ಸಿದ್ದಲಿಂಗೇಶ್ವರ ಶಾಲೆ ಶಿಕ್ಷಕ, ಸಿಬ್ಬಂದಿ ವರ್ಗದಿಂದ ಶಿಕ್ಷಣ ಪ್ರೇಮ

KannadaprabhaNewsNetwork | Published : Aug 12, 2024 1:01 AM

ಸಾರಾಂಶ

ಶಿಕಾರಿಪುರದ ದೊಡ್ಡಪೇಟೆ ಸಿದ್ದಲಿಂಗೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಶಿಕ್ಷಕ ವರ್ಗ ವೈಯುಕ್ತಿಕವಾಗಿ ನೀಡಿದ ₹1 ಸಾವಿರ ಮೌಲ್ಯದ ಭದ್ರತಾ ಠೇವಣಿ ಬಾಂಡ್‌ನ್ನು ಬಿಇಒ ಲೋಕೇಶ್ ವಿತರಿಸಿದರು

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸರ್ಕಾರಿ ಶಾಲೆ ಬಗ್ಗೆ ತಾತ್ಸಾರ ಮನೋಭಾವ ಹೊಂದಿರುವವರು ಹೆಚ್ಚಾಗಿರುವ ಈ ದಿನದಲ್ಲಿ ಸದಾಕಾಲ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹಲವು ಹೊಸ ಹೊಸ ಕಾರ್ಯಕ್ರಮ ಆಯೋಜಿಸುವ ಮೂಲಕ ಹೆಚ್ಚು ಪ್ರಸಿದ್ಧವಾಗಿರುವ ಇಲ್ಲಿನ ದೊಡ್ಡಪೇಟೆ ಸಿದ್ದಲಿಂಗೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿಬ್ಬಂದಿ ಇದೀಗ ಮಕ್ಕಳಿಗೆ ವೈಯುಕ್ತಿಕ ತಲಾ ₹1 ಸಾವಿರ ಠೇವಣಿ ಬಾಂಡ್ ನೀಡುವ ಮೂಲಕ ಶಿಕ್ಷಣ ಪ್ರೇಮ ಮೆರೆದಿದ್ದಾರೆ.

ಸರ್ಕಾರಿ ಶಾಲೆ ಬಗ್ಗೆ ಇತ್ತೀಚಿನ ವರ್ಷದಲ್ಲಿ ಪೋಷಕರಿಗೆ ತಾತ್ಸಾರ ಮನೋಭಾವ ಹೆಚ್ಚಿದ್ದು, ಖಾಸಗಿ ಶಾಲೆಗಳಿಗೆ ಪೈಪೋಟಿ ಮೇಲೆ ಲಕ್ಷಾಂತರ ಹಣ ನೀಡಿ ದಾಖಲಿಸಿ ಮಕ್ಕಳಿಂದ ಅತಿ ಹೆಚ್ಚು ಫಲಿತಾಂಶ ನಿರೀಕ್ಷಿಸುವ ಪೋಷಕರ ಸಂಖ್ಯೆ ಹೆಚ್ಚುತ್ತಿರುವ ಈ ದಿನದಲ್ಲಿ ಸಿದ್ದಲಿಂಗೇಶ್ವರ ಸಹಿಪ್ರಾ ಶಾಲೆಯಲ್ಲಿ ಮುಖ್ಯ ಶಿಕ್ಷಕ ಜಬೀವುಲ್ಲಾ ನೇತೃತ್ವದ ಶಿಕ್ಷಕ ಸಿಬ್ಬಂದಿ ವರ್ಗ ಸದಾಕಾಲ ಶಾಲೆ ಪ್ರಗತಿ ಮಕ್ಕಳ ಶೈಕ್ಷಣಿಕ ಏಳಿಗೆ ಬಗ್ಗೆ ಚಿಂತಿಸಿ ಕ್ರಿಯಾಶೀಲತೆ ಮೂಲಕ ಹೊಸ ಕಳೆ ತಂದಿದ್ದಾರೆ.

ಶಾಲೆ ಸುತ್ತಮುತ್ತ ವಾತಾವರಣವನ್ನು ಹಸಿರುಮಯವಾಗಿಸಿ, ಮಕ್ಕಳಿಗೆ ತರಕಾರಿ ಬೆಳೆಯುವ ಬಗ್ಗೆ ಪ್ರೇರೇಪಿಸುವ ಸಿಬ್ಬಂದಿ ವರ್ಗ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಶಾಲೆಗೆ ಸಿಸಿಟಿವಿ ಸಹಿತ ಹಲವು ಪೀಠೋಪಕರಣ ಅಳವಡಿಸಿ, ಸಾರ್ವಜನಿಕರ ಸಹಭಾಗಿತ್ವದಿಂದ ಶಾಲೆ ಬಗ್ಗೆ ಆಸಕ್ತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ ಒಂದನೇ ತರಗತಿಗೆ ದಾಖಲಾದ 32 ಮಕ್ಕಳಿಗೆ ವೈಯುಕ್ತಿಕವಾಗಿ ತಲಾ ₹1 ಸಾವಿರ ಮೌಲ್ಯದ ಭದ್ರತಾ ಠೇವಣಿ ಬಾಂಡ್ ವಿತರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈ ಕಾರ್ಯದಿಂದ ಸಮಾಜದಲ್ಲಿನ ಎಲ್ಲ ವರ್ಗದ ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಉತ್ತೇಜಿಸುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಇತ್ತೀಚೆಗೆ ನಡೆದ ಬಾಂಡ್ ವಿತರಣಾ ಕಾರ್ಯಕ್ರಮದಲ್ಲಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಪಾಲ್ಗೊಂಡು ಶಾಲೆ ಬಗ್ಗೆ ಅತೀವ ಮೆಚ್ಚುಗೆ ಸೂಚಿಸುವ ಜತೆಗೆ ಶಿಕ್ಷಕರ ಕಾರ್ಯವೈಖರಿ ಶ್ಲಾಘಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಆಗಮಿಸಿ ಭೇಟಿ ನೀಡಿದ ಪ್ರಥಮ ಶಾಲೆ ಅಚ್ಚುಕಟ್ಟಾಗಿದ್ದು, ಸರ್ಕಾರಿ ಅನುದಾನ ಅವಲಂಬಿಸದೆ ಸಾರ್ವಜನಿಕರ ಜತೆಗೆ ವೈಯುಕ್ತಿಕವಾಗಿ ಸಿಬ್ಬಂದಿ ವರ್ಗ ಕೈಗೊಂಡ ಹೊಸ ಹೊಸ ಅಭಿವೃದ್ಧಿ ಕಾರ್ಯ ಮಾದರಿಯಾಗಿದೆ ಎಂದರು. ಲಕ್ಷಾಂತರ ಹಣ ನೀಡಿ ಖಾಸಗಿ ಶಾಲೆಗೆ ದಾಖಲಿಸುವ ಪೋಷಕರಿಗೆ ದೊರೆಯದ ಹಲವು ಸೌಲಭ್ಯ ಇಲ್ಲಿ ಕಲ್ಪಿಸಲಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಅಗತ್ಯ ಪೂರಕ ಶಿಕ್ಷಣ ನೀಡಲಾಗುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿ, ಇದೀಗ ವೈಯುಕ್ತಿಕವಾಗಿ ಮಕ್ಕಳಿಗೆ ₹1 ಸಾವಿರ ಮೌಲ್ಯದ ಭದ್ರತಾ ಠೇವಣಿ ಬಾಂಡ್ ವಿತರಿಸಿ ಪೋಷಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ದಾಖಲಿಸುವಂತೆ ಉತ್ತೇಜನೆ ನೀಡುತ್ತಿರುವುದು ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು.

ಪೋಷಕರು ಅನಗತ್ಯ ಖರ್ಚು ವೆಚ್ಚಗಳಿಗೆ ಅಂತ್ಯಹಾಡಿ ಬಿಡುವಿನ ವೇಳೆ ಶಾಲೆಗೆ ಭೇಟಿ ನೀಡಿ ಅಗತ್ಯವಿರುವ ಕಾರ್ಯಗಳಿಗೆ ಸ್ಪಂದಿಸುವಂತೆ ತಿಳಿಸಿದ ಅವರು ಶಾಲೆ ಅಭಿವೃದ್ಧಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಲ್ಲ ರೀತಿಯಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದರು.

ಮುಖ್ಯ ಶಿಕ್ಷಕ ಜಬೀವುಲ್ಲಾ ಮಾತನಾಡಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರ ಸಹಕಾರದಿಂದ ಜನಪ್ರತಿನಿಧಿಗಳ ನಿಧಿಯಡಿ ₹64 ಲಕ್ಷ ಅನುದಾನ ಮಂಜೂರಾಗಿದ್ದು ದಾನಿಗಳಿಂದ ₹15 ಲಕ್ಷ ಸಂಗ್ರಹಿಸಿ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ. ನಮ್ಮ ಶಾಲೆಯಲ್ಲಿ ಬಾಹ್ಯದ ಜತೆಗೆ ಆಂತರಿಕ ಸೌಂದರ್ಯ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ನಿಸ್ವಾರ್ಥವಾಗಿ ಸಿಬ್ಬಂದಿ ವರ್ಗ ಶ್ರಮಿಸುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಸಂಘದ ಗೌರವಾಧ್ಯಕ್ಷ ಬಿ.ಆರ್ ಮಂಜಪ್ಪ, ಶಾಲಾ ಸಮನ್ವಯ ಅಧಿಕಾರಿ ಲೀಲಾವತಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಜಬೀವುಲ್ಲಾರವರಿಗೆ ರಾಜ್ಯ ಪ್ರಶಸ್ತಿಗೆ ಶಿಫಾರಸ್ಸುಗೊಳಿಸುವಂತೆ ಆಗ್ರಹಿಸಿ ಶಿಕ್ಷಕ ವರ್ಗ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಬಿಇಒಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಪುರಸಭಾ ಸದಸ್ಯ ರೇಣುಕಸ್ವಾಮಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಲೀಂ, ರೇಣುಕಮ್ಮಾ, ನಿವೃತ್ತ ಮುಖ್ಯ ಶಿಕ್ಷಕ ಸುಭಾಷಚಂದ್ರ ಸ್ಥಾನಿಕ್, ಎಂ.ಜಿ ಪ್ರಕಾಶ್, ಹಿರಿಯ ಶಿಕ್ಷಕಿ ಸಾವಿತ್ರಮ್ಮ, ಗಾಯತ್ರಿ, ರೇಖಾ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕ ಮಂಜುನಾಥ್ ಸ್ವಾಗತಿಸಿ, ಶಿಲ್ಪಾ ನಿರೂಪಿಸಿ, ವಂದಿಸಿದರು.

Share this article