ಲೋಕಾಪುರ : ಸಿದ್ದರಾಮಯ್ಯ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ, ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ೩೪೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ೭೩೫ ಬಾಣಂತಿಯರು ಸಾವಿಗೀಡಾಗಿದ್ದಾರೆ, ೧೧೦೦ ನವಜಾತ ಶಿಶುಗಳು ಮೃತಪಟ್ಟಿವೆ. 50 ಜನ ಹೆಣ್ಣುಮಕ್ಕಳ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾರೆ. ದಿನಬಳಕೆಯ ವಸ್ತುಗಳಾದ ಹಾಲು ಮೊಸರು, ತರಕಾರಿ, ಬಸ್ ದರ, ವಿದ್ಯುತ್ ಸೇರಿದಂತೆ ಸುಮಾರು ೫೦ ವಸ್ತುಗಳ ಬೆಲೆ ಹೆಚ್ಚಾಗಿವೆ. ಜನಸಾಮಾನ್ಯರು ಬದುಕುವುದು, ಹೆಣ್ಣುಮಕ್ಕಳು ಮನೆ ಸಂಸಾರ ನಡೆಸುವುದು ಕಷ್ಟವಾಗಿದೆ. ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ದರ ಹೆಚ್ಚು ಮಾಡಿದ್ದರಿಂದ ದುಡಿಯುವ ಜನ ದುಡಿದ ಹಣವನ್ನು ಸರಾಯಿ ಅಂಗಡಿಗೆ ಹಾಕುವಂತಾಗಿದೆ ಎಂದು ದೂರಿದರು.
ಕೇವಲ ಬಾಯಿ ಮಾತಿನಲ್ಲೇ ನುಡಿದಂತೆ ನಡೆದಿದ್ದೇವೆ ಎಂದು ಸಿದ್ದರಾಮಯ್ಯನವರು ಸುಳ್ಳು ಹೇಳುತ್ತಿದ್ದಾರೆ. ಪದವಿಧರರಿಗೆ ಮೂರು ಸಾವಿರ ರೂಪಾಯಿ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ₹೧೫೦೦ ಕೊಟ್ಟಿದ್ದೀರಾ? ಒಳಮೀಸಲಾತಿಯನ್ನು ಮೊದಲನೇ ಕ್ಯಾಬೇನೆಟ್‌ನಲ್ಲಿ ಕೊಡುತ್ತೀವಿ ಎಂದು ಹೇಳಿದ್ದೀರಿ ಕೊಟ್ಟರಾ, ದಿನಾ ಒಂದು ಕಥೆ ಹೇಳುತ್ತಾ ಹೊರಟ್ಟಿದ್ದೀರಿ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ವಕ್ಫ್ ಕಾಯ್ದೆ ಬಗ್ಗೆ ಕಾಂಗ್ರೆಸ್‌ನವರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ, ವಿರೋಧ ಪಕ್ಷಗಳು ಸಾಕಷ್ಟು ವಕ್ಫ್ ಆಸ್ತಿಗಳನ್ನು ಕಬ್ಜಾ ಮಾಡಿಕೊಂಡಿದ್ದಾರೆ, ಕೇಂದ್ರ ಸರಕಾರ ಹೊಸ ಕಾಯ್ದೆಯಿಂದ ವಕ್ಫ್ ಆಸ್ತಿಗಳಿಂದ ಬರುವ ಆದಾಯವನ್ನು ಹಿಂದುಳಿದ ಮುಸ್ಲಿಂ ಜನಾಂಗಕ್ಕೆ ಶಿಕ್ಷಣ, ಮಹಿಳೆಯರಿಗೆ, ಬಡವರ ಅಭಿವೃದ್ಧಿಗಾಗಿ ವಿನಿಯೋಗಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಮುಧೋಳ ತಾಲೂಕಿನಲ್ಲಿ ಘಟಪ್ರಭಾ ನದಿಯಲ್ಲಿ ಸುಮಾರು ೩೦ ಬೋಟ್‌ಗಳ ಮೂಲಕ ಅಕ್ರಮ ಮರಳು ತೆಗೆಯುತ್ತಿದ್ದಾರೆ, ಅಕ್ರಮ ಮರಳುಗಾರಿಕೆ ನಿಲ್ಲಿಸದಿದ್ದರೆ ನದಿಪಾತ್ರದ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ, ನದಿ ಹರಿಯುತ್ತಿರುವುದರಿಂದಲೇ ನಮ್ಮ ಮುಧೋಳ ತಾಲೂಕು ಶ್ರೀಮಂತಿಕೆ ಹೆಸರುವಾಸಿಯಾಗಿದೆ. ಭವಿಷ್ಯದ ದೃಷ್ಟಿಯಿಂದ ಆಕ್ರಮ ಮರಳುಗಾರಿಕೆ ನಿಲ್ಲಿಸಬೇಕಾಗಿದೆ, ನದಿಯಲ್ಲಿ ನೀರು ನಿಲ್ಲದಿದ್ದರೆ ಬೆಳೆಗಳಿಗೆ ನೀರು ಉಣಿಸಲು ಸಾಧ್ಯವಾಗುವುದಿಲ್ಲ, ನದಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಮರಳು ಗಣಿಗಾರಿಕೆ ನಡೆಯುತ್ತಿದೆ, ನದಿ ಪಾತ್ರದ ಜನರು ಏಕೆ ಸುಮ್ಮನಾಗಿದ್ದಾರೆ ಎಂದು ಗೊತ್ತಿಲ್ಲಾ ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡರಾದ ಮಹಾವೀರ ಟೋಪಣ್ಣವರ, ಬಿ.ಎಲ್.ಬಬಲಾದಿ, ಅರುಣ ಮುಧೋಳ ರವಿಗೌಡ ಖಜ್ಜಿಡೋಣಿ, ಗೋಪಾಲಗೌಡ ಪಾಟೀಲ, ವಿಜಯಕಾಂತ ದೇಸಾಯಿ, ದಶರಥ ದೊಡಮನಿ, ಅನೀಲ ಹಂಚಾಟೆ, ಅಜಮೀರ ಮುಧೋಳ, ಗುಣಾಕರ ಶೆಟ್ಟಿ ಇತರರು ಇದ್ದರು.