ಸಿದ್ದರಾಮಯ್ಯಗೆ ಸಿದ್ಧಾಂತಗಳೇ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

KannadaprabhaNewsNetwork | Published : Apr 5, 2024 1:08 AM

ಸಾರಾಂಶ

ಸಿದ್ದರಾಮಯ್ಯಗೆ ಸಿದ್ಧಾಂತಗಳೇ ಇಲ್ಲ. ಜೆಡಿಎಸ್‌ನಲ್ಲಿದ್ದಾಗ ಕಾಂಗ್ರೆಸ್‌ ಹಾಗೂ ಸೋನಿಯಾಗಾಂಧಿ ಬಗ್ಗೆ ಸಾಕಷ್ಟು ಬೈದಿದ್ದಾರೆ. ಅಂಥವರೆ ಇದೀಗ ರಾಹುಲ್‌ ಗಾಂಧಿ ಎದುರಿಗೆ ಟೊಂಕ ಬಗ್ಗಿಸಿ ನಿಲ್ಲುವ ಪರಿಸ್ಥಿತಿ ಬಂದಿದೆ.

ಹುಬ್ಬಳ್ಳಿ:

ಸಿದ್ದರಾಮಯ್ಯಗೆ ಸಿದ್ಧಾಂತಗಳೇ ಇಲ್ಲ. ಜೆಡಿಎಸ್‌ನಲ್ಲಿದ್ದಾಗ ಕಾಂಗ್ರೆಸ್‌ ಹಾಗೂ ಸೋನಿಯಾಗಾಂಧಿ ಬಗ್ಗೆ ಸಾಕಷ್ಟು ಬೈದಿದ್ದಾರೆ. ಅಂಥವರೆ ಇದೀಗ ರಾಹುಲ್‌ ಗಾಂಧಿ ಎದುರಿಗೆ ಟೊಂಕ ಬಗ್ಗಿಸಿ ನಿಲ್ಲುವ ಪರಿಸ್ಥಿತಿ ಬಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.

ರಾಷ್ಟ್ರಪತಿ, ಪ್ರಧಾನಿ ಮಾಡುತ್ತೇನೆ ಎಂದರೂ ಬಿಜೆಪಿ ಸೇರಲ್ಲ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಮಾಧ್ಯಮಗಳೊಂದಿಗೆ ಮಾತನಾಡಿ ತಿರುಗೇಟು ನೀಡಿದರು.ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆದಿಲ್ಲ. ಅವರು ಯಾಕೆ ಈ ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ ಎಂದ ಅವರು, ಜೆಡಿಎಸ್‌ನಲ್ಲಿದ್ದಾಗ ಇವರು ಸೋನಿಯಾ, ರಾಹುಲ್‌, ಪ್ರಿಯಾಂಕಾ ವಾದ್ರಾ ಅವರನ್ನು ಬೈದಿರುವ ರೀತಿ ನೋಡಿದರೆ ಸೋನಿಯಾಗಾಂಧಿ ಇವರ ಮುಖವನ್ನೇ ನೋಡಬಾರದು. ಸಿದ್ದರಾಮಯ್ಯ ಬೈದ ರೀತಿ ನಮಗೆ ಬೈಯುವುದಕ್ಕೆ ಬರಲ್ಲ. ಇದೀಗ ರಾಹುಲ್‌ ಎದುರಿಗೆ ಟೊಂಕ ಬಗ್ಗಿಸಿಕೊಂಡು ನಿಲ್ಲುವ ಪರಿಸ್ಥಿತಿ ಅವರದಾಗಿದೆ. ಹೀಗಿರುವಾಗ ಇವರು ಬೇರೆಯವರಿಗೆ ಏನು ಹೇಳುತ್ತಾರೆ ಎಂದರು.

ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಸಿಎಂ ಮಾಡದೇ ಇದ್ದಲ್ಲಿ ಇವರ ಬಣ್ಣ ಗೊತ್ತಾಗುತ್ತಿತ್ತು. ಡಿಸಿಎಂ ಡಿ.ಕೆ. ಶಿವಕಕುಮಾರ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಏನು ನಡೆದಿದೆ ಎಂಬುದು ಜಗತ್ತಿಗೆ ಗೊತ್ತಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಯಾವ ದೃಷ್ಟಿಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಸರ್ಕಾರ ಬದಲಾಗುತ್ತದೆಯೋ ಇಲ್ಲವೋ? ಆದರೆ ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಮತದಿಂದ ತೊಂದರೆಯಾಗುವುದು ಖಚಿತ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಮುಂದಿನ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ ಎನ್ನುವ ಸಿದ್ದರಾಮಯ್ಯ, ಇದು ಮೊದಲ ಬಾರಿ ಅಲ್ಲ. ಈ ಹಿಂದೆ ಮೂರು ಬಾರಿ ಹೇಳಿದ್ದಾರೆ. ಇದೇ ನನ್ನ ಕೊನೆ ಚುನಾವಣೆ ಎಂದು ಹೇಳುತ್ತಾರೆ. ಮತ್ತೆ ನಂತರದಲ್ಲಿ ಚುನಾವಣೆಗೆ ನಿಲ್ಲುತ್ತಾರೆ. ಅವರು ಮುಂದೆಯೂ ಚುನಾವಣೆಗೆ ಸ್ಪರ್ಧಿಸಲಿ. ಈ ರೀತಿ ಆರೋಗ್ಯಕರ ಸ್ಪರ್ಧೆ ನಡೆಯುತ್ತಾ ಇರಲಿ ಎಂದರು.ಈಶ್ವರಪ್ಪ ಸಮಸ್ಯೆ ಇತ್ಯರ್ಥವಾಗುತ್ತೆ: ಜೋಶಿ ವಿಶ್ವಾಸ

ಅಮಿತ್‌ ಶಾ ಅವರನ್ನು ಭೇಟಿಯಾಗಲು ಕೆ.ಎಸ್‌. ಈಶ್ವರಪ್ಪ ಅವರು ದೆಹಲಿಗೆ ಹೋಗಿದ್ದರು. ಆದರೆ, ಭೇಟಿಯಾಗಲು ಸಾಧ್ಯವಾಗಿಲ್ಲ ಎಂದಿರುವ ಸಚಿವ ಜೋಶಿ, ಈಶ್ವರಪ್ಪ ಅವರ ಸಮಸ್ಯೆ ಇತ್ಯರ್ಥವಾಗುವ ಜತೆಗೆ ಅವರು ಬಿಜೆಪಿ ಬೆಂಬಲಿಸಲಿದ್ದಾರೆ. ದೆಹಲಿ ಭೇಟಿ ಕುರಿತು ಅವರೊಂದಿಗೆ ಮಾತನಾಡುತ್ತೇನೆ ಎಂದರು.

ನಿರುಪಯುಕ್ತ ಕೊಳವೆ ಬಾವಿ ಮುಚ್ಚುವ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಕೆಲವೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಜನತೆ ಇನ್ನಾದರೂ ಜಾಗೃತರಾಗಬೇಕು. ವಿಜಯಪುರದಲ್ಲಿ ಮಗು ಬದುಕಿ ಬಂದಿರುವುದು ನಿಜಕ್ಕೂ ಖುಷಿ ಸಂಗತಿ ಎಂದು ಪ್ರಹ್ಲಾದ ಜೋಶಿ ಹೇಳಿದರು.

Share this article