ಕನ್ನಡಪ್ರಭ ವಾರ್ತೆ ಹಾಸನ
ಕಾಪೌಂಡ್ ಕಾಮಗಾರಿ ವಿರೋಧಿಸಿ ಸ್ಥಳೀಯ ಗ್ರಾಮಸ್ಥರು ಒಂದು ಕಡೆ ಪ್ರತಿಭಟನೆ ನಡೆಸುತ್ತಿದ್ದರೆ ಇನ್ನೊಂದು ಕಡೆ ಗ್ರಾಮಸ್ಥರು ಹತ್ತಿರ ಸುಳಿಯದಂತೆ ಭೂಸ್ವಾಧೀನವಾಗಿರುವ ಪ್ರದೇಶದ ಒತ್ತುವರಿ ಜಾಗವನ್ನು ಪೊಲೀಸ್ ಬಂದೋಬಸ್ತ್ ಮೂಲಕ ಜೆಸಿಬಿಯಿಂದ ತೆರವು ಮಾಡಲಾಯಿತು.ಈ ಹಿಂದೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ತೆರವು ಕಾರ್ಯಚರಣೆಗೆ ಗ್ರಾಮಸ್ಥರು ಅಡ್ಡಿಪಡಿಸಿದ್ದರು. ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಧ್ಯ ಪ್ರವೇಶಿಸಿ ಜಂಟಿಯಾಗಿ ಸರ್ವೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದರು. ಸಭೆ ನಡೆಸಿದ ಬಳಿಕ ಸಭೆ ಫಲಪ್ರದ ಆಗಿರಲಿಲ್ಲ. ನಂತರದಲ್ಲಿ ಡಿಸಿ ಸಿ. ಸತ್ಯಭಾಮ ಅವರ ಆದೇಶದಂತೆ ಬುಧವಾರ ಪೊಲೀಸ್ ಬಂದೊಬಸ್ತ್ ಮೂಲಕ ತೆರವು ಮಾಡಲಾಗಿದೆ.
ಕೆಐಎಡಿಬಿ ಅಧಿಕಾರಿ ಹಾಗೂ ಹಾಸನ ಜಿಲ್ಲಾಡಳಿತದ ವತಿಯಿಂದ ಹಾಸನ ವಿಮಾನ ನಿಲ್ದಾಣದ 536.24 ಎಕರೆ ಭೂಮಿ ಸುತ್ತ ಜಮೀನಿನ ದುರಸ್ತಿ ಹಾಗೂ ಪೋಡಿ ಮಾಡದೆ ಪೊಲೀಸ್ ಬಂದೋಬಸ್ತ್‌ನಲ್ಲಿ ವಿಮಾನ ನಿಲ್ದಾಣದ ಸುತ್ತ ಬಲವಂತವಾಗಿ ಕಾಂಪೌಂಡ್ ನಿರ್ಮಾಣ ಮಾಡುವುದನ್ನು ವಿರೋಧಿಸಿ ಒಂದು ಕಡೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರೆ ಇನ್ನೊಂದು ಕಡೆ ಒತ್ತುವರಿ ಜಾಗ ತೆರವು ಕಾರ್ಯಚರಣೆಯನ್ನು ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಮಾಡಲಾಯಿತು. ಸುಮಾರು 300 ಜನ ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ವಿಮಾನ ನಿಲ್ದಾಣ ಕಾಂಪೌಂಡ್ ಕಾಮಗಾರಿ ನಡೆಸಿದರು. ಇದೇ ವೇಳೆ ಗ್ರಾಮಸ್ಥರಾದ ಬೊಮ್ಮೇಗೌಡ ಹಾಗೂ ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ನಿರ್ಮಾಣವಾಗುವ ವಿಮಾನ ನಿಲ್ದಾಣ ಪ್ರದೇಶದಲ್ಲಿ ಸುತ್ತಮುತ್ತಲ ಗ್ರಾಮಗಳ ರೈತರು ಈ ಮೊದಲು ಕಾಮಗಾರಿ ನಡೆಯುತ್ತಿರುವ ಜಾಗದಲ್ಲೇ ನಾವು ಸಂಚರಿಸುತ್ತಿದ್ದು, ಕಾಂಪೌಂಡ್ ನಿರ್ಮಾಣ ಮಾಡುವುದರಿಂದ ನಮ್ಮ ಗ್ರಾಮಗಳಿಗೆ ತೆರಳಲು ಸುಮಾರು 7 ಕಿ.ಮೀ ಬಳಸಿ ಬರಬೇಕಾಗಿದೆ. ನಮಗೆ ಈಗ ರಸ್ತೆ ಇಲ್ಲವಾಗಿದೆ.ಪ್ರತ್ಯೇಕ ರಸ್ತೆ ಮಾಡಿ ಕೊಡಿ ಎಂಬ ರೈತರ ಬೇಡಿಕೆಯನ್ನು ಒಪ್ಪಿ 536 ಎಕರೆಯಲ್ಲೇ ವಿಮಾನ ನಿಲ್ದಾಣದ ಬೌಂಡರಿ ಅಂಚಿನಲ್ಲೇ ಸುಮಾರು 9 ಮೀಟರ್ ಅಗಲದ 5 ಕಿ.ಮೀ.ಉದ್ದದ ರಸ್ತೆ ನಿರ್ಮಾಣಕ್ಕೆ ಸುಮಾರು 5 ಎಕರೆ ಜಾಗದಲ್ಲಿ ರಸೆ ನಿರ್ಮಿಸಿಕೊಡಲು ಈ ಮುಂಚೆ ಕೆಐಡಿಬಿ ಅಧಿಕಾರಿಗಳು ಒಪ್ಪಿಗೆ ನೀಡಿದ್ದರು. ಈಗ ಆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡದೆ. ಮತ್ತೆ ರೈತರ ಭೂಮಿಯನ್ನು ಭೂಸ್ವಾಧೀನ ಮಾಡಿ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ಜಿಲ್ಲಾಡಳಿತ ಅಧಿಕಾರಿಗಳು ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.