನ್‌ ಕುಮಾರ್‌, ಬೆಳ್ಳಿಪ್ರಕಾಶ್‌, ರೇಡಿಯಂಟ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಮಂಜುಳ ಜಿ.ನಿಜಗುಣರಾಜು, ಮೈಸೂರು ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಗಳ ಸೋಮಶೇಖರ್‌, ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಬಿಜೆಪಿ ಮುಖಂಡರಾದ ಎಂ.ರಾಜೇಂದ್ರ, ಮೈ.ವಿ.ರವಿಶಂಕರ್‌, ಡಾ.ಎ.ಆರ್.ಬಾಬು,ಖಂಡೇಶ್‌, ಮಂಗಲ ಶಿವಕುಮಾರ್‌, ಸ್ವಾಮಿ ಮರಳಾಪುರ, ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಜಿ.ಮಡಿವಾಳಪ್ಪ, ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್‌ ಸೇರಿದಂತೆ ನೂರಾರು ಮಂದಿ ಇದ್ದರು.

--

ಸುತ್ತೂರು, ಸಿದ್ಧಗಂಗ ಮಠಗಳು ಶಿಕ್ಷಣ ಕ್ಷೇತ್ರದಲ್ಲಿ ಪರ್ಯಾಯ ಸರ್ಕಾರಗಳಿದ್ದಂತೆ

ಗುಂಡ್ಲುಪೇಟೆ: ಸುತ್ತೂರು, ಸಿದ್ಧಗಂಗಾ ಮಠಗಳು ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭುತ್ವ ಸಾಧಿಸಿದ್ದು, ಶಿಕ್ಷಣದಲ್ಲಿ ಪರ್ಯಾಯ ಸರ್ಕಾರಗಳಿದ್ದಂತೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಹೇಳಿದರು.

ಸುತ್ತೂರು ಹಾಗೂ ಸಿದ್ಧಗಂಗ ಮಠದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ಸ್ತರದ ಶಾಲಾ, ಕಾಲೇಜುಗಳು ಹಾಗೂ ಉನ್ನತ ಶಿಕ್ಷಣದಲ್ಲೂ ಮುಂದಿವೆ, ಇದು ಸಾಮಾನ್ಯ ವಿಷಯವಲ್ಲ ಎಂದರು.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿರುವುದು ಒಳ್ಳೆಯ ಬೆಳವಣಿಗೆ. ಇಂಥ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹಿಸಬೇಕು ಎಂದರು.

ಸಮಾರಂಭ ಆರಂಭಕ್ಕೂ ಮುನ್ನ ವೇದಿಕೆಯಲ್ಲಿ ಹಿನ್ನೆಲೆ ಗಾಯಕಿ ಸಂಗೀತಾ ಕಟ್ಟಿ ವಚನ ಗಾಯನ ಹಾಗೂ ಭಾವ ಗೀತೆ ಹಾಡುವ ಮೂಲಕ ಸಭಿಕರ ಗಮನ ಸೆಳೆದರು.

------

ಸಿದ್ಧಗಂಗಾ ಶ್ರೀಗಳ ಕಂಚಿನ ಪ್ರತಿಮೆ ಆನಾವರಣಗೊಳಿಸಿದ ಸುತ್ತೂರು ಶ್ರೀ

ಗುಂಡ್ಲುಪೇಟೆ: ರೇಡಿಯಂಟ್‌ ಶಿಕ್ಷಣ ಸಂಸ್ಥೆಗಳ ನೂತನ ಸಮುಚ್ಛಯದ ಸಭಾಂಗಣದಲ್ಲಿ ಸಿದ್ಧಗಂಗಾ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ ಕಂಚಿನ ಪ್ರತಿಮೆಯನ್ನು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅನಾವರಣಗೊಳಿಸಿದರು.

ತುಮಕೂರು ಸಿದ್ಧಗಂಗಾ ಮಠಾಧೀಶ ಸಿದ್ಧಲಿಂಗ ಮಹಾಸ್ವಾಮೀಜಿ ರೇಡಿಯಂಟ್‌ ಶಿಕ್ಷಣ ಸಂಸ್ಥೆಗಳ ಶಾಲಾ, ಕಾಲೇಜುಗಳನ್ನು ಉದ್ಘಾಟಿಸಿದರು.

ಸಿದ್ಧಗಂಗಾ ಶ್ರೀಗಳ ಕಂಚಿನ ಪ್ರತಿಮೆ ಗಮನಿಸಿದ ಸುತ್ತೂರು, ಸಿದ್ಧಗಂಗಾ ಶ್ರೀಗಳು, ಬಿಜೆಪಿ ನಾಯಕ ಬಿ.ಎಲ್.ಸಂತೋಷ್‌, ಶಾಸಕರಾದ ಎಚ್.ಎಂ.ಗಣೇಶ್‌ ಪ್ರಸಾದ್‌, ಬಿ.ಪಿ.ಶ್ರಿವತ್ಸ, ಎನ್.ಮಹೇಶ್‌, ಸಿ.ಎಸ್.ನಿರಂಜನ್‌ ಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತ್ತೂರು ಬಸಿಲಿಕಾದಲ್ಲಿ ಸಂತ ಲಾರೆನ್ಸ್ ವಾರ್ಷಿಕ ಮಹೋತ್ಸವ ಆರಂಭ
ಯುವಜನತೆಗೆ ಧಾರ್ಮಿಕ ಶಿಕ್ಷಣದ ಅಗತ್ಯವಿದೆ - ಕೇಮಾರು ಶ್ರೀ