ಸಿದ್ದಾಪುರ ಮಾರ್ಕೆಟಿಂಗ್‌ ಸೊಸೈಟಿಗೆ 5.5 ಕೋಟಿ ಲಾಭ: ಆರ್.ಎಂ. ಹೆಗಡೆ ಬಾಳೇಸರ

KannadaprabhaNewsNetwork | Published : Jun 23, 2025 11:47 PM

೨೦೨೪-೨೫ನೇ ಸಾಲಿನಲ್ಲಿ ಲಾಭದಲ್ಲಿ ಸದಸ್ಯರಿಗೆ ಶೇ.೧೫ ಡಿವಿಡೆಂಡ್ ಹಂಚಿಕೆ ಮಾಡಲು ಆಡಳಿತ ಮಂಡಳಿಯು ನಿರ್ಣಯಿಸಿದೆ

ಸಿದ್ದಾಪುರ: ತಾಲೂಕು ಮಾರ್ಕೆಟಿಂಗ್ ಸೊಸೈಟಿ ೨೦೨೪-೨೫ನೇ ಆರ್ಥಿಕ ವರ್ಷದಲ್ಲಿ ₹5.5 ಕೋಟಿ ನಿಕ್ಕಿ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತಾಲೂಕಿನ ಅಡಕೆ ಬೆಳೆಗಾರರ ಹೆಮ್ಮೆಯ ಸಂಸ್ಥೆಯಾದ ತಾಲೂಕು ಮಾರ್ಕೆಟಿಂಗ್ ಸೊಸೈಟಿ ೭೮ ಸಾರ್ಥಕ ವಸಂತಗಳನ್ನು ಪೂರೈಸಿ ೭೯ನೇ ವರ್ಷದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಸಂಸ್ಥೆಯ ಕಾನಸೂರು ಹಾಗೂ ಶಿರಸಿಯಲ್ಲಿ ಶಾಖೆಗಳಲ್ಲಿ ಕಳೆದ ಸಾಲಿನಲ್ಲಿ ದಾಖಲೆಯ ೬೩,೧೨೭ ಕ್ವಿಂಟಲ್ ಅಡಕೆ, ೪೮೯ ಕ್ವಿಂಟಲ್ ಮೆಣಸು ಹಾಗೂ ೧,೦೧೪ ಕ್ವಿಂಟಲ್ ಹಸಿ ಅಡಕೆ ವಿಕ್ರಿ ಮಾಡಿದ್ದು, ಸಂಘದ ವಹಿವಾಟು ₹೨೩೪.೦೧ ಕೋಟಿ ಆಗಿದೆ. ದುಡಿಯುವ ಬಂಡವಾಳ ₹೨೩೭.೨೦ ಕೋಟಿಗೂ ಅಧಿಕವಾಗಿದೆ. ಸಂಚಿತ ನಿಧಿಗಳ ಮೊತ್ತ ₹೬೬.೮೪ ಕೋಟಿಯಷ್ಟಿದ್ದು, ₹೧೧೭.೫೮ ಕೋಟಿ ಠೇವು ಸಂಗ್ರಹಿಸಲಾಗಿದೆ. ಕೃಷಿ ವಿಭಾಗದಲ್ಲಿ ಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣ ಹಾಗೂ ಪ್ಲಾಸ್ಟಿಕ್ ಸಾಮಗ್ರಿ ಸೇರಿ ₹೬.68 ಕೋಟಿಗಳ ವಿಕ್ರಿ ವ್ಯವಹಾರ ಮಾಡಲಾಗಿದೆ. ಕಿರಾಣಿ ಹಾಗೂ ಎಪಿಎಂಸಿ ವಿಭಾಗ ಸಹಿತ ₹೫.೬೪ ಕೋಟಿ, ಔಷಧಿ ವಿಭಾಗದಲ್ಲಿ ₹೬೪.೧೭ ಲಕ್ಷ, ಕಟ್ಟಡ ನಿರ್ಮಾಣ ವಿಭಾಗದಲ್ಲಿ ₹೫೫.೯೫ ಲಕ್ಷಗಳಿಗೂ ಅಧಿಕ ವಿಕ್ರಿ ವ್ಯವಹಾರವಾಗಿದೆ ಎಂದು ವಿವರಿಸಿದರು.

ಈ ಆರ್ಥಿಕ ವರ್ಷದಲ್ಲಿ ಕೇಂದ್ರ ಕಚೇರಿಯಲ್ಲಿ ₹೪.೨೨ ಕೋಟಿ, ಕಾನಸೂರ ಶಾಖೆಯಲ್ಲಿ ₹೩೬.೪೫ ಲಕ್ಷ, ಮಾರಾಟ ಮಳಿಗೆ ಶಿರಸಿಯಲ್ಲಿ ₹೧.೦೫ ಕೋಟಿ, ಕೃಷಿ ವಿಭಾಗದಲ್ಲಿ ₹೨೦.೬೧ ಲಕ್ಷ, ದವಸಧಾನ್ಯ ವಿಭಾಗದಲ್ಲಿ ₹೧೫.೩೨ ಲಕ್ಷ, ಸೇವಾ ವಿಭಾಗದಲ್ಲಿ ₹೭.೨ ಸಾವಿರ ಲಾಭ ಗಳಿಸಿದೆ. ಔಷಧಿ ವಿಭಾಗದಲ್ಲಿ ₹೨.೧೧ ಲಕ್ಷ, ಅಡಕೆ ಖರೀದಿ ವಿಭಾಗದಲ್ಲಿ ₹೧೩.೨೧ ಲಕ್ಷ., ದವಸ ಧಾನ್ಯ ಎಪಿಎಂಸಿ ವಿಭಾಗದಲ್ಲಿ ₹೪.೬೩ ಲಕ್ಷ, ನಿಯಂತ್ರಣ ವಿಭಾಗದಲ್ಲಿ ₹೧.೯೮ ಲಕ್ಷ, ಅಕ್ಕಿ ಗಿರಣಿ ವಿಭಾಗದಲ್ಲಿ ₹೨.೮೦ ಲಕ್ಷ ಹಾಗೂ ಕಟ್ಟಡ ಸಾಮಗ್ರಿ ವಿಭಾಗದಲ್ಲಿ ₹೨೦.೦೮ ಲಕ್ಷ ಹಾನಿ ಅನುಭವಿಸಿದ್ದು, ಒಟ್ಟಾರೆ ₹೫.೫೫ ಕೋಟಿ ನಿಕ್ಕಿ ಲಾಭ ಗಳಿಸಿದೆ ಎಂದರು.

೨೦೨೪-೨೫ನೇ ಸಾಲಿನಲ್ಲಿ ಲಾಭದಲ್ಲಿ ಸದಸ್ಯರಿಗೆ ಶೇ.೧೫ ಡಿವಿಡೆಂಡ್ ಹಂಚಿಕೆ ಮಾಡಲು ಆಡಳಿತ ಮಂಡಳಿಯು ನಿರ್ಣಯಿಸಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಜಿ. ನಾಯ್ಕ, ವ್ಯವಸ್ಥಾಪಕ ಸತೀಶ ಹೆಗಡೆ, ನಿರ್ದೇಶಕರಾದ ಕೆ.ಕೆ. ನಾಯ್ಕ, ಗಣಪತಿ ಎನ್. ಹಸ್ಲರ್, ಇಂದಿರಾ ಭಟ್ಟ, ಜಿ.ಎಂ. ಭಟ್ಟ, ಎಂ.ಎನ್. ಹೆಗಡೆ, ಸುಧೀರ ಗೌಡರ್, ಸುಬ್ರಹ್ಮಣ್ಯ ಭಟ್ಟ, ಪರಶುರಾಮ ನಾಯ್ಕ, ಕೆ.ಆರ್. ವಿನಾಯಕ ಇದ್ದರು.

28ರಂದು ವಾರ್ಷಿಕ ಸಭೆ

ತಾಲೂಕು ಮಾರ್ಕೆಟಿಂಗ್ ಸೊಸೈಟಿಯ ವಾರ್ಷಿಕ ಸಾಧಾರಣ ಸಭೆ ಜೂ.೨೮ರಂದು ಮಧ್ಯಾಹ್ನ ೩ಕ್ಕೆ ಪ್ರಧಾನ ಕಚೇರಿಯ ವ್ಯಾಪಾರಾಂಗಣದಲ್ಲಿ ಜರುಗಲಿದೆ. ಜೂ.೨೪ರ ಮಧ್ಯಾಹ್ನ ೩ಕ್ಕೆ ಶಿರಸಿ ಮಾರಾಟ ಮಳಿಗೆಯಲ್ಲಿ ಹಾಗೂ ಜೂ.೨೬ರ ಸಂಜೆ ೫ಕ್ಕೆ ಕಾನಸೂರು ಶಾಖೆ ಕಾರ್ಯಾಲಯದಲ್ಲಿ ಸಹಕಾರಿ ಸಭೆ ಜರುಗಲಿದೆ. ಈ ಸಂದರ್ಭದಲ್ಲಿ ಕೆಲವು ಆಯ್ದ ಹಿರಿಯ ಸದಸ್ಯರನ್ನು ಹಾಗೂ ಎಸ್‌ಎಸ್‌ಎಲ್‌ಸಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ. ನಂತರ ಶ್ರೀಕೃಷ್ಣ ಸಂಧಾನ ಹಾಗೂ ಗದಾಯುದ್ಧ ಸಮಯಮಿತಿ ಪೌರಾಣಿಕ ಯಕ್ಷಗಾನ ಪ್ರದರ್ಶನವಿದೆ.