ಕನ್ನಡಪ್ರಭ ವಾರ್ತೆ ಮಂಗಳೂರು
ಪೋಪ್ ಫ್ರಾನ್ಸಿಸ್ ಅವರು ಜಗತ್ತಿನ ಶತಕೋಟಿ ನಿಷ್ಠಾವಂತರ ಆಧ್ಯಾತ್ಮಿಕ ಗುರುವಾಗಿದ್ದಾರೆ. ಅವರ ಜೀವನ, ಬಡವರ ಮೇಲಿನ ಪ್ರೀತಿ, ಆರೈಕೆ ಮಾದರಿಯಾಗಿದೆ. ವ್ಯಾಟಿಕನ್‌ಗೆ ಭೇಟಿ ನೀಡುವ ವೇಳೆ ನನಗೂ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವ ಭಾಗ್ಯ ಲಭಿಸಿತ್ತು. ರಾಜ್ಯದ ಜನತೆ ಹಾಗೂ ಅಸೆಂಬ್ಲಿ ಪರವಾಗಿ ಪೋಪ್ ಫ್ರಾನ್ಸಿಸ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ ಎಂದು ಸ್ಪೀಕರ್ ಯು.ಟಿ.ಖಾದರ್ ಸಂದೇಶದಲ್ಲಿ ತಿಳಿಸಿದ್ದಾರೆ.
ಬಿಷಪ್ ಹೌಸ್‌ನಲ್ಲಿ ಸಂತಾಪ:ಮಂಗಳೂರು ಬಿಷಪ್ ಹೌಸ್‌ನಲ್ಲಿ ಸೋಮವಾರ ಸಂತಾಪ ಸೂಚಕ ಸಭೆ ನಡೆಯಿತು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಡಾ.ಪೀಟರ್ ಪೌಲ್ ಸಲ್ಡಾನಾ, ಕೆಥೋಲಿಕ್ ಸಭಾ ಮುಖಂಡ ಆಲ್ವಿನ್ ಡಿಸೋಜಾ ಮತ್ತಿತರರು ಪೋಪ್ ಫ್ರಾನ್ಸಿಸ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂತಾಪ ಸೂಚಿಸಿದರು.
ಪದ್ಮರಾಜ್ ಪೂಜಾರಿ ಸಂತಾಪ:ಕ್ರೈಸ್ತ ಸಮುದಾಯದ ಪ್ರಭಾವಿ ಧರ್ಮಗುರು ಹಾಗೂ ರೋಮನ್ ಕೆಥೊಲಿಕ್ ಚರ್ಚ್ ಮುಖ್ಯಸ್ಥರೂ ಆಗಿರುವ ಪೋಪ್ ಫ್ರಾನ್ಸಿಸ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ವಿಶ್ವ ಶಾಂತಿಗಾಗಿ ಅವರ ಕೊಡುಗೆ ಅಪಾರ. ವ್ಯಾಟಿಕನ್ ನಗರದದಲ್ಲಿ ಆಯೋಜಿಸಿದ್ದ ಸರ್ವಧರ್ಮ ಸಭೆಯಲ್ಲಿ ಪೋಪ್ ಅವರು ತಮ್ಮ ಆಶೀರ್ವಚನದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳನ್ನು ಸ್ಮರಿಸಿದ್ದಾರೆ. ಧರ್ಮಗುರುಗಳ ನಿಧನದಿಂದ ಶೋಕಸಾಗರದಲ್ಲಿ ಮುಳುಗಿರುವ ಎಲ್ಲ ಶಿಷ್ಯವರ್ಗಕ್ಕೂ ನೋವನ್ನು ಭರಿಸುವ ಶಕ್ತಿಯನ್ನು ಪರಿಗಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ ಸಂತಾಪದಲ್ಲಿ ತಿಳಿಸಿದ್ದಾರೆ.