ಜನರ ಸ್ವಾಭಿಮಾನಿ ಬದುಕಿಗೆ ಬೇಕಾದ್ದನ್ನು ಸಿದ್ದರಾಮಯ್ಯ ನೀಡಿದ್ದಾರೆ: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

KannadaprabhaNewsNetwork |  
Published : Jan 30, 2025, 12:34 AM ISTUpdated : Jan 30, 2025, 01:39 PM IST
1 | Kannada Prabha

ಸಾರಾಂಶ

ಜನರ ಸ್ವಾಭಿಮಾನಿ ಬದುಕಿಗೆ ಏನೆಲ್ಲ ಬೇಕೋ ಅಂತಹವನ್ನು ಗುರುತಿಸಿ ಕಾರ್ಯಕ್ರಮ ನೀಡುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.

 ಮೈಸೂರು : ಜನರ ಸ್ವಾಭಿಮಾನಿ ಬದುಕಿಗೆ ಏನೆಲ್ಲ ಬೇಕೋ ಅಂತಹವನ್ನು ಗುರುತಿಸಿ ಕಾರ್ಯಕ್ರಮ ನೀಡುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘ, ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಪತ್ರಕರ್ತ ಸಿಂಧುವಳ್ಳಿ ಸುಧೀರ ಅವರ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಸಾಧನೆ ಕುರಿತ ಭಾಗ್ಯವಿಧಾತ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಶ್ರೀಮಂತ ಮಕ್ಕಳಿಗೆ ಮಾತ್ರವಲ್ಲ, ಬಡ ಮಕ್ಕಳಿಗೂ ಪೌಷ್ಟಿಕಾಂಶ ದೊರಕಬೇಕು ಎಂಬ ಉದ್ದೇಶದಿಂದ ಜಾರಿಗೆ ತಂದ ಕ್ಷೀರಭಾಗ್ಯ ಇದಕ್ಕೆ ಒಂದು ಉತ್ತಮ ಉದಾಹರಣೆ. ಹಳ್ಳಿಗಾಡಿನಲ್ಲಿ ಅಂದಿನ ಕಾಲಘಟ್ಟದಲ್ಲಿ ಜನಿಸಿದರೂ ಪ್ರಾಮಾಣಿಕತೆ, ಕಾಳಜಿ, ಬದ್ಧತೆ ಇರಿಸಿಕೊಂಡಿದ್ದರೆ ಸಂವಿಧಾನದ ಅವಕಾಶದ ಅಡಿಯಲ್ಲಿ ಯಾವ ಉನ್ನತ ಮಟ್ಟಕ್ಕೆ ಹೋಗಬಹುದಾಗಿದೆ ಎಂಬುದಕ್ಕೆ ಸಿದ್ದರಾಮಯ್ಯ ಅವರೇ ಸಾಕ್ಷಿ ಎಂದರು.

ಬಡತನದಲ್ಲಿ ಹುಟ್ಟಿದವರು ಬಡತನದಲ್ಲಿಯೇ ಸಾಯಬೇಕಾಗಿಲ್ಲ. ಶಿಕ್ಷಣ, ಸಂವಿಧಾನದ ಮೂಲಕ ಸಾಕಷ್ಟು ಬದಲಾವಣೆ ಕಾಣಲು ಸಾಧ್ಯ ಎಂಬುದನ್ನು ಸಿದ್ದರಾಮಯ್ಯ ಸಾಧಿಸಿ ತೋರಿಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಅವರು ಅಧಿಕಾರದಲ್ಲಿರುವಾಗಲೆಲ್ಲ ಜನಸಾಮಾನ್ಯರನ್ನು ಹುಡುಕಿಕೊಂಡು ಅವರಿಗೆ ಅನುಕೂಲ ಆಗಲೆಂದು ಉತ್ತಮ ಸ್ಥಾನ ನೀಡಿದ್ದಾರೆ. ಆಹಾರ ಭದ್ರತಾ ಕಾಯ್ದೆ ರಾಷ್ಟ್ರದಲ್ಲಿ ಜಾರಿಗೆ ಬರುವ ಮೊದಲೇ ನಮ್ಮಲ್ಲಿ ಅನ್ನಭಾಗ್ಯ ತಂದರು. ಹೀಗಾಗಿ ಜನತೆಯ ಸ್ವಾಭಿಮಾನದ ಬದುಕಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಅವರು ಹೇಳಿದರು.

ಕೃತಿ ಕುರಿತು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಸಿದ್ದರಾಮಯ್ಯ ಅವರದು ಬಹುದೊಡ್ಡ ವ್ಯಕ್ತಿತ್ವ. ಅದನ್ನು ಇತರರಿಗೂ ತಿಳಿಸಬೇಕಾದ ಅಗತ್ಯವಿದೆ. ಈ ರೀತಿ ಮಾಡಿದಲ್ಲಿ ಯುವ ಪೀಳಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಈ ಕೆಲಸವನ್ನು ಸಿಂಧುವಳ್ಳಿ ಸುಧೀರ್ ಅವರ ಭಾಗ್ಯವಿಧಾತ ಪುಸ್ತಕ ಮಾಡುತ್ತದೆ ಎಂದರು.

ವಿಧಾತ ಎಂಬ ಪದದ ಅರ್ಥ, ಒಂದು ರಾಜ್ಯ, ದೇಶದ ಜನರ ಬದುಕನ್ನು ನಿರ್ಧರಿಸುವಾತ ಎಂದಾಗುತ್ತದೆ. ಇದೇ ರೀತಿ ಸಿದ್ಧರಾಮಯ್ಯ ಅವರು ಸಹಾ ನಡೆದಿದ್ದು, ಅವರು ಎದುರಿಸಿದ ಸಂಕಷ್ಟ, ಏಳುಬೀಳು, ರಾಜಕಾರಣದಲ್ಲಿ ಎದುರಿಸಿದ ಸವಾಲು ದಾಖಲೀಕರಣ ಇಲ್ಲಿ ಆಗಿದೆ ಎಂದು ಅವರು ನುಡಿದರು.

ವಿವಿ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಧರ್ಮಾಪುರ ನಾರಾಯಣ ಮೊದಲಾದವರು ಇದ್ದರು.

ಕಾಲ್ತುಳಿತ ನೋವಿನ ಸಂಗತಿ, ಆಗಬಾರದಿತ್ತು- ಯು.ಟಿ. ಖಾದರ್

ಕನ್ನಡಪ್ರಭ ವಾರ್ತೆ ಮೈಸೂರುಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ನೋವಿನ ಸಂಗತಿ. ಇಂತಹ ಘಟನೆ ಎಲ್ಲೂ ಜರುಗಬಾರದು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಕಳವಳ ವ್ಯಕ್ತಪಡಿಸಿದರು.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತ ಹೇಗೆ ಆಯಿತು ಎಂದು ಗೊತ್ತಿಲ್ಲ. ಮಹಾಕುಂಭಮೇಳಕ್ಕೆ ನಮ್ಮ ರಾಜ್ಯದಿಂದ ಎಷ್ಟು ಜನ ಭಕ್ತರು ಹೋಗಿದ್ದಾರೆ ಎಂಬ ಮಾಹಿತಿ ಇಲ್ಲ. ಆದರೆ, ರಾಜ್ಯ ಸರ್ಕಾರದ ಬಳಿ ಆ ಮಾಹಿತಿ ಇರಬಹುದು. ಪ್ರಯಾಗ್ ರಾಜ್ ಗೆ ಹೋಗಿರುವವರೊಂದಿಗೆ ಸರ್ಕಾರ ಸಂಪರ್ಕದಲ್ಲಿದ್ದು, ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ ಎಂದರು.

ನಾನು ಸಹ ಪ್ರಯಾಗ್ ರಾಜ್ ಗೆ ಹೋಗಿ ಬಂದಿದ್ದೇವೆ. ವಿಐಪಿಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ತೊಂದರೆ ಇರುವುದಿಲ್ಲ. ಜನ ಸಾಮಾನ್ಯರಿಗೆ ಯಾವ ರೀತಿ ವ್ಯವಸ್ಥೆ ಇದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''