ಕನ್ನಡಪ್ರಭ ವಾರ್ತೆ ದಾವಣಗೆರೆ
ಮೂರನೇ ಹಂತದ ಜನಾಕ್ರೋಶ ಯಾತ್ರೆಗೆ ಇಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿತ್ತು. ಅದಕ್ಕಾಗಿ ನಾವು ಜನಾಕ್ರೋಶ ಯಾತ್ರೆ ಮಾಡುತ್ತಿಲ್ಲ. ಯಾವುದೇ ಚುನಾವಣೆ, ಉಪ ಚುನಾವಣೆಗಳೂ ಸದ್ಯಕ್ಕಿಲ್ಲ. ರಾಜ್ಯಾಧ್ಯಕ್ಷ ವಿಜಯೇಂದ್ರ ವಿಜಯೋತ್ಸವಕ್ಕಾಗಿ ಈ ಯಾ ತ್ರೆಯಲ್ಲ. ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ, ಭ್ರಷ್ಟಾಚಾರ, ಹಗರಣ, ಸ್ವಜನ ಪಕ್ಷಪಾತ, ಹಗರಣಗಳು, ಬೆಲೆ ಏರಿಕೆ ವಿರುದ್ಧದ ಹೋರಾಟ ಇದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಬಿಜೆಪಿ ಜನಾಕ್ರೋಶ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬರೀ ಮುಸ್ಲಿಮರಿಗೆ ಸಿಎಂ ಆಗಿ, ಹಿಂದುಗಳ ವಿರೋಧಿಯಾಗಿದ್ದಾರೆ. ಅಹಿಂದ ಹೆಸರನ್ನೇಳಿಕೊಂಡೇ, ದಲಿತರ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ. ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರ ಹೊಲಕ್ಕೆ ಟಿಸಿ ಹಾಕಿಸಲು ₹35 ಸಾವಿರ ಸಾಕಾಗಿತ್ತು. ಈಗ ಟಿ.ಸಿ. ಬೇಕೆಂದರೆ ಲಕ್ಷ ಲಕ್ಷ ಖರ್ಚನ್ನು ರೈತರು ಮಾಡಬೇಕಾದ ಸ್ಥಿತಿ ಇದೆ. ಪರಿಣಾಮ ಬೆಳೆದ ಬೆಳೆಗೆ ನೀರು ಹಾಯಿಸಲು ಸಹ ರೈತರಿಂದ ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದರು.
ಜಮೀರ್ ವಿರುದ್ಧ ಗುಟುರು:ಹಿಂದುಗಳ ಭೂಮಿ, ಮಠಗಳ ಭೂಮಿ ನುಂಗಿದ್ದೀರಿ. ನಿಮ್ಮ ಪ್ರಚೋದನಾಕಾರಿ ಭಾಷಣಗಳಿಂದಲೇ ಗಲಭೆಗಳಾಗುತ್ತಿದ್ದು, ಮಿಸ್ಟರ್ ಜಮೀರ್ ಅಹಮ್ಮದ್ ಕರ್ನಾಟಕವೇನು ನಿಮ್ಮಪ್ಪನ ಮನೆ ಆಸ್ತಿ ಅಂದುಕೊಂಡಿದ್ದೀಯಾ? ಹುಷಾರಾಗಿರು ಜಮೀರ್ ಎಂದು ರೇಣುಕಾಚಾರ್ಯ ಕಿಡಿಕಾರಿದರು.
ರಾಹುಲ್ ಗಾಂಧಿ ಎಳಸು. ಇಂತಹ ಪಪ್ಪು ಗಾಂಧಿ ಕೈಯಲ್ಲಿ ಅಂಬೇಡ್ಕರ್ ಸಂವಿಧಾನ ಇಟ್ಟುಕೊಳ್ಳುತ್ತಾರೆ. ದೇಶದ ಇತಿಹಾಸದಲ್ಲೇ ಅಂಬೇಡ್ಕರ್‌ಗೆ ಸೋಲಿಸಿದ್ದು, ಅವಮಾನಿಸಿದ್ದು ನೀವು ಕಾಂಗ್ರೆಸ್ಸಿನವರು. ಹೋರಾಟಕ್ಕೆ ಮತ್ತೊಂದು ಹೆಸರೇ ದಾವಣಗೆರೆ. ಇಲ್ಲಿ ಕಾರ್ಯಕ್ರಮವಾದರೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಸರ್ಕಾರ ಬರಲಿದೆ ಎಂಧ ಅವರು, ಜನಾಕ್ರೋಶ ಯಾತ್ರೆಯ ಅಂತಿಮ ಸಮಾವೇಶವನ್ನು ನಮ್ಮ ಜಿಲ್ಲೆಯಲ್ಲಿಯೇ ಮಾಡಿ ಎಂದು ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದರು.ನಮ್ಮ ಪಕ್ಷದ ಜನಾಕ್ರೋಶ ಯಾತ್ರೆಯಿಂದ ಸಿಎಂ, ಡಿಸಿಎಂಗೆ ನಡುಕ ಶುರುವಾಗಿದೆ. ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಕುರ್ಚಿಯ ಬೋಲ್ಟ್-ನಟ್ಟನ್ನೇ ಲೂಸಿ ಮಾಡಿ, ಅದೇ ಕುರ್ಚಿ ಮೇಲೆ ಕೂಡಲು ಪ್ರಯತ್ನಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸಹ ಹಿಂದಿನ ಬಾಗಿಲಿನಿಂದ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಹೇಳುತ್ತಿದ್ದಾರೆ. ಇಬ್ಬರ ಜಗಳದಲ್ಲಿ ಕೂಸು ಬಡವಾದಂತೆ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.
- - -(ರೇಣುಕಾಚಾರ್ಯ)