ಕನ್ನಡಪ್ರಭ ವಾರ್ತೆ ಹಾಸನ
ಮಾರುಕಟ್ಟೆಯಲ್ಲಿ ಶುಂಠಿ ದರ ತೀರಾ ಕುಸಿತವಾಗಿರುವುದರಿಂದ ಸರ್ಕಾರವು ಮಧ್ಯಪ್ರವೇಶ ಮಾಡಿ ಕ್ವಿಂಟಲ್‌ಗೆ ೭೦೦೦ ರು. ಬೆಲೆ ನಿಗದಿ ಮಾಡುವಂತೆ ರಾಜ್ಯ ಶುಂಠಿ ಬೆಳೆಗಾರರ ಸಂಘದಿಂದ ಮಂಗಳವಾರ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ ರಾಜ್ಯ ಶುಂಠಿ ಬೆಳೆಗಾರರ ಸಂಘದ ಭೋಮೇಶ್ ಮತ್ತು ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಗೌಡ ಮಾಧ್ಯಮದೊಂದಿಗೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶುಂಠಿ ಬೆಳೆಗಾರರು ಎದುರಿಸುತ್ತಿರುವ ಬೆಲೆ ಕುಸಿತದ ಸಮಸ್ಯೆ ಬಗ್ಗೆ ವರದಿ ನೀಡಿ ನಮ್ಮ ಜಿಲ್ಲೆಯ ಶುಂಠಿ ಬೆಳೆಗಾರರ ನೆರವಿಗೆ ತಕ್ಷಣ ಧಾವಿಸುವಂತೆ ಮಾಡಬೇಕೆಂದು ವಿನಂತಿಸಿದರು. ಇತ್ತೀಚಿನ ದಿನಗಳಲ್ಲಿ ಶುಂಠಿಯ ಮಾರುಕಟ್ಟೆ ದರದಲ್ಲಿ ಗಣನೀಯ ವ್ಯತ್ಯಾಸವಾಗಿ, ಬೆಲೆ ಕುಸಿತವಾಗಿದ್ದು, ಮಾರುಕಟ್ಟೆಯಲ್ಲಿ ಪ್ರಸ್ತುತ ಶುಂಠಿಯ ಬೆಲೆ ಪ್ರತಿ ಕ್ವಿಂಟಲ್‌ಗೆ ೧೫೦೦-೨೦೦೦ ರು.ಗಳಿಗೆ ತಲುಪಿ ಉತ್ಪಾದನಾ ವೆಚ್ಚವು ಕೈ ಸೇರದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉತ್ಪಾದಕ ರೈತನನ್ನು ಆರ್ಥಿಕ ಸಂಕಷ್ಟಗಳಿಂದ ಪಾರು ಮಾಡುವ ಸಲುವಾಗಿ ಹಲವಾರು ಯೋಜನೆಗಳಿದ್ದು, ಅವುಗಳಲ್ಲಿ ಒಂದಾದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಂಬಲ ಬೆಲೆ ನಿಗದಿ ಪಡಿಸಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ರೈತರಿಂದ ನೇರವಾಗಿ ಉತ್ಪನ್ನವನ್ನು ಖರೀದಿಸುವ ಯೋಜನೆ ಇದಾಗಿದೆ ಎಂದರು.೨೦೧೨ ಮತ್ತು ೨೦೨೩ರಲ್ಲಿ ಗಮನಿಸಿದರೆ ಅರಿಶಿಣಕ್ಕೆ ಬೆಲೆ ಕುಸಿತವಾದಾಗ ಬೆಂಬಲ ಬೆಲೆ ಯೋಜನೆಯನ್ನು ಜಾರಿ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಅಲ್ಲದೆ ೨೦೧೬-೧೭ ರಲ್ಲಿ ಬೆಲೆ ಕುಸಿತವಾದಾಗ ಅರುಣಾಚಲ ಪ್ರದೇಶದಲ್ಲಿ ಶುಂಠಿಯನ್ನು ಎಂಐಎಸ್ ಯೋಜನೆಯಡಿ ಖರೀದಿ ಮಾಡಲಾಗಿದೆ, ಅಲ್ಲದೆ ಮಿಜೋರಾಂನಲ್ಲಿ ಕನಿಷ್ಠ ಬೆಂಬಲ ಬೆಲೆಯಾಗಿ ೨೦೨೪ರಲ್ಲಿ ೫೦೦೦ ರು.ಗಳನ್ನು ಪ್ರತಿ ಕ್ವಿಂಟಲ್‌ಗೆ ನಿಗದಿ ಮಾಡಲಾಗಿದೆ ಎಂದು ಹೇಳಿದರು.
ಪ್ರಸ್ತುತ ಶುಂಠಿ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಾವುಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜೊತೆ ತ್ವರಿತವಾಗಿ ವ್ಯವಹರಿಸಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯನ್ನು ಶೀಘ್ರದಲ್ಲೇ ಜಾರಿಯಾಗುವಂತೆ ಮಾಡಿ ಖರೀದಿ ಕೇಂದ್ರಗಳ ಮೂಲಕ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಿ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸಹಕರಿಸುವಂತೆ ಕೋರಿದರು.ಇದೇ ವೇಳೆ ಜಿಲ್ಲಾಧ್ಯಕ್ಷ ಪ್ರವೀಣ್, ರುಕ್ಮಾನಂದ್, ಪ್ರಕಾಶ್, ಪ್ರಭಾಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.