ಕನ್ನಡಪ್ರಭ ವಾರ್ತೆ ಉಡುಪಿ
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ತನಿಖೆಗೆ ರಾಜ್ಯಪಾಲರು ನೀಡಿರುವ ಅನುಮತಿಯನ್ನು ಪುರಸ್ಕರಿಸಿದ ಹೈಕೋರ್ಟ್ ಆದೇಶವು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಇನ್ನಷ್ಟು ಗಟ್ಟಿ ಮಾಡಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ, ಹಿರಿಯ ನ್ಯಾಯವಾದಿ ಮಟ್ಟಾರ್ ರತ್ನಾಕರ್ ಹೆಗ್ಡೆ ಹೇಳಿದರು.ಅವರು ಮಂಗಳವಾರ, ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ, ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದರು.ಮುಡಾ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ತೀರ್ಪಿಗೆ ತಲೆಬಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆಗೆ ಎದುರಿಸಲಿ. ದೋಷಮುಕ್ತರಾದ ಬಳಿಕ ಮತ್ತೆ ಸಿಎಂ ಆಗಲಿ. ಅದನ್ನು ಬಿಟ್ಟು ಮತ್ತೆ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ಬದಲು ನ್ಯಾಯಾಂಗಕ್ಕೆ ಗೌರವ ನೀಡಿ, ರಾಜಿನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಲಿ ಎಂದರು.ರಾಜ್ಯಪಾಲರು ಸಿಎಂ ವಿರುದ್ಧದ ಖಾಸಗಿ ದೂರುಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿಯೇ ತನಿಖೆಗೆ ಅನುಮತಿಯನ್ನು ನೀಡಿದ್ದರು. ಆದ್ದರಿಂದಲೇ ಅದರ ವಿರುದ್ಧ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ಕೂಡ ಈಗ ವಜಾವಾಗಿದೆ. ಈಗಲಾದರೂ ಅವರಿಗೆ ರಾಜ್ಯದ ಜನತೆಯ ಮೇಲೆ ಗೌರವ, ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿದ್ದರೆ, ರಾಜೀನಾಮೆ ಕೊಟ್ಟು ತನಿಖೆಯನ್ನು ಎದುರಿಸಲಿ ಎಂದು ಅವರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಜಿ.ಪ್ರ.ಕಾರ್ಯದರ್ಶಿ ದಿನಕರ್ ಶೆಟ್ಟಿ ಹೆರ್ಗ, ರೇಷ್ಮಾ ಉದಯ್ ಶೆಟ್ಟಿ, ಕಾಪು ಮಂಡಲ ಅಧ್ಯಕ್ಷ ಜೀತೆಂದ್ರ ಶೆಟ್ಟಿ ಉದ್ಯಾವರ, ಮುಖಂಡರಾದ ಸಂಧ್ಯಾ ರಮೇಶ್, ಶ್ಯಾಮಲಾ ಕುಂದರ್, ನಯನಾ ಗಣೇಶ್, ದಿನೇಶ್ ಆಮೀನ್, ಶ್ರೀನಿಧಿ ಹೆಗ್ಡೆ, ಶ್ರೀಶಾ ನಾಯಕ್ ಪೆರ್ಣಂಕಿಲ, ಮಾಜಿ ಶಾಸಕ ಲಾಲಾಜಿ, ಶಿವಕುಮಾರ್ ಅಂಬಲಪಾಡಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ವಿಜಯ್ ಕೊಡವೂರು ಉಪಸ್ಥಿತರಿದ್ದರು.