ಕನ್ನಡಪ್ರಭ ವಾರ್ತೆ ಹಾಸನ
ಶಿಷ್ಟಾಚಾರದ ಹೆಸರಿನಲ್ಲಿ ಗಣ್ಯರ ದರ್ಶನಕ್ಕೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿರುವ ಜಿಲ್ಲಾಡಳಿತವೇ, ಅದೇ ನಿಯಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಪಾಲಿಸದೆ ವಿಶೇಷ ಅವಕಾಶ ಕಲ್ಪಿಸಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಶುಕ್ರವಾರ ಸಂಜೆ ಸುಮಾರು 6.30 ರ ವೇಳೆಗೆ ಸಿದ್ದರಾಮಯ್ಯ ಅವರು ವಿಶೇಷ ವಾಹನದಲ್ಲಿ ಹಾಸನಾಂಬೆ ದೇವಸ್ಥಾನದ ಮುಖ್ಯ ದ್ವಾರದ ಮೂಲಕವೇ ಒಳಪ್ರವೇಶಿಸಿದರು. ಸಾವಿರ ರೂಪಾಯಿ ವಿಶೇಷ ಟಿಕೆಟ್ ಪಡೆದು ದೇವಿಯ ದರ್ಶನಕ್ಕೆ ಆಗಮಿಸಿದ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಹಾಗೂ ಸಂಸದ ಶ್ರೇಯಸ್ ಎಂ. ಪಟೇಲ್ ಸಾಥ್ ನೀಡಿದರು. ಜಿಲ್ಲಾಡಳಿತದ ಅಧಿಕಾರಿಗಳು ಕೂಡ ಮಾಜಿ ಮುಖ್ಯಮಂತ್ರಿಗಳನ್ನು ಸ್ವಾಗತಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಿದರು. ವಿಶೇಷವೆಂದರೆ, ಹಾಸನಾಂಬೆ ದರ್ಶನೋತ್ಸವದಲ್ಲಿ ಗಣ್ಯರಿಗೆ ಶಿಷ್ಟಾಚಾರದಡಿ ದರ್ಶನ ಪಡೆಯಲು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಮಾತ್ರ ಅವಕಾಶ ನಿಗದಿಪಡಿಸಲಾಗಿತ್ತು. ಆದರೆ, ಈ ಸಮಯ ಮುಗಿದು ಹಲವು ಗಂಟೆಗಳ ಬಳಿಕ ಸಂಜೆ 6.30 ಕ್ಕೆ ಸಿದ್ದರಾಮಯ್ಯ ಅವರಿಗೆ ವಿಶೇಷ ಪ್ರವೇಶ ಕಲ್ಪಿಸಿರುವುದು ಶಿಷ್ಟಾಚಾರದ ವಿಷಯದಲ್ಲಿ ಜಿಲ್ಲಾಡಳಿತದ ದ್ವಂದ್ವ ನಿಲುವುಗಳ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ಸೂಚನೆಯ ಮೇರೆಗೆ ಅಧಿಕಾರಿಗಳು ಈ ವಿಶೇಷ ವ್ಯವಸ್ಥೆ ಕಲ್ಪಿಸಿದ್ದಾರೆ ಎನ್ನಲಾಗಿದ್ದು, ಶಿಷ್ಟಾಚಾರದ ದರ್ಶನದ ಸಮಯದಲ್ಲೇ ಶಿಷ್ಟಾಚಾರದ ವಾಹನ ಬಿಟ್ಟು ಸರ್ಕಾರಿ ಕಾರಿನಲ್ಲಿ ಬಂದ ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಸಿಬ್ಬಂದಿ ಗೇಟಿನಲ್ಲೇ ತಡೆದಿದ್ದರಿಂದ ಸಚಿವರು ಕಾರು ಇಳೀದು ನಡೆದುಕೊಂಡು ಹೋಗುವಂತಾಗಿತ್ತು. ಸಿಬ್ಬಂದಿಗಳ ಈ ಕರ್ತವ್ಯನಿಷ್ಟೆ ಸಾಮಾನ್ಯ ಭಕ್ತರ ಮೆಚ್ಚುಗೆಗೆ ಕಾರಣವಾಗಿತ್ತು. ಆದರೆ, ಅಷ್ಟರಲ್ಲೇ ಸಿಬ್ಬದಿಗಳ ಇಂತಹ ಕರ್ತವ್ಯಲೋಪ ಅದೇ ಭಕ್ತರ ಕೆಂಗಣ್ಣಿಗೂ ಕಾರಣವಾಗಿದೆ.