ಸೊಂಟದಲ್ಲಿ ಗನ್‌ ಇರಿಸಿಕೊಂಡು ಕಾಂಗ್ರೆಸ್‌ ಕಾರ್ಯಕರ್ತನಿಂದ ಸಿಎಂಗೆ ಹಾರ

KannadaprabhaNewsNetwork | Updated : Apr 09 2024, 04:16 AM IST

ಸಾರಾಂಶ

ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಭಾರೀ ಭದ್ರತಾ ಲೋಪವುಂಟಾಗಿದ್ದು, ಝಡ್‌ ಭದ್ರತೆ ಇರುವ ಸಿಎಂ ಬಳಿ ತಪಾಸಣೆ ಮಾಡದೇ ಬಿಟ್ಟ ಬಗ್ಗೆ ಟೀಕೆ ವ್ಯಕ್ತವಾಗಿದೆ.

 ಬೆಂಗಳೂರು :  ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಪ್ರಚಾರ ಮಾಡುವಾಗ ಭದ್ರತಾಲೋಪವಾಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ವಿಲ್ಸನ್‌ ಗಾರ್ಡನ್‌ ಬಳಿ ಸೋಮವಾರ ತೆರೆದ ವಾಹನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ಸಿದ್ದಾಪುರದ ಕಾಂಗ್ರೆಸ್‌ ಕಾರ್ಯಕರ್ತ ರಿಯಾಜ್‌ ಎಂಬಾತ ಸೊಂಟದಲ್ಲಿ ಗನ್‌ ಇರಿಸಿಕೊಂಡು ಪ್ರಚಾರದ ವಾಹನ ಏರಿ ಮುಖ್ಯಮಂತ್ರಿ ಸಿದ್ದರಾಯ್ಯ ಅವರಿಗೆ ಹಾರ ಹಾಕಿದ್ದಾನೆ. ಹಾರ ಹಾಕುವಾಗ ಸೊಂಟದಲ್ಲಿ ಗನ್‌ ಇರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮುಖ್ಯಮಂತ್ರಿಗಳಿಗೆ ಝಡ್‌ ಶ್ರೇಣಿಯ ಭದ್ರತೆ ಇರುತ್ತದೆ. ಮುಖ್ಯಮಂತ್ರಿ ಬಳಿ ಯಾರೇ ಹೋಗಬೇಕಾದರೂ ತಪಾಸಣೆ ಮಾಡಿದ ಬಳಿಕವಷ್ಟೇ ಬಿಡಲಾಗುತ್ತದೆ. ಆದರೆ, ಪ್ರಚಾರದ ವೇಳೆ ರಿಯಾಜ್‌ ತನ್ನ ಬಳಿ ಗನ್ ಇರಿಸಿಕೊಂಡ ಮುಖ್ಯಮಂತ್ರಿಗೆ ಹಾರ ಹಾಕಿದ್ದಾನೆ. ಹೀಗಾಗಿ ಭದ್ರತಾ ವೈಫಲ್ಯದ ಆರೋಪ ಕೇಳಿ ಬಂದಿದೆ.

ರಿಯಾಜ್‌ ವಿಚಾರಣೆ:

ಗನ್‌ ವಿಚಾರ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ನಗರ ಪೊಲೀಸ್‌ ಆಯಕ್ತರ ಸೂಚನೆ ಮೇರೆಗೆ ಹೆಚ್ಚುವರಿ ಪೊಲೀಸ್‌ ಆಯುಕ್ತ ಸತೀಶ್‌ಕುಮಾರ್‌ ಮತ್ತು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್‌ ಭರಮಪ್ಪ ಅವರು ಕಾಂಗ್ರೆಸ್‌ ಕಾರ್ಯಕರ್ತ ರಿಯಾಜ್‌ನನ್ನು ವಿಚಾರಣೆ ಮಾಡಿದ್ದಾರೆ. ರಿಯಾಜ್‌ ಬಳಿ ಇರುವುದು ಪರವಾನಗಿ ಗನ್‌. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಪರವಾನಗಿ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸ್‌ ಠಾಣೆಗೆ ಠೇವಣಿ ಇರಿಸಬೇಕು. ಆದರೆ, ರಿಯಾಜ್‌ ತಮಗೆ ಪ್ರಾಣ ಬೆದರಿಕೆ ಇರುವ ವಿಚಾರ ತಿಳಿಸಿ ವಿನಾಯಿತಿ ಪಡೆದು ಗನ್‌ನನ್ನು ತನ್ನ ಬಳಿಯೇ ಇರಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

ಪೊಲೀಸರ ಮೇಲೆ ಶಿಸ್ತು ಕ್ರಮ?

ಮುಖ್ಯಮಂತ್ರಿಗಳ ಪ್ರಚಾರ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಇದೀಗ ಭದ್ರತಾ ಲೋಪದ ಆರೋಪಕ್ಕೆ ಗುರಿಯಾಗಿದ್ದಾರೆ. ರಿಯಾಜ್‌ನನ್ನು ತಪಾಸಣೆ ಮಾಡಿದೆ ಪ್ರಚಾರ ವಾಹನ ಏರಲು ಅವಕಾಶ ನೀಡಲಾಗಿದೆ. ಹೀಗಾಗಿ ಮುಖ್ಯಮಂತ್ರಿಗಳ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಶಿಸ್ತು ಕ್ರಮ ಭೀತಿ ಎದುರಾಗಿದೆ. ಈ ಘಟನೆಯಿಂದ ಹಿರಿಯ ಪೊಲೀಸ್‌ ಅಧಿಕಾರಿಗಳು ಮುಜುಗರಕ್ಕೆ ಒಳಗಾಗಿದ್ದಾರೆ. ಹೀಗಾಗಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Share this article