ಯಕ್ಷರಂಗದ ‘ದೈತ್ಯ ಪ್ರತಿಭೆ’ ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಇನ್ನಿಲ್ಲ

KannadaprabhaNewsNetwork |  
Published : Jul 21, 2025, 12:00 AM IST
ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಇನ್ನಿಲ್ಲ | Kannada Prabha

ಸಾರಾಂಶ

ರಾವಣ, ಮಹಿರಾವಣ, ಮಹಿಷಾಸುರ, ಶುಂಭ, ಕುಂಭಕರ್ಣ, ಶೂರ್ಪನಖಿ, ಪೂತನಿ, ಅಜಮುಖಿ, ಕಾಕಾಸುರ, ತಾರಕಾಸುರ, ಯಮಧರ್ಮ ಸಹಿತ ಎಲ್ಲ ರೀತಿಯ ಪುರುಷ ಹಾಗೂ ಹೆಣ್ಣು ಬಣ್ಣದ ವೇಷಗಳಲ್ಲಿ ಸಿದ್ದಕಟ್ಟೆಯವರು ಹೆಸರು ಮಾಡಿದವರು. ಸುಸ್ಪಷ್ಟ ಮಾತುಗಾರಿಕೆ, ಪರಂಪರೆಯ ಬಣ್ಣ, ಬಣ್ಣದ ವೇಷಕ್ಕೆ ಹೇಳಿ ಮಾಡಿಸಿದ ಅಂಗ ಸೌಷ್ಟವ, ಗಡಸು ಧ್ವನಿ ಹಾಗೂ ಪ್ರಸಿದ್ಧ ಬಣ್ಣದ ವೇಷಧಾರಿ ಬಣ್ಣದ ಮಾಲಿಂಗರಿಂದ ಕಲಿತ ವಿದ್ಯೆ ಅವರನ್ನು ಅಗ್ರಗಣ್ಯ ವೇಷಧಾರಿಯನ್ನಾಗಿ ರೂಪಿಸಿತು.

ಪ್ರಸಿದ್ಧ ಕಲಾವಿದ ಬಣ್ಣದ ಮಾಲಿಂಗರ ಪರಂಪರೆ ಮುಂದುವರಿಸಿದ ಹಿರಿಯ ಕಲಾವಿದ । ಅನಾರೋಗ್ಯದಿಂದ ನಿಧನಕನ್ನಡಪ್ರಭ ವಾರ್ತೆ ಬಂಟ್ವಾಳ

ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಬಣ್ಣದ ವೇಷಧಾರಿ ಎಂದೇ ಪ್ರಸಿದ್ಧಿ ಪಡೆದಿದ್ದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) ಅನಾರೋಗ್ಯದಿಂದ ಭಾನುವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಯಕ್ಷಗಾನ ಕ್ಷೇತ್ರದಲ್ಲಿ 40ಕ್ಕೂ ಹೆಚ್ಚಿನ ವರ್ಷ ವ್ಯವಸಾಯ ಮಾಡಿರುವ ಸದಾಶಿವ ಶೆಟ್ಟಿಗಾರ್, ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

1965 ಡಿ.17ರಂದು ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆಯಲ್ಲಿ ಬಾಬು ಶೆಟ್ಟಿಗಾರ್-ಗಿರಿಯಮ್ಮ ದಂಪತಿಯ ಪುತ್ರನಾಗಿ ಅವರು ಜನಿಸಿದರು. ಸಿದ್ದಕಟ್ಟೆ ಸೈಂಟ್ ಮೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದ ಅವರ ಯಕ್ಷಗಾನ ಆಸಕ್ತಿ ರಂಗಸ್ಥಳದ ವರೆಗೆ ಕರೆದೊಯ್ಯಿತು. ರೆಂಜಾಳ ರಾಮಕೃಷ್ಣ ರಾವ್, ಬಣ್ಣದ ಮಹಾಲಿಂಗ ಅವರ ಬಳಿ ವೇಷ, ನಾಟ್ಯ ಮತ್ತು ರಂಗದ ನಡೆಗಳ ಕುರಿತು ಕಲಿತ ಅವರು, ಇರಾ ಗೋಪಾಲಕೃಷ್ಣ ಭಾಗವತ, ಸುಣ್ಣಂಬಳ ವಿಶ್ವೇಶ್ವರ ಭಟ್, ಬೆಳ್ಳಾರೆ ಮಂಜುನಾಥ ಭಟ್ ಮತ್ತು ಹಿರಿಯ ಕಲಾವಿದರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡರು.

ಎರಡು ವರ್ಷ ಕಟೀಲು 2ನೇ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ ಆರಂಭಿಸಿದ ಬಳಿಕ ಕಟೀಲು 1ನೇ ಮೇಳದಲ್ಲಿ 8 ವರ್ಷ ಬಣ್ಣದ ವೇಷಧಾರಿಯಾಗಿ ತಿರುಗಾಟ ನಡೆಸಿದರು. ಬಳಿಕ 13 ವರ್ಷ ಧರ್ಮಸ್ಥಳ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ತಿರುಗಾಟ ನಡೆಸಿ, 18 ವರ್ಷ ಹೊಸನಗರ, ಎಡನೀರು ಮತ್ತು ಹನುಮಗಿರಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ.

ಸತೀಶ ನೈನಾಡು, ಶಬರೀಶ ಮಾನ್ಯ, ಮನೀಷ್ ಪಾಟಾಳಿ, ಮಧುರಾಜ್ ಪಾಟಾಳಿ, ಸುಬ್ರಹ್ಮಣ್ಯ ಭಟ್ ಬದಿಯಡ್ಕ, ಸಚಿನ್ ಪಾಟಾಳಿ, ಶ್ರೀಶ ಮಣಿಲ, ರಂಜಿತ್ ಗೋಳಿಯಡ್ಕ ಮೊದಲಾದವರಿಗೆ ಸದಾಶಿವ ಶೆಟ್ಟಿಗಾರರು ವಿದ್ಯಾದಾನ ಮಾಡಿದ್ದಾರೆ.

ರಾವಣ, ಮಹಿರಾವಣ, ಮಹಿಷಾಸುರ, ಶುಂಭ, ಕುಂಭಕರ್ಣ, ಶೂರ್ಪನಖಿ, ಪೂತನಿ, ಅಜಮುಖಿ, ಕಾಕಾಸುರ, ತಾರಕಾಸುರ, ಯಮಧರ್ಮ ಸಹಿತ ಎಲ್ಲ ರೀತಿಯ ಪುರುಷ ಹಾಗೂ ಹೆಣ್ಣು ಬಣ್ಣದ ವೇಷಗಳಲ್ಲಿ ಸಿದ್ದಕಟ್ಟೆಯವರು ಹೆಸರು ಮಾಡಿದವರು. ಸುಸ್ಪಷ್ಟ ಮಾತುಗಾರಿಕೆ, ಪರಂಪರೆಯ ಬಣ್ಣ, ಬಣ್ಣದ ವೇಷಕ್ಕೆ ಹೇಳಿ ಮಾಡಿಸಿದ ಅಂಗ ಸೌಷ್ಟವ, ಗಡಸು ಧ್ವನಿ ಹಾಗೂ ಪ್ರಸಿದ್ಧ ಬಣ್ಣದ ವೇಷಧಾರಿ ಬಣ್ಣದ ಮಾಲಿಂಗರಿಂದ ಕಲಿತ ವಿದ್ಯೆ ಅವರನ್ನು ಅಗ್ರಗಣ್ಯ ವೇಷಧಾರಿಯನ್ನಾಗಿ ರೂಪಿಸಿತು.

ಇತ್ತೀಚೆಗೆ ಮಂಗಳೂರು ವಿ.ವಿ.ಯಿಂದ ‘ಯಕ್ಷಮಂಗಳ’ ಪ್ರಶಸ್ತಿ ಸ್ವೀಕರಿಸಿದ್ದ ಅವರಿಗೆ ಹಲವು ಪ್ರಶಸ್ತಿ, ಸನ್ಮಾನಗಳು ಸಂದಿವೆ. ಭ್ರಾಮರಿ ಯಕ್ಷಮಣಿ ಪ್ರಶಸ್ತಿ, ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಹರೇಕಳ ಪಾವೂರು, ಬಿ.ಸಿ. ರೋಡಿನಲ್ಲಿ ಅಲ್ಲದೆ ಇನ್ನೂ ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.

ಬದುಕಿನ ಕೊನೆಯ ಪ್ರಶಸ್ತಿ ವಿ.ವಿ.ಯಿಂದ:

ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಎರಡು ವಾರಗಳ ಹಿಂದಷ್ಟೇ (ಜು.7) ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್ ಧರ್ಮ, ಕುಲಸಚಿವ ರಾಜು ಮೊಗವೀರ, ಜಾನಪದ ವಿದ್ವಾಂಸ ಪ್ರೊ. ಕೆ.ಚಿನ್ನಪ್ಪಗೌಡ ಸಮ್ಮುಖದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ದಯಾನಂದ ಪೈ ಸತೀಶ್ ಪೈ‌ ಯಕ್ಷಗಾನ ಅಧ್ಯಯನ ಕೇಂದ್ರ‌ ನೀಡುವ ಯಕ್ಷಮಂಗಳ ಪ್ರಶಸ್ತಿ ಸ್ವೀಕರಿಸಿದ್ದರು. ಅರ್ಜಿ ಸಲ್ಲಿಸದೇ ಗುರುತಿಸಿ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಈ ‘ಯಕ್ಷಮಂಗಳ ಪ್ರಶಸ್ತಿ’ ನನಗೆ ನೆಮ್ಮದಿ ನೀಡಿದೆ ಎಂದು ಭಾವುಕರಾಗಿ ಕಣ್ಣೀರಿಟ್ಟಿದ್ದರು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ವಿವಿ ಯಕ್ಷಗಾನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

PREV

Latest Stories

ಜಿಲ್ಲೆಯಲ್ಲಿ ಬೇಡಿಕೆಗಿಂತ ಹೆಚ್ಚು ಯೂರಿಯಾ ಪೂರೈಕೆ
ಕನ್ನಿಕಾ ಮಹಲ್‌ನಲ್ಲಿ ನಾಣ್ಯ, ನೋಟುಗಳ ಅಪೂರ್ವ ಪ್ರದರ್ಶನ
ಜಿ.ಎಸ್‌.ಟಿ ವಿರೋಧಿಸಿ ಪ್ರತಿಭಟನೆ