ಕೆಲಸ ಮಾಡುವ ಅನುಭವ, ಕಾಳಜಿ ಸಿದ್ದರಾಮಯ್ಯನವರಿಗೆ ಇಲ್ಲ: ಅಶ್ವಥ್ ನಾರಾಯಣ್

KannadaprabhaNewsNetwork | Updated : Apr 09 2024, 12:47 AM IST

ಸಾರಾಂಶ

ಸಿದ್ದರಾಮಯ್ಯ ಬರೀ ಸೌಂಡ್‌ ಬಾಕ್ಸ್‌, ಸೌಂಡ್‌ ಬಾಕ್ಸ್‌ ಬರೀ ಅಬ್ಬರ ಮಾಡುತ್ತೇ ಅಷ್ಟೇ ಎಂದು ಮಾಜಿ ಸಚಿವ ವ್ಯಂಗ್ಯ ಮಾಡಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಒಬ್ಬ ವ್ಯಕ್ತಿಯಾಗಿ ಮೋದಿ ನಮಗೆ ಎದುರಾಳಿಯೇ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ, ಸಿದ್ದರಾಮಯ್ಯ ಅವರು ಬರೀ ಸೌಂಡ್ ಬಾಕ್ಸ್. ಸೌಂಡ್ ಬಾಕ್ಸ್ ಬರೀ ಅಬ್ಬರ ಮಾಡುತ್ತೇ ಅಷ್ಟೇ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಪರ ಮತಯಾಚನೆ ಕಾರ್ಯಕ್ರಮದಲ್ಲಿ ಸೋಮವಾರ ಆಗಮಿಸಿ ಸಿದ್ದರಾಮಯ್ಯ ಅವರನ್ನು ಅನುಕರಿಸಿ ವ್ಯಂಗ್ಯ ಮಾಡಿದರು.

ಸಿದ್ದರಾಮಯ್ಯ ಅವರು ಬರೀ ಸೌಂಡ್ ಬಾಕ್ಸ್. ಸೌಂಡ್ ಬಾಕ್ಸ್ ಬರೀ ಅಬ್ಬರ ಮಾಡುತ್ತೆ ಅಷ್ಟೇ. ಆದರೆ ಕೆಲಸ ಮಾಡುವ ಅನುಭವ, ಕಾಳಜಿ ಸಿದ್ದರಾಮಯ್ಯನವರಿಗೆ ಇಲ್ಲ. ಬರೀ ದ್ವೇಷ, ಅಧಿಕಾರ ದುರ್ಬಳಕೆ ಮಾಡುವುದಷ್ಟೇ ಇವರ ಕೆಲಸ. ಈಗ ಲೂಟಿ ಮಾಡಿರುವ ಹಣವನ್ನು ಚುನಾವಣೆಯಲ್ಲಿ ದುರ್ಬಳಕೆ ಮಾಡಲು ಹೊರಟಿದ್ದಾರೆ. ಹಣ ಬಲದ ಮೇಲೆ ಗೆಲ್ಲುತ್ತೇವೆ ಎನ್ನುವ ಹುಚ್ಚು ವಿಶ್ವಾಸದಲ್ಲಿ ಇದ್ದಾರೆ. ಆದರೆ ಸಂಪೂರ್ಣ ಸೋಲುತ್ತಾರೆ ಎಂದು ಹೇಳಿದರು.

ಕಳೆದ ಬಾರಿ ಒಂದೇ ಒಂದು ಸ್ಥಾನ ಗೆದ್ದಿದ್ದರು. ಆದರೆ ಈ ಬಾರಿ ಅದನ್ನು ಕಳೆದುಕೊಳ್ಳುತ್ತಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೃದಯವಂತ ಡಾ. ಮಂಜುನಾಥ್ ಗೆಲ್ಲುತ್ತಾರೆ. ಆ ಮೂಲಕ ಸಿದ್ದರಾಮಯ್ಯ, ಡಿಕೆಶಿ ಟೀಂಗೆ ಬುದ್ಧಿ ಕಲಿಸಲಿದ್ದಾರೆ. ಅಲ್ಲದೇ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮುಕ್ತ ದೇಶವಾಗಬೇಕಿತ್ತು. ಕಾಂಗ್ರೆಸ್ ರಾಜ್ಯಕ್ಕೆ ಒಂದು ಶಾಪವಿದ್ದಂತೆ. ಈ ಶಾಪ ಮುಕ್ತ ಮಾಡಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಜನ ಸೋಲಿಸಲಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದ ಜನರು ಈಗ ಯಾಕಾದರೂ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟೆವು ಎನ್ನುತ್ತಿದ್ದಾರೆ. ಆದರೆ ಮೋದಿ ಗ್ಯಾರಂಟಿಯೇ ನಿಜವಾದ ಗ್ಯಾರಂಟಿ. ಕಾಂಗ್ರೆಸ್ ಕೇಂದ್ರದಲ್ಲಿ ಒಂದು ವಿರೋಧ ಪಕ್ಷವಾಗುವುದಕ್ಕೂ ಯೋಗ್ಯವಲ್ಲ. ಅವರಲ್ಲಿ ಪ್ರಧಾನಿಯ ಅಭ್ಯರ್ಥಿ ಯಾರೆಂಬುದೇ ಇಲ್ಲ.ಸಿದ್ದರಾಮಯ್ಯಗೆ ಖಂಡಿತ ಭಯವಿದೆ. ಅವರ ಪಕ್ಷದವರೇ ಅವರನ್ನು ಪಲ್ಟಿ ಹೊಡೆಸುತ್ತಾರೆ. ನಾನು ಮುಖ್ಯಮಂತ್ರಿ ಅಂತ ಅವರ ಸಹೋದ್ಯೋಗಿಗಳಲ್ಲಿ ಕಿತ್ತಾಟವಿದೆ.

ಸಿದ್ದರಾಮಯ್ಯನವರಿಗೆ ವರುಣದಲ್ಲೂ ಹಿಡಿತವಿಲ್ಲ. ಸಿದ್ದರಾಮಯ್ಯ ಕರ್ನಾಟಕದ ಭವಿಷ್ಯವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿ ಬಲಿಕೊಟ್ಟಿದ್ದಾರೆ ಎಂದು ಟೀಕಿಸಿದರು.

Share this article