ಡಾ.ಸಿದ್ದಲಿಂಗಯ್ಯರ ಹೊಲೆಮಾದಿಗರ ಹಾಡು ದಲಿತ ಸಮುದಾಯಕ್ಕೆ ಹೋರಾಟ ಗೀತೆ: ಸುಬ್ಬು ಹೊಲೆಯರ್

KannadaprabhaNewsNetwork |  
Published : Oct 10, 2024, 02:15 AM IST
9ಎಚ್‌ಪಿಟಿ6- ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ನಾಡೋಜ ಕವಿ ಡಾ.ಸಿದ್ದಲಿಂಗಯ್ಯ ಅವರ ಭಾವಚಿತ್ರಕ್ಕೆ ಚಿಂತಕ ಸುಬ್ಬು ಹೊಲೆಯರ್ , ರಮಾಕುಮಾರಿ ಸಿದ್ಧಲಿಂಗಯ್ಯ, ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಸೇರಿದಂತೆ ಗಣ್ಯರು ಪುಷ್ಪನಮನ ಸಲ್ಲಿಸಿದರು. | Kannada Prabha

ಸಾರಾಂಶ

ಡಾ.ಸಿದ್ದಲಿಂಗಯ್ಯ ಅವರ ಹೊಲೆಮಾದಿಗರ ಹಾಡು ಜನಸಾಮಾನ್ಯರ ಅಸಾಮಾನ್ಯ ಕಾವ್ಯ.

ಹೊಸಪೇಟೆ: ಡಾ.ಸಿದ್ದಲಿಂಗಯ್ಯ ಅವರ ಹೊಲೆಮಾದಿಗರ ಹಾಡು ಜನಸಾಮಾನ್ಯರ ಅಸಾಮಾನ್ಯ ಕಾವ್ಯ. ದಲಿತರ ಒಡಲಾಳದ ನೋವನ್ನು ಗ್ರಹಿಸಿ ರಚಿಸಿದ ಗೀತೆ ಇದಾಗಿದೆ. ರಾಷ್ಟ್ರಕ್ಕೆ ರಾಷ್ಟ್ರಗೀತೆಯಂತೆ ಈ ಹೊಲೆಮಾದಿಗರ ಹಾಡು ದಲಿತ ಸಮುದಾಯದ ಹೋರಾಟ ಗೀತೆಯಾಗಿ ಅವರನ್ನು ಎಚ್ಚರಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ಚಿಂತಕ ಸುಬ್ಬು ಹೊಲೆಯರ್ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ದಲಿತ ಸಂಸ್ಕೃತಿ ಅಧ್ಯಯನ ಪೀಠದಿಂದ ಬುಧವಾರ ಆಯೋಜಿಸಿದ್ದ ನಾಡೋಜ ಕವಿ ಡಾ.ಸಿದ್ದಲಿಂಗಯ್ಯ ಹೊಲೆಮಾದಿಗರ ಹಾಡು ಸಾಹಿತ್ಯ ಮತ್ತು ಸಾಮಾಜಿಕ ಪ್ರೇರಣೆ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಡಾ.ಸಿದ್ದಲಿಂಗಯ್ಯನವರು ಶತಮಾನಗಳಿಂದ ಧರ್ಮ, ದೇವರು, ಜಾತಿ ಹೆಸರಿನಲ್ಲಿ ತುಳಿತಕ್ಕೊಳಗಾಗಿದ್ದ ದಲಿತ ಸಮುದಾಯವನ್ನು ಹೊಲೆಮಾದಿಗರ ಹಾಡು ಕವನ ಸಂಕಲನದ ಮೂಲಕ ಬಡಿದ್ದೆಬ್ಬಿಸುವ ಕೆಲಸ ಮಾಡಿದರು. ನೊಂದವರ ನೋವು ನೋಯದವರೆತ್ತ ಬಲ್ಲರು ಎಂಬಂತೆ ಇತಿಹಾಸದಲ್ಲಿ ದಾಖಲಾಗಿರುವುದು ಬಹುತೇಕ ರಾಜ-ರಾಣಿಯರ ಚರಿತ್ರೆ. ಆದರೆ ಡಾ.ಸಿದ್ದಲಿಂಗಯ್ಯ ಬಂಡಾಯ ಸಾಹಿತ್ಯದ ಮೂಲಕ ಜನ ಸಾಮಾನ್ಯರ ಚರಿತ್ರೆಯನ್ನು ಕಟ್ಟುವ ಕೆಲಸ ಮಾಡಿದರು. ದಲಿತ ಹೋರಾಟದ ಮೂಲಕ ಇಡೀ ಸಮುದಾಯದ ಕಣ್ಣು ತೆರೆಸಿದರು. ಯುವ ಜನರು ಸಮಾಜದಲ್ಲಿ ಬೇರು ಬಿಟ್ಟಿರುವ ಸಾವಿರಾರು ಸಂಕೋಲೆಗಳಿಂದ ಮುಕ್ತರಾಗಿ ಬದುಕಬೇಕು. ವೈಚಾರಿಕ ಚಿಂತನೆಯನ್ನು ಬೆಳಸಿಕೊಳ್ಳಬೇಕು. ದಲಿತರ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ, ಅಹಿಂಸಾತ್ಮಕ ಹೋರಾಟಕ್ಕೆ ಸಿದ್ಧರಾಗಬೇಕು ಎಂದರು.

ರಮಾಕುಮಾರಿ ಸಿದ್ದಲಿಂಗಯ್ಯ ಮಾತನಾಡಿ, ಡಾ.ಸಿದ್ದಲಿಂಗಯ್ಯನವರು ನೊಂದವರನ್ನು, ಶೋಷಿತರನ್ನು ಎಚ್ಚರಿಸುವ ಮೂಲಕ ಸದಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇಂದು ಅವರು ನಮ್ಮ ಜೊತೆಯಿಲ್ಲದಿದ್ದರೂ ಅವರ ಪುಸ್ತಕಗಳ ಮೂಲಕ, ಕೆಲಸಗಳ ಮೂಲಕ ಜೀವಂತವಾಗಿದ್ದಾರೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸೋಮಶೇಖರ್ ಬಣ್ಣದ ಮನೆ ಮಾತನಾಡಿ, ಡಾ. ಸಿದ್ದಲಿಂಗಯ್ಯನವರು ನಡೆಸಿದ್ದ ಸಾಮಾಜಿಕ ಸಮಾನತೆ ಮೂಡಿಸುವ ಕೆಲಸವನ್ನು ಪ್ರಸ್ತುತ ಯುವಜನತೆ ಮುನ್ನಡೆಸಬೇಕು ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಸಿದ್ದಲಿಂಗಯ್ಯನವರು ಸಮಾಜಕ್ಕೆ ಮಾನವೀಯತೆಯನ್ನು ಹೇಳಿಕೊಟ್ಟ ಕವಿ. ಇಡೀ ದಲಿತ ಸಮುದಾಯಕ್ಕೆ ಘನತೆಯಿಂದ ಬದುಕಲು ಆತ್ಮಸ್ಥೈರ್ಯ ತುಂಬಿದ ಚೇತನ. ಈ ಹಿನ್ನೆಲೆಯಲ್ಲಿ ಹೊಲೆಮಾದಿಗರ ಹಾಡು ಸಂಕಲನದ ಪ್ರಸ್ತುತತೆಯನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಬಹುಮುಖ್ಯ ಎಂದರು.

ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಡಾ.ಚಿನ್ನಸ್ವಾಮಿ ಸೋಸಲೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಿದ್ದಲಿಂಗಯ್ಯನವರ ಹೊಲೆಮಾದಿಗರ ಹಾಡು ದಲಿತ ಸಮುದಾಯದ ಸಂವೇದನೆಯನ್ನು ಪ್ರತಿನಿಧಿಸಿತು. ಈ ಹಾಡು ಹಲವಾರು ಪ್ರಜ್ಞಾವಂತರನ್ನು ಹುಟ್ಟುಹಾಕಿತು ಎಂದರು.

ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ, ಚರಿತ್ರೆ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಸಂಶೋಧನಾರ್ಥಿ ಮಣಿಕಂಠ ಹಂಗಳ, ನಗರದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ ಪತ್ತಾರ ಅವರು ಡಾ.ಸಿದ್ದಲಿಂಗಯ್ಯನವರ ಹೊಲೆಮಾದಿಗರ ಹಾಡು ಕವನ ಸಂಕಲನದ ಕೆಲವು ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ನಾಡೋಜ ಕವಿ ಡಾ.ಸಿದ್ದಲಿಂಗಯ್ಯ ಅವರ ಭಾವಚಿತ್ರಕ್ಕೆ ಚಿಂತಕ ಸುಬ್ಬು ಹೊಲೆಯರ್, ರಮಾಕುಮಾರಿ ಸಿದ್ಧಲಿಂಗಯ್ಯ, ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಸೇರಿದಂತೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

PREV

Recommended Stories

ವಿಕ್ಟೋರಿಯಾ ಆಸ್ಪತ್ರೆಗೆ ಸಿದ್ದರಾಮಯ್ಯ ದಿಢೀರ್ ಭೇಟಿ
ಇಂದು ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ : ಇಲ್ಲೆಲ್ಲಾ ವಾಹನಗಳಿಗೆ ನಿಷೇಧ