ಕೊಟ್ಟ ಭರವಸೆ ಒಂದೇ ತಿಂಗಳಲ್ಲಿ ಈಡೇರಿಸಿದ ಸರ್ಕಾರ ಸಿದ್ದರಾಮಯ್ಯರದ್ದು: ಭೀಮನಾಯ್ಕ

KannadaprabhaNewsNetwork | Published : Apr 20, 2024 1:08 AM

ಸಾರಾಂಶ

ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಪ್ರಧಾನಿಮಂತ್ರಿ ನರೇಂದ್ರ ಮೋದಿ ಚುನಾವಣೆಯಲ್ಲಿ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ.

ಮರಿಯಮ್ಮನಹಳ್ಳಿ:ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಈ.ತುಕಾರಾಂ 2 ಲಕ್ಷದ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಕೆಎಂಎಫ್‌ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್‌. ಭೀಮನಾಯ್ಕ ಹೇಳಿದರು.

ಅವರು ಇಲ್ಲಿನ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದ ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಪ್ರಧಾನಿಮಂತ್ರಿ ನರೇಂದ್ರ ಮೋದಿ ಚುನಾವಣೆಯಲ್ಲಿ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರ ಯಾವುದೇ ಅಭಿವೃದ್ದಿಯನ್ನು ಮಾಡಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಯಲ್ಲಿ ಗೆದ್ದ ಒಂದು ತಿಂಗಳಲ್ಲಿ ಚುನಾವಣೆಯಲ್ಲಿ ನೀಡಿದ ಐದು ಗ್ಯಾರೆಂಟಿ ಯೋಜನೆಗಳನ್ನು ಈಡೇರಿಸಿದ್ದಾರೆ. ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಮೋದಿ ಅವರ 10 ವರ್ಷಗಳ ಹಲವಾರು ವೈಫಲ್ಯಗಳನ್ನು ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಸಫಲತೆಗಳನ್ನು ಮತ್ತು ಕೇಂದ್ರದ ಕಾಂಗ್ರೆಸ್‌ ಪಕ್ಷ ನೀಡಿದ ಹೊಸ ಗ್ಯಾರೆಂಟಿಗಳನ್ನು ಮತದಾರರ ಮುಂದಿಟ್ಟುಕೊಂಡು ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಲಾಗುವುದು ಎಂದು ಅವರು ಹೇಳಿದರು.

ಮೋದಿ ರೈತರ ಸಾಲವನ್ನು ಮನ್ನ ಏಕೆ ಮಾಡಲಿಲ್ಲ? ಕರ್ನಾಟಕ ರಾಜ್ಯಕ್ಕೆ ಮೋದಿ ಕೊಡುಗೆ ಏನು? ಬಳ್ಳಾರಿ ಜಿಲ್ಲೆಯಲ್ಲಿ ನಾಲ್ಕು ಬಾರಿ ಬಿಜೆಪಿಯವರು ಗೆದ್ದರೆ ಬಿಜೆಪಿಯವರ ಕೊಡುಗೆ ಜಿಲ್ಲೆಗೆ ಏನು? ಬಿಜೆಪಿಯವರ ಕೇಂದ್ರ ಮತ್ತು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಪಡಿಸಿಲ್ಲ. ಬಿಜೆಪಿಯವರ ಅಭಿವೃದ್ಧಿ ಶೂನ್ಯ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಮತ ಕೇಳುವುದಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ಅವರು ಹೇಳಿದರು.

ಲೋಕಸಭಾಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ತುಕಾರಾಂ ಸರಳ ಸಜ್ಜನ ವ್ಯಕ್ತಿ, ನಾಲ್ಕು ಬಾರಿ ಶಾಸಕರಾಗಿರುವವರು ಸದಾ ಜನರೊಂದಿಗೆ ಇರುವಂತಹ ವ್ಯಕ್ತಿ. ತುಕಾರಾಂ ಈ ಚುನಾವಣೆಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ನಡೆಸಲಾಗುವುದು. ಎಂದು ಅವರು ಹೇಳಿದರು.

ಸ್ಥಳೀಯ ಮುಖಂಡರಾದ ಎನ್‌. ಸತ್ಯನಾರಾಯಣ, ಗೋವಿಂದರ ಪರುಶುರಾಮ, ಕುರಿ ಶಿವಮೂರ್ತಿ, ಎನ್.ಎಸ್.ಬುಡೇನ್ ಸಾಹೇಬ್, ಸೋಮಪ್ಪ ಉಪ್ಪಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಬಿ. ವಿಜಯಕುಮಾರ್, ಪಪಂ ಸದಸ್ಯರಾದ ಬೆಣಕಲ್‌ಭಾಷ, ಆದಿಮನಿ ಹುಸೇನ್‌ ಭಾಷ, ಎಲ್‌. ವಸಂತ, ಪರುಶುರಾಮ, ಮಹಮ್ಮದ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಪಟ್ಟಣದ ಆರಾಧ್ಯ ದೈವಗಳಾದ ಶ್ರೀಲಕ್ಷ್ಮೀನಾರಾಯಣಸ್ವಾಮಿ, ಆಂಜನೇಯಸ್ವಾಮಿಗಳ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.

Share this article