ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ವಾಟಾಳು ಶ್ರೀಗಳ 77ನೇ ಜನ್ಮ ದಿನ ಹಿನ್ನೆಲೆ ಶ್ರೀ ಮಠದ ಗದ್ದುಗೆಯಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ವಾಟಾಳು ಶ್ರೀಮಠದ ಭಕ್ತವೃಂದ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸರ್ವ ಧರ್ಮ ಸಮನ್ವಯತೆಯುಳ್ಳ ವಾಟಾಳು ಶ್ರೀಗಳಿಗೆ ತಾಲೂಕು ಸೇರಿದಂತೆ, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತಾದಿಗಳು ಹಾಗೂ ಜನಪ್ರತಿನಿಧಿಗಳು ಶುಭ ಕೋರಿದರು.ಮಠದ ಆವರಣದಲ್ಲಿ ಭಕ್ತ ವೃಂದವೇ ಸ್ವಾಮೀಜಿಗಳ 77ನೇ ವರ್ಷದ ಅಮೃತ ಮಹೋತ್ಸವವನ್ನು ಆಯೋಜಿಸಿ ಅರ್ಥಪೂರ್ಣ ಕಾರ್ಯಕ್ರಮವನ್ನಾಗಿಸಿತ್ತು.
ಬೆಳಗ್ಗೆಯಿಂದಲೇ ಶ್ರೀಮಠಕ್ಕೆ ಭಕ್ತಾದಿಗಳ ದಂಡೇ ಹರಿದು ಬಂದು, ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳಿಗೆ ಶುಭ ಕೋರಿ ಆಶೀರ್ವಾದ ಪಡೆದು ಕೊಂಡಿತು.ಶ್ರೀಗಳ ಜನ್ಮದಿನದ ಹಿನ್ನೆಲೆ ಮಠಕ್ಕೆ ಭೇಟಿ ನೀಡಿ ಶ್ರೀಗಳಿಗೆ ಶುಭ ಕೋರಿ ಆಶೀರ್ವಚನ ಪಡೆದ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ತಾಲೂಕಿನಲ್ಲಿ ನಡೆದಾಡುವ ದೇವರೆಂದೇ ಖ್ಯಾತರಾದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಾಗದೇ ಸರ್ವರನ್ನು ಸಮಾನತೆಯಿಂದ ಕಾಣುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ, ಯಾವುದೇ ಸಮಾಜದ ಸಣ್ಣ ಕಾರ್ಯಕ್ರಮಗಳಿದ್ದರೂ ಯಾವುದನ್ನು ಪ್ರಶ್ನಿಸದೇ, ಸಂತೋಷದಿಂದಲೇ ಬಂದು ಭಾಗವಹಿಸಿ ಆಶೀರ್ವಚನ ನೀಡುವ ಪರಿಪಾಠ ಬೆಳೆಸಿಕೊಂಡಿದ್ದರಿಂದಲೇ ಇವರು ತಾಲೂಕಿನಾದ್ಯಂತ ಭಕ್ತಾದಿಗಳ ಅಚ್ಚು ಮೆಚ್ಚಿನ ಸಂತರಾಗಿದ್ದಾರೆ ಎಂದು ಶ್ರೀಗಳ ಸರಳತೆಯನ್ನು ಬಣ್ಣಿಸಿದರು.
ಮಾಜಿ ಶಾಸಕ ನಂಜುಂಡಸ್ವಾಮಿ ಮಾತನಾಡಿ, ತಾಲೂಕಿನ ಮಠಗಳಲ್ಲಿ ವಾಟಾಳು ಮಠಕ್ಕೆ ವಿಶೇಷ ಸ್ಥಾನವಿದೆ. ವಾಟಾಳು ಶ್ರೀಗಳು ಸರಳತೆಯ ಮೂರ್ತಿಯಾಗಿದ್ದು, ಅಪಾರ ಭಕ್ತಾದಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದರು.ಹೊಸರು ಹುಂಡಿ ಮಠದ ರಾಜಶೇಖರ ಸ್ವಾಮೀಜಿ, ಚುಂಚನಹಳ್ಳಿ ಚನ್ನಬಸವ ಸ್ವಾಮೀಜಿ, ಬೆನಕನಹಳ್ಳಿ ಮಹದೇವ ಸ್ವಾಮೀಜಿ, ಶಾಂತಮಲ್ಲಿಕಾರ್ಜುನ ಸ್ವಾಮಿ, ಮಾಜಿ ಸಚಿವ ಎನ್. ಮಹೇಶ್, ಮಾಜಿ ಶಾಸಕರಾದ ಎಂ. ಅಶ್ವಿನ್ ಕುಮಾರ್, ಕೃಷ್ಣಪ್ಪ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಸತ್ಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ್, ವಕೀಲ ಪರಮೇಶ್, ಜ್ಞಾನೇಂದ್ರಮೂರ್ತಿ, ನಾಗೇಂದ್ರ ಪ್ರಸಾದ್, ಸಾಮ್ರಾಟ್ ಸುಂದರೇಶನ್, ಎಸ್.ಎಂ.ಆರ್. ಪ್ರಕಾಶ್, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಶಿವಮಲ್ಲಪ್ಪ, ಎಸ್.ಕೆ. ಕಿರಣ್ ಇತರರು ಇದ್ದರು.