ಕಳಚಿದೆ ಸಿದ್ದರಾಮಯ್ಯ ಸಮಾಜವಾದಿ ಮುಖವಾಡ

KannadaprabhaNewsNetwork | Published : Jul 14, 2024 1:43 AM

ಸಾರಾಂಶ

ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣದ ಆರೋಪದ ನಂತರ ಸಿದ್ದರಾಮಯ್ಯನವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ. ಸಮಾಜವಾದಿ ಅಂತ ಹೇಳಿಕೊಳ್ಳುವವರ ಮುಖವಾಡ ಕಳಚಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣದ ಆರೋಪದ ನಂತರ ಸಿದ್ದರಾಮಯ್ಯನವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ. ಸಮಾಜವಾದಿ ಅಂತ ಹೇಳಿಕೊಳ್ಳುವವರ ಮುಖವಾಡ ಕಳಚಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಾನು ಪ್ರಾಮಾಣಿಕ ರಾಜಕಾರಣ ಮಾಡಿದ್ದೇನೆ. ನನ್ನ ಮೇಲೆ ಯಾವುದೇ ಭ್ರಷ್ಟಾಚಾರ ಇಲ್ಲ. ಕಪ್ಪು ಚುಕ್ಕೆ ಇಲ್ಲ ಅಂತ ಹೇಳಿಕೊಂಡು ಬಂದಿದ್ದಾರೆ. ಆದರೆ, ಮುಖ್ಯಮಂತ್ರಿಗಳ ಬಣ್ಣ ಬಯಲಾಗಿದೆ. ಮುಖವಾಡ ಕಳಚಿದೆ. ಅದಕ್ಕಾಗಿ ಇದೊಂದು ಭ್ರಷ್ಟ ಸರ್ಕಾರವಾಗಿದೆ ಎಂದು ಕುಟುಕಿದರು.

ಸಿಎಂ ಗಮನಕ್ಕೆ ಇಲ್ಲದೇ ಆಗಲ್ಲ:

ವಾಲ್ಮೀಕಿ ಹಗರಣದ ವಿಚಾರದಲ್ಲಿ ಯಾಕೆ ಸುಮ್ನೆ ಕುಂತಿರಿ. ನಿಮ್ಮದು ಹಣಕಾಸು ಇಲಾಖೆ. ಅವೆಲ್ಲ ಫೈಲ್ ಯಾವುದೇ ಒಂದು ಡಿಪಾರ್ಮೆಂಟ್‌ನಲ್ಲಿ ವಿತ್ ಡ್ರಾ ಆಗುತ್ತದೆ ಅಂದ್ರೆ, ಬೇರೆ ಅಕೌಂಟ್‌ಗೆ ಜಮಾ ಆಗುತ್ತದೆ ಅಂದ್ರೆ, ಅದೆಲ್ಲ ಫೈನಾನ್ಸ್ ಇಲಾಖೆಗೆ ಬಂದೇ ಬರುತ್ತದೆ. ಹಾಗಾದ್ರೆ ಅಧಿಕಾರಿಗಳನ್ನು ಏನ್ ಮಾಡಿದ್ರಿ? ಯಾಕೆ ಇದನ್ನು ಪ್ರಶ್ನೆ ಮಾಡಲಿಲ್ಲ. ಮುಖ್ಯಮಂತ್ರಿಗಳ ಕಡೆ ಫೈಲ್ ಬರುತ್ತೆ ಅವರು ಯಾಕೆ ಪ್ರಶ್ನೆ ಮಾಡಲಿಲ್ಲ? ಹಾಗಾದ್ರೆ ನಿಮ್ಮ ಇನ್ವಾಲ್ವ್ ಇಲ್ಲದಿದ್ರೆ, ನಿಮ್ಮ ಗಮನಕ್ಕೆ ಬರದೇ ಇದ್ರೆ, ಇದೆಲ್ಲ ನಡಿಲಿಕ್ಕೆ ಸಾಧ್ಯವಿಲ್ಲ. ಎಲೆಕ್ಷನ್ ಬಂದಿತ್ತು, ಎಲೆಕ್ಷನ್‌ಗೆ ಹಣ ಬೇಕಾಗಿತ್ತು. ಯಾರೋ ಮಂತ್ರಿಗಳು ಸರ್ ಇಲ್ಲಿಂದ ಹಣ ಬರುತ್ತದೆ ಅಂತ ಹೇಳಿದ ತಕ್ಷಣ, ಯಸ್ ಅಂತ ಒಪ್ಪಿಗೆ ಕೊಟ್ಟಿದ್ದೀರಿ ನೀವು. ಮುಖ್ಯಮಂತ್ರಿ ಗಮನಕ್ಕೆ ಬರದೇ ಇದು ಆಗಲಿಕ್ಕೆ ಸಾಧ್ಯವೇ ಇಲ್ಲ ಎಂದು ಆರೋಪಿಸಿದರು.

ಸಿಬಿಐ ತನಿಖೆಗೆ ಕೊಡಿ:

ಎಲ್ಲೋ ₹10 ಕೋಟಿ ಬಿಡುಗಡೆ ಮಾಡಬೇಕು ಅಂದ್ರೆ ನಾನೇ ನೋಡಿದ್ದೀನಿ, ಯಾವುದಾದರೂ ಒಂದು ಪ್ರಾಜೆಕ್ಟ್‌ಗೆ ₹10 ಕೋಟಿ ಬಿಡುಗಡೆ ಮಾಡಬೇಕು ಅಂದ್ರೆ, ಹಣಕಾಸು ಇಲಾಖೆಗೆ 10 ಸಲ ಅಡ್ಡಾಡಿದಿನಿ. ಅಲ್ಲಿ ಒಪ್ಪಿಗೆ ಇಲ್ಲದೇನೆ ಯಾವ ₹10 ಕೋಟಿ ಹಣನೂ ಬಿಡುಗಡೆ ಆಗಲ್ಲ. ಅಂತಹದರಲ್ಲಿ ನೂರಾರು ಕೋಟಿ ಹಣ ಬಿಡುಗಡೆ ಆಗುತ್ತದೆ. ಹಣಕಾಸು ಇಲಾಖೆ ಕೈಕಟ್ಟಿ ಕೂಡುತ್ತೆ ಅಂದ್ರೆ, ಇದರಲ್ಲಿ ಅವರದ್ದು ಇನ್ವಾಲ್ವ್‌ಮೆಂಟ್ ಇದೆ ಎಂದಾಯ್ತು ಎಂದು ಗಂಭೀರ ಆರೋಪ ಮಾಡಿದರು.ನೋಡಿ (ಸಿದ್ದರಾಮಯ್ಯ) ಭಂಡತನದ ರಾಜಕಾರಣ ಮಾಡಿದ್ರೆ ಯಾರು ಏನ್ ಮಾಡಬೇಕು. ಅದಕ್ಕಾಗಿ ಸಿಬಿಐ ತನಿಖೆಗೆ ಕೊಡಿ ಅಂತ ಹೇಳುತ್ತೇನೆ. ಇಡಿ ಆದಮೇಲೆ ಹೊಸ ವಿಚಾರಗಳು ಹೊರಗೆ ಬರುತ್ತಿವೆ. ಅದಕ್ಕಾಗಿ ಸಿಬಿಐ ತನಿಖೆಗೆ ಕೊಡಿ, ಎಲ್ಲ ನಿಜಾಂಶ ಹೊರಗೆ ಬರುತ್ತದೆ. ಸಿದ್ದರಾಮಯ್ಯನವರ ಬಣ್ಣ ಬಯಲಾಗುತ್ತೆ ಎಂದರು.

ಪ್ಲಾಟ್‌ ಪಡೆಯಲು ಹುನ್ನಾರ:

2009-10ರಲ್ಲಿ ರಿಕಾರ್ಡ್‌ ಆಫ್‌ ರೈಟ್ಸ್‌ನಲ್ಲಿ ಭೂಸ್ವಾಧೀನ ಅಂತಾನೆ ಇದೆ. ಆ ಹೆಸರನ್ನು ಯಾಕೆ ಕಡಿಮೆ ಮಾಡಲಿಲ್ಲ. ನೀವು ಮಾಲೀಕರಾಗಿದ್ದರೆ ನಿಮ್ಮ ಹೆಸರು ಬಂದ ಮೇಲೆ, ಮೊದಲು ಮಲ್ಲಿಕಾರ್ಜುನ ಸ್ವಾಮಿ ಹೆಸರಲ್ಲಿ ಸೇಲ್ ಡೀಡ್ ಆಗುತ್ತದೆ. ನಂತರ ಸಿದ್ದರಾಮಯ್ಯ ಅವರ ಪತ್ನಿ ಹೆಸರಲ್ಲಿ ಗಿಫ್ಟೆಡ್‌ ಆಗುತ್ತದೆ. ಇವೆಲ್ಲ ಎಂಟ್ರಿ ಆದಮೇಲೆ ಭೂಸ್ವಾಧೀನ ಆಗಿದೆ ಎನ್ನುವ ಪ್ರಕ್ರಿಯೆ ನಡೆದ ಮೇಲೆ ಅದನ್ನು ತೆಗೆದು ಹಾಕಬಹುದಿತ್ತಲ್ಲ. ಆ ಪ್ರಯತ್ನವನ್ನೇ ಮಾಡಲಿಲ್ಲ. ಅಂದರೆ ಮುಡಾದವರು ತಪ್ಪು ಮಾಡಲಿ, ಅದರ ಡಿಫಾಲ್ಟ್‌ನಿಂದ ನಾನು ಬೆಲೆ ಬಾಳುವ ಪ್ಲಾಟ್ ಪಡೆದುಕೊಳ್ಳಬೇಕೆಂಬ ಹುನ್ನಾರ ನಿಮ್ಮದಾಗಿತ್ತು ಎಂದು ಆರೋಪ ಮಾಡಿದರು.

ರಾಜೀನಾಮೆ ನೀಡಲಿ:

ಎಚ್‌.ಸಿ.ಮಹದೇವಪ್ಪನವರು ಬೇರೆಯವರು ಹೇಳ್ತಾರೆ. ಬೇರೆಯವರು ಸೈಟ್ ಪಡೆದಿದ್ದಾರೆ. ಬದಲಿ ನಿವೇಶನ ತಗೊಂಡಿದಾರೆ ಅಂತಾರೆ. ಆಯ್ತು ಎಲ್ಲ ಪಕ್ಷದವರು ತಗೊಂಡಿದ್ದು ತನಿಖೆ ಆಗಲಿ. ಸಿಬಿಐ ತನಿಖೆಗೆ ಕೊಡಲಿ. ಮುಖ್ಯಮಂತ್ರಿ ಪರವಾಗಿ ಇರೋರು ಇದನ್ನು ಯಾರಾದರೂ ಹೊರಹಾಕಬೇಕಿತ್ತು. ಯಾರೂ ಹಾಕಲಿಲ್ಲ. ಇದರ ಮೇಲೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದರಲ್ಲಿ ಮುಖ್ಯಮಂತ್ರಿಗಳು ಶಾಮೀಲಾಗಿದ್ದಾರೆ ಅಂತ. ಅದಕ್ಕಾಗಿ ಅವರು ತಕ್ಷಣ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಬಿಜೆಪಿ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು.

----

ಬಾಕ್ಸ್‌

ಜಾತಿ ಎತ್ತಿಕಟ್ಟಲು ಸಿಎಂ ಪ್ರಯತ್ನ

ಹಿಂದುಳಿದ ವರ್ಗದ ವ್ಯಕ್ತಿ 2ನೇ ಸಲ ಸಿಎಂ ಆಗಿದ್ದಕ್ಕೆ ಬಿಜೆಪಿಗೆ ಹೊಟ್ಟೆ ಉರಿ ಎಂದು ಜಾತಿ ಎತ್ತಿಕಟ್ಟುವ ಸಿದ್ದರಾಮಯ್ಯ ಪ್ರಯತ್ನ ನಿಜಕ್ಕೂ ಆಘಾತಕಾರಿ ಎಂದ ಶೆಟ್ಟರ್, ಭ್ರಷ್ಟಾಚಾರದ ವಿಚಾರದಲ್ಲಿ ಜಾತಿ ಸಮೀಕರಣ ತರಲೇ ಬಾರದು. ಭ್ರಷ್ಟಾಚಾರ, ಹಗರಣಕ್ಕೆ ಜಾತಿ ಗೀತಿ ಸಂಬಂಧ ಇಲ್ಲ. ನರೇಂದ್ರ ಮೋದಿ ಹಿಂದುಳಿದ ವರ್ಗದಿಂದ ಬಂದವರಲ್ಲವೇನು? ಮತ್ತೆ ಅವರನ್ನು ಇಳಿಸಲಿಕ್ಕೆ, ಮತ್ತೆ ಪ್ರಧಾನಮಂತ್ರಿ ಆಗಬಾರದು ಅಂತ, ರಾಹುಲ್ ಗಾಂಧಿ ಸೇರಿ ಇಡೀ ಕಾಂಗ್ರೆಸ್ ಹೋರಾಟ ಮಾಡಿತಲ್ಲ. ಅವರ ಭಾಷಣ ಕೇಳುವಷ್ಟು ನಿಮಗೆ ವ್ಯವದಾನ ಇಲ್ಲ. ಹಿಂದುಳಿದ ವರ್ಗದ ಪ್ರಧಾನಮಂತ್ರಿಗೆ ನೀವು (ಕಾಂಗ್ರೆಸ್) ಅಪಮಾನ ಮಾಡ್ತಿರಿ. ಇಲ್ಲಿ ಭ್ರಷ್ಟಾಚಾರದ ಆಪಾದನೆ ಬಂದರೆ ಜಾತಿ ತರುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

----------

ಕೆಂಪಣ್ಣ ವರದಿ ಮಂಡಿಸಲು ಆಗ್ರಹ

ಹಿಂದೆ ಅರ್ಕಾವತಿ ಪ್ರಕರಣದಲ್ಲಿ, ರಿಡೂ ಮಾಡಿದ ಸಿದ್ದರಾಮಯ್ಯ ವಿರುದ್ಧ ನಾವು ದೊಡ್ಡ ಪ್ರಮಾಣದ ಹೋರಾಟ ಮಾಡಿದ್ದೇವೆ. ಆಗಲೂ ನಾವು ಸಿಬಿಐಗೆ ಒತ್ತಾಯ ಮಾಡಿದ್ದೆವು. ನ್ಯಾಯಾಂಗ ತನಿಖೆ ಮಾಡ್ತೀವಿ ಅಂತಾ ನ್ಯಾಯಮೂರ್ತಿ ಕೆಂಪಣ್ಣ ಆಯೋಗವನ್ನು ನೇಮಕ ಮಾಡಿ, ತನಿಖೆ ಆಯ್ತು. ಆದ್ರೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿ ಏನಾಗಿದೆ? ಅದ್ರಲ್ಲಿ ಏನಿತ್ತು ಎಂದು ಬಹಿರಂಗಪಡಿಸಲಿ. ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ನಾನು ನಿರಪರಾಧಿ ಎಂದು ಪದೇ ಪದೇ ಹೇಳುವ ಸಿದ್ದರಾಮಯ್ಯ ಅವರು, ಕೆಂಪಣ್ಣ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಿ ಎಂದು ಆಗ್ರಹಿಸಿದರು.

Share this article