ಬಿಬಿಎಂಪಿಗೆ ₹68 ಕೋಟಿ ನೀಡದೆ ವಂಚಿಸಿದ ಸಿದ್ದರಾಮಯ್ಯ ಸರ್ಕಾರ : ಬಿಜೆಪಿ ಮುಖಂಡ ಎನ್.ಆರ್‌.ರಮೇಶ್‌ ಆರೋಪ

KannadaprabhaNewsNetwork |  
Published : Sep 14, 2024, 01:59 AM ISTUpdated : Sep 14, 2024, 09:38 AM IST
District President NR Ramesh

ಸಾರಾಂಶ

ಬಸ್‌ ನಿಲ್ದಾಣಗಳಲ್ಲಿ ಜಾಹೀರಾತು ಹಾಕಿಸಿಕೊಂಡು ಸಿದ್ದರಾಮಯ್ಯ ಸರ್ಕಾರ ಬಿಬಿಎಂಪಿಗೆ 68 ಕೋಟಿ ನೀಡದೇ ವಂಚಿಸಿದೆ ಎಂದು ಬಿಜೆಪಿಯ ಮುಖಂಡ ಎನ್.ಆರ್‌.ರಮೇಶ್‌ ಆರೋಪಿಸಿದ್ದಾರೆ.

 ಬೆಂಗಳೂರು :  ಮುಡಾ ಹಗರಣ ಸಂಕಷ್ಟದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮತ್ತೊಂದು ದೂರು ದಾಖಲಾಗಿದ್ದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಉದ್ದೇಶಪೂರ್ವಕವಾಗಿ ₹68 ಕೋಟಿಗಿಂತ ಹೆಚ್ಚು ಮೊತ್ತವನ್ನು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.

ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಕೆ.ಜೆ.ಜಾರ್ಜ್‌, ಐಎಎಸ್‌ ಅಧಿಕಾರಿಗಳಾದ ಎಂ.ಲಕ್ಷ್ಮೀನಾರಾಯಣ, ಮಣಿವಣ್ಣನ್‌ ವಿರುದ್ಧ ತನಿಖೆಗೆ ಆದೇಶಿಸುವಂತೆ ಕೋರಿ ದೂರು ನೀಡಲಾಗಿದೆ.

ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಗಳ ಸಹಿತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರೂ, ಪಕ್ಷಪಾತ ಧೋರಣೆಯಿಂದ ಮತ್ತು ಸಿದ್ದರಾಮಯ್ಯ ಒತ್ತಡದಿಂದ ಪ್ರಕರಣ ಮುಕ್ತಾಯಗೊಳಿಸಿರುವ ಪೊಲೀಸರ ನಡೆಯನ್ನು ಸಹ ವಿರೋಧಿಸಿ ದೂರು ದಾಖಲಿಸಲಾಗಿದೆ.

2013-2018ರ ಅವಧಿಯಲ್ಲಿ ಸಿದ್ಧರಾಮಯ್ಯ ಆಡಳಿತಾವಧಿಯಲ್ಲಿ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪಾಲಿಕೆಯ ಒಡೆತನದ 493 ಬಸ್ ತಂಗುದಾಣಗಳನ್ನು ಬಳಸಿಕೊಳ್ಳಲಾಗಿತ್ತು. ಈ ವೇಳೆ ಬಿಬಿಎಂಪಿಗೆ ಕಾನೂನು ರೀತಿ ರಾಜ್ಯ ಸರ್ಕಾರವು ಪಾವತಿಸಬೇಕಿದ್ದ ₹68.14 ಕೋಟಿ ಪಾವತಿಸದೆ ವಂಚಿಸಲಾಗಿದೆ. 2015-2017ರ ಎರಡು ವರ್ಷಗಳ ಅವಧಿಯಲ್ಲಿ ಬಿಬಿಎಂಪಿಯ 493 ಬಸ್ ತಂಗುದಾಣಗಳನ್ನು ತಮ್ಮ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗೆಂದು ಬಳಸಿಕೊಂಡು, ನಯಾಪೈಸೆಯಷ್ಟೂ ಜಾಹೀರಾತು ಶುಲ್ಕ ಪಾವತಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನೋಟಿಸ್‌ ನೀಡಿದ್ದರೂ ಸರ್ಕಾರ ಕ್ಯಾರೇ ಇಲ್ಲ

ಈ ಬಗ್ಗೆ ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಾದ ಬಳಿಕ ಎಚ್ಚೆತ್ತುಕೊಂಡಿದ್ದ ಅಂದಿನ ವಿಶೇಷ ಆಯುಕ್ತರು (ಹಣಕಾಸು) ₹12.98 ಕೋಟಿ ಮೊತ್ತವನ್ನು ಪಾಲಿಕೆಗೆ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದರು. ಆದರೆ, ಸರ್ಕಾರ ನೋಟಿಸ್‌ಗೆ ಸೊಪ್ಪು ಹಾಕಿರಲಿಲ್ಲ. ಸಿದ್ದರಾಮಯ್ಯನವರು ಎರಡನೇ ಬಾರಿ ಮುಖ್ಯಮಂತ್ರಿಯಾದ ನಂತರ ಅವರ ಪ್ರಭಾವಕ್ಕೊಳಗಾಗಿ ಲೋಕಾಯುಕ್ತ ಪೋಲೀಸರು, ಯಾವುದೇ ಮಾಹಿತಿ ನೀಡದೆ ಇದೇ ವರ್ಷದ ಜು.26ರಂದು ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರಿನಲ್ಲಿ ಮನವಿ ಮಾಡಲಾಗಿದೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌