ಸಿದ್ದರಾಮಯ್ಯ ನಾಲಿಗೆಯನ್ನು ಹದ್ದುಬಸ್ತಿನಲ್ಲಿಡಲಿ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ

KannadaprabhaNewsNetwork |  
Published : Nov 04, 2024, 12:49 AM ISTUpdated : Nov 04, 2024, 08:18 AM IST
prahlad joshi

ಸಾರಾಂಶ

ಪ್ರಧಾನಿ ಅವರಿಗೆ ಪುಡಾರಿ ಅಂತ ಮಾತನಾಡುವುದು ಸಿದ್ದರಾಮಯ್ಯ ಸಂಸ್ಕೃತಿ ತೋರಿಸುತ್ತದೆ. ಇದ್ದ ಸಂಗತಿಯನ್ನು ಪ್ರಧಾನಿಗಳು ವಿಶ್ಲೇಷಣೆ ಮಾಡಿದ್ದಾರೆ. ಇದಕ್ಕೆ ಸೌಜನ್ಯಯುತವಾಗಿ ಸಮರ್ಥನೆ ಕೊಡಿ.

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಅವರಿಗೆ ಪುಡಾರಿ ಅಂತ ಮಾತನಾಡುವುದು ಸಿದ್ದರಾಮಯ್ಯ ಸಂಸ್ಕೃತಿ ತೋರಿಸುತ್ತದೆ. ಇದ್ದ ಸಂಗತಿಯನ್ನು ಪ್ರಧಾನಿಗಳು ವಿಶ್ಲೇಷಣೆ ಮಾಡಿದ್ದಾರೆ. ಇದಕ್ಕೆ ಸೌಜನ್ಯಯುತವಾಗಿ ಸಮರ್ಥನೆ ಕೊಡಿ. ಅದನ್ನು ಬಿಟ್ಟು ಪುಡಾರಿ ಇತ್ಯಾದಿಯಾಗಿ ಮಾತನಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗ್ಯಾರಂಟಿ ಬಗ್ಗೆ ಹೇಳಿದ್ದಾರೆ. ಗ್ಯಾರಂಟಿಯಿಂದ ಅಭಿವೃದ್ಧಿ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ಹೇಳಿದ್ದಾರೆ. ನಿಮ್ಮ ಶಾಸಕರೇ ನಿಮ್ಮ ವಿರುದ್ಧ ಮಾತನಾಡಿದ್ದಾರೆ.

ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಬಿ.ಆರ್. ಪಾಟೀಲ ಮತ್ತಿತರರು ಹೇಳಿಕೆ ನೀಡುತ್ತಿದ್ದಾರೆ. ನಿಮ್ಮ ಶಾಸಕರೇ ಹೇಳುತ್ತಿರುವಾಗ ಪ್ರಧಾನ ಮಂತ್ರಿಗಳು ಅದರ ಬಗ್ಗೆ ಮಾತನಾಡಿದ್ದಾರೆ ಅಷ್ಟೇ ಎಂದರು.

ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ ಎನ್ನುವುದಕ್ಕೆ ಅವರ ಹತಾಶ ಮನಸ್ಥಿತಿಯೇ ಸಾಕ್ಷಿ. ಮಿಸ್ಟರ್ ಸಿದ್ದರಾಮಯ್ಯ ಮೈಂಡ್ ಯುವರ್ ಲಾಂಗ್ವೇಜ್ ಎಂದು ಟೀಕಿಸಿದ ಅವರು, ಜನ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.

ಹೋರಾಟ

ವಕ್ಫ್ ಆಸ್ತಿ ಹೆಸರಲ್ಲಿ ಕಬಳಿಕೆ ಹುನ್ನಾರ ನಡೆದಿದೆ. ಇದರ ವಿರುದ್ಧ ಸೋಮವಾರ ಬಿಜೆಪಿಯಿಂದ ಹೋರಾಟ ಮಾಡುತ್ತೇವೆ. ವಕ್ಫ್ ಆಸ್ತಿ ಎಂದು ನಮೂದು ಮಾಡಿರುವ ಜಾಗದಲ್ಲಿ ಮನೆಗಳಿವೆ. ಅವುಗಳನ್ನು ವಿಭಾಗ ಮಾಡಿಕೊಳ್ಳುವುದು ಕಷ್ಟ. ವಕ್ಫ್ ಅಂತ ನಮೂದಾದ ಆಸ್ತಿ ಮೇಲೆ ಸಾಲ ಪಡೆಯುವುದು ಕಷ್ಟ. ಅದನ್ನು ಮಾರಾಟ ಮಾಡುವುದಕ್ಕೂ ಆಗುವುದಿಲ್ಲ. ಇಷ್ಟೆಲ್ಲ ಗೊಂದಲಗಳಿದ್ದರೂ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದರು.

ನೋಟಿಸ್ ಮತ್ತು ಕಲಂ 11ರಲ್ಲಿ ನಮೂದು ಆಗಿರುವುದು ಗಂಭೀರ ವಿಷಯ. ಜನ ತಮ್ಮ ಪಹಣಿ ಚೆಕ್ ಮಾಡಿಕೊಳ್ಳಲಿ. ವಕ್ಫ್ ಕಾನೂನು ಹೆಸರಲ್ಲಿ ದುರ್ಬಳಕೆ ನಡೆದಿದೆ. ಹಾವೇರಿಯಲ್ಲಿ ರೈತರಿಗೆ ಕೊಟ್ಟ ನೋಟಿಸ್ ಕೂಡಲೇ ವಾಪಸ್ ಪಡೆಯಬೇಕು ಎಂದರು.

ವಕ್ಫ್ ಆಸ್ತಿಗಳ ರಾಷ್ಟ್ರೀಕರಣ ಮಾಡಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ ಪತ್ರ ಬರೆದಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ