ಸಿದ್ದರಾಮಯ್ಯ ಪ್ರಾಮಾಣಿಕ ವ್ಯಕ್ತಿ, ಅವರು ತಪ್ಪು ಮಾಡಿಲ್ಲ: ಶಾಸಕ ಪ್ರದೀಪ್ ಈಶ್ವರ್

KannadaprabhaNewsNetwork | Published : Jan 29, 2025 1:31 AM

ಸಾರಾಂಶ

ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸಿದ್ಧವಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಲೋಕಾಯುಕ್ತರ ಮೇಲೆ ನಂಬಿಕೆ ಇಲ್ಲವೇ? ಲೋಕಾಯುಕ್ತ ಸಂಸ್ಥೆಗಿಂತ ದೊಡ್ಡ ತನಿಖಾ ಸಂಸ್ಥೆ ಬೇಕಾ? ಸಿಬಿಐ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿ ಕೋರ್ಟ್ ಸಿಬಿಐಗೆ ನೀಡುವುದಿಲ್ಲಾ ಎಂಬ ನಂಬಿಕೆ ನನಗೆ ಇದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಾಮಾಣಿಕ ವ್ಯಕ್ತಿ. ಅವರು ತಪ್ಪು ಮಾಡಿಲ್ಲ. ಸಿದ್ದರಾಮಯ್ಯನವರ ಧರ್ಮಪತ್ನಿ ಪಾರ್ವತಕ್ಕ ಹಾಗೂ ಸಚಿವ ಬೈರತಿ ಸುರೇಶಣ್ಣ ನವರು ಸಹ ತಪ್ಪು ಮಾಡಿಲ್ಲ. ಅದಕ್ಕೆ ಅವರಿಗೆ ಲೋಕಾಯುಕ್ತ ಕ್ಲೀನ್ ಚೀಟ್ ನೀಡಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಪಂ ಕೊಮ್ಮಲಮರಿ ಗ್ರಾಮದಲ್ಲಿ ‘ನಮ್ಮೂರಿಗೆ ನಮ್ಮ ಶಾಸಕ’ ಕಾರ್ಯಕ್ರಮದಲ್ಲಿ ಜನತೆಯ ಅಹವಾಲು ಸ್ವೀಕಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣ ಕುರಿತು ಲೋಕಾಯುಕ್ತ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಪ್ಪಿಸಿತ್ತು. ಈಗ ಲೋಕಾಯುಕ್ತ ಕ್ಲೀನ್ ಚೀಟ್ ನೀಡಿದೆ. ತಪ್ಪು ಇದ್ದಿದ್ದರೆ ಲೋಕಾಯುಕ್ತ ಕ್ಲೀನ್ ಚೀಟ್ ನೀಡುತ್ತಿರಲಿಲ್ಲ. ಲೋಕಾಯುಕ್ತ ತೀರ್ಪನ್ನು ಗೌರವಿಸುತ್ತೇವೆ ಎಂದರು.

ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸಿದ್ಧವಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಲೋಕಾಯುಕ್ತರ ಮೇಲೆ ನಂಬಿಕೆ ಇಲ್ಲವೇ? ಲೋಕಾಯುಕ್ತ ಸಂಸ್ಥೆಗಿಂತ ದೊಡ್ಡ ತನಿಖಾ ಸಂಸ್ಥೆ ಬೇಕಾ? ಸಿಬಿಐ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿ ಕೋರ್ಟ್ ಸಿಬಿಐಗೆ ನೀಡುವುದಿಲ್ಲಾ ಎಂಬ ನಂಬಿಕೆ ನನಗೆ ಇದೆ ಎಂದರು.ನಮ್ಮೂರಿಗೆ ನಮ್ಮ ಶಾಸಕ:

‘ನಮ್ಮೂರಿಗೆ ನಮ್ಮ ಶಾಸಕ’ ಕಾರ್ಯಕ್ರಮದಲ್ಲಿ ಇದುವರೆಗೂ 113ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ, ಹಲವಾರು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದ್ದು, ಉಳಿದವುಗಳಿಗೆ ಕಾಲಾವಕಾಶ ನೀಡಿದ್ದೇನೆ. ದಲಿತರ ಕೇರಿಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇನೆ. ಕಚೇರಿಯಲ್ಲಿ ಅಥವಾ ರಾಜಧಾನಿಯಲ್ಲಿ ಕುಳಿತು ಜನತೆಗೆ ಸಿಗುತ್ತಿಲ್ಲ ಎಂದು ಹೇಳಿಸಿಕೊಳ್ಳದೆ. ಕ್ಷೇತ್ರದ ಜನತೆಯ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದೇನೆ. ರಸ್ತೆಗಳು ಕ್ಷೇತ್ರದ ಅಭಿವೃದ್ಧಿಗೆ ಪೂರಕ ವಾತಾವರಣ ಮೂಡಿಸಲಿವೆ, ಕ್ಷೇತ್ರದಲ್ಲಿನ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಗ್ರಾಮ ನೈರ್ಮಲೀಕರಣ, ಹಸಿರೀಕರಣ, ಸೂಕ್ತ ಸಾರಿಗೆ ಸಂಪರ್ಕ, ರಸ್ತೆ ನಿರ್ಮಾಣ ಸೇರಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಪರಿಕಲ್ಪನೆಯೊಂದಿಗೆ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯಾಗಿಸಲು ಶ್ರಮಿಸಲಾಗುವುದು. ಇದಕ್ಕೆ ಪೂರಕವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸಿಸಿ ರಸ್ತೆಗಳ ಕಾಮಗಾರಿ ಗುಣಮಟ್ಟದಿಂದ ಹಾಗೂ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಕಾಮಗಾರಿಯನ್ನು ಅಧಿಕಾರಿಗಳು ಆಗಿಂದಾಗ್ಗೆ ಪರಿಶೀಲನೆ ಮಾಡಬೇಕು ಎಂದು ತಾಕೀತು ಮಾಡಿದರು.

ಗ್ರಾಮ ಪರ್ಯಟನೆ:

ಚಿಕ್ಕನಾರಪ್ಪನಹಳ್ಳಿ ಗ್ರಾಮಕ್ಕೆ ಬೆಳಂಬೆಳಗ್ಗೆ ಕೊರೆಯುವ ಚಳಿಯನ್ನು ಲೆಕ್ಕಿಸದೇ ಭೇಟಿ ನೀಡಿದ್ದಷ್ಟೇ ಅಲ್ಲದೆ, ಅಲ್ಲಿಯೇ ತಹಸೀಲ್ದಾರ್ ಸೇರಿ ಅಧಿಕಾರಿಗಳೊಂದಿಗೆ ಬೆಳಗಿನ ಉಪಹಾರ ಸೇವಿಸಿದರು.

ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕನಾರಪ್ಪನಹಳ್ಳಿ, ಕೊಮ್ಮಲ ಮರಿ, ದಿನ್ನಹಳ್ಳಿ ಗ್ರಾಮಗಳಲ್ಲಿ ಸಂಚರಿಸಿ, ಅಲ್ಲಿನ ಚರಂಡಿ ಸಮಸ್ಯೆ, ರಸ್ತೆ ಸಮಸ್ಯೆ, ವಿದ್ಯುತ್ ದೀಪದ ಸಮಸ್ಯೆ, ಆರೋಗ್ಯ ಸಮಸ್ಯೆ, ವಸತಿ, ನಿವೇಶನ, ಬಸ್, ಶಾಲಾ ಕೊಠಡಿ, ಶೌಚಾಲಯ, ಸ್ಮಶಾನದ ಜಾಗದ ಸಮಸ್ಯೆ , ಸ್ಮಶಾನಕ್ಕೆ ತೆರಳುವ ರಸ್ತೆಯ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳ ಪರಿಹರಿಸುವ ಭರವಸೆ ನೀಡಿದರು.

ಎಂದಿನಂತೆ ತಮ್ಮ ತೆಲುಗು ಕನ್ನಡ ಮಿಶ್ರಿತ ಸಂಭಾಷಣೆಯೊಂದಿಗೆ ಗ್ರಾಮದ ನಡುವೆ ಕೂತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರಲ್ಲದೆ, ಗ್ರಾಮದ ಎಲ್ಲೆಡೆ ಸಂಚರಿಸಿ, ಲವಲವಿಕೆಯಿಂದಲೇ ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿದರು.

ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಂಜುನಾಥ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಮಂಜುಳಾ, ಗ್ರಾಪಂ ಪಿಡಿಒ ಮದ್ದಿರೆಡ್ಡಿ, ಮುಖಂಡರಾದ ಅರವಿಂದ, ಅಡಗಲ್ ಶ್ರೀಧರ್, ಲಕ್ಷ್ಮೀಪತಿ, ನಾಗಭೂಷಣ್, ರಾಜಣ್ಣ, ವಿನಯ್ ಬಂಗಾರಿ, ತಿರುಮಲಪ್ಪ, ವೆಂಕಟೇಶ್, ರೈತ ಸಂಘದ ರಾಜ್ಯಾಧ್ಯಕ್ಷ ಜಿಜಿ ಹಳ್ಳಿ ನಾರಾಯಣಸ್ವಾಮಿ, ಕೆ. ವಿ.ಶ್ರೀಧರ್, ಕೆ.ಸಿ. ನಾರಾಯಣಸ್ವಾಮಿ, ನಾಗರಾಜ್, ಕೆ.ಸಿ.ಕೃಷ್ಣಪ್ಪ, ಕೆ.ಸಿ.ರಾಮಚಂದ್ರ, ಕೆ.ಎನ್.ಶಿವಶಂಕರ್, ವಿವಿಧ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರು.

Share this article