ಜಾತಿ ಗಣತಿ ವರದಿ ಶೀಘ್ರ ಸಂಪುಟಕ್ಕೆ: ಸಿಎಂ

KannadaprabhaNewsNetwork |  
Published : May 21, 2024, 12:32 AM ISTUpdated : May 21, 2024, 07:03 AM IST
ಸಿದ್ದರಾಮಯ್ಯ | Kannada Prabha

ಸಾರಾಂಶ

ವರದಿ ಸ್ವೀಕರಿಸದಂತೆ ತುಂಬಾ ಒತ್ತಡವಿತ್ತು. ಆದರೆ ಸಾಮಾಜಿಕ ನ್ಯಾಯ ತತ್ವಕ್ಕಾಗಿ ಸ್ವೀಕರಿಸಿದ್ದೇವೆ. ಇದರಿಂದ ಯಾವುದೇ ಸಮುದಾಯಕ್ಕೂ ತೊಂದರೆಯಾಗುವುದಿಲ್ಲ. ಜೊತೆಗೆ ವರದಿಯನ್ನು ನಾನು ನೋಡಿಲ್ಲ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 ಬೆಂಗಳೂರು :  ‘ರಾಜ್ಯದಲ್ಲಿ ಜಾತಿಗಣತಿ (ಸಾಮಾಜಿಕ, ಆರ್ಥಿಕ ಸಮೀಕ್ಷೆ) ವರದಿ ಸ್ವೀಕರಿಸಬೇಡಿ ಎಂದು ತುಂಬಾ ಒತ್ತಡ ಹೇರಿದರು. ಆದರೆ ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು ಸಮಬಾಳು ಎನ್ನುವ ಮೌಲ್ಯ ಕಾಪಾಡಲು ವರದಿ ಸ್ವೀಕರಿಸಿದ್ದೇವೆ. ಸದ್ಯದಲ್ಲೇ ಸಚಿವ ಸಂಪುಟ ಸಭೆ ಮುಂದಿಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇದೇ ವೇಳೆ ಜಾತಿಗಣತಿ ವರದಿಯಿಂದ ಯಾವುದೇ ಸಮುದಾಯಕ್ಕೂ ತೊಂದರೆಯಾಗುವುದಿಲ್ಲ. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ದುರ್ಬಲರನ್ನು ಪತ್ತೆಹಚ್ಚಲು ಸಾಮಾಜಿಕ, ಆರ್ಥಿಕ ಸಮೀಕ್ಷೆ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿಗಣತಿ ವರದಿ ಸ್ವೀಕರಿಸಬೇಡಿ ಎಂದು ಒತ್ತಡ ಹೇರಿದರು. ಆದರೆ, ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು ಹಾಗೂ ಸರ್ವರಿಗೂ ಸಮಬಾಳು ಎನ್ನುವ ಮೌಲ್ಯ ಕಾಪಾಡಲು ವರದಿ ಸ್ವೀಕರಿಸಿದೆವು. ಸದ್ಯಕ್ಕೆ ವರದಿ ಸ್ವೀಕರಿಸಿದ್ದೇವೆ ಅಷ್ಟೆ, ಇನ್ನೂ ನೋಡಿಲ್ಲ. ವರದಿಯನ್ನು ಸಚಿವ ಸಂಪುಟದ ಮುಂದೆ ಇಡುತ್ತೇವೆ ಎಂದರು.

ಮೀಸಲಾತಿ ವಿರೋಧಿಸುತ್ತಿರುವ ಬಿಜೆಪಿಯ ನರೇಂದ್ರ ಮೋದಿ ಅವರೇ ಆರ್ಥಿಕವಾಗಿ ಹಿಂದುಳಿದವರಿಗಾಗಿ ಇಡಬ್ಲ್ಯೂಎಸ್‌ ಮೀಸಲಾತಿ ಜಾರಿಗೆ ತಂದರು. ಹೀಗಾಗಿ ದೇಶದಲ್ಲಿ ಮೀಸಲಾತಿಯ ಅನುಕೂಲ ಪಡೆಯದ ಯಾವುದೇ ಜಾತಿ ಹಾಗೂ ವರ್ಗಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.ಇನ್ನು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರ ಮಟ್ಟದಲ್ಲಿ ಜಾತಿ ಗಣತಿ ಮಾಡುವುದಾಗಿ ಘೋಷಿಸಿದ್ದೇವೆ. ಸರ್ವರಿಗೂ ಸಮಪಾಲು, ಸಮಬಾಳು ತತ್ವ ಪಾಲಿಸುವುದಕ್ಕಾಗಿಯೇ ಕೇಂದ್ರ ಮಟ್ಟದಲ್ಲೂ ಕಾಂಗ್ರೆಸ್‌ ಈ ನಿರ್ಧಾರ ಮಾಡಿದೆ ಎಂದು ಸಮರ್ಥಿಸಿಕೊಂಡರು.

ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ: ಸಿದ್ದು

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೊಲೆಗಳ ಪ್ರಮಾಣ ಕಡಿಮೆಯಾಗಿದೆ ಎಂದು ಅಂಕಿ-ಅಂಶಗಳ ಸಹಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.ನೇಹಾ ಕೊಲೆ ಪ್ರಕರಣದ ಆರೋಪಿ ಬಂಧಿತನಾಗಿ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಆಗಿದೆ. 2022-23ರಲ್ಲಿ ರಾಜ್ಯದಲ್ಲಿ 446 ಕೊಲೆಗಳು ವರದಿಯಾಗಿದ್ದವು. 2023-24ರಲ್ಲಿ 430 ಆಗಿವೆ. ಆದರೆ ಈ ಅಂಕಿ-ಅಂಶಗಳಿಗಿಂತ ನಮಗೆ ಸಮಾಜದ ಸ್ವಾಸ್ಥ್ಯ ಮುಖ್ಯ. ಹೀಗಾಗಿ ಅಧಿಕಾರಿಗಳಿಗೆ ಅಪರಾಧ ತಡೆಗಟ್ಟಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಕರ್ತವ್ಯಲೋಪ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ ಎಂದರು.

ಸಂಪುಟ ಪುನಾರಚನೆ ಸದ್ಯಕ್ಕೆ ಇಲ್ಲ: ಸಿಎಂಸದ್ಯಕ್ಕೆ ಸಂಪುಟ ವಿಸ್ತರಣೆ, ಪುನರ್ ರಚನೆ ವಿಚಾರ ನಮ್ಮ ಮುಂದೆ ಇಲ್ಲ. ಆದರೆ ಹೈಕಮಾಂಡ್ ನಿರ್ದೇಶನದಂತೆ ನಮ್ಮ ಪಕ್ಷದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಸಿದ್ದರಾಮಯ್ಯ ಅವರು ಹೇಳಿದರು. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಸಂಪುಟ ಪುನರ್‌ರಚನೆ ಆಗುತ್ತದೆಯೇ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.

ಕರ್ನಾಟಕದಿಂದ ಪಿಎಂ ಅಭ್ಯರ್ಥಿ ಆಗುವವರು ಯಾರೂ ಇಲ್ಲ: ಸಿಎಂ

ಕರ್ನಾಟಕದಿಂದ ಪ್ರಧಾನಮಂತ್ರಿ ಅಭ್ಯರ್ಥಿ ಆಗುವವರು ಯಾರೂ ಇಲ್ಲ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಎಲ್ಲಾ ಪಕ್ಷಗಳೂ ಸೇರಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಚರ್ಚಿಸಿ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್‌ಡಿಎ ಮೈತ್ರಿ ಕೂಟದಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ
ಪತ್ರಕರ್ತರಿಗೆ ಸ್ಪಂದಿಸುತ್ತಿದ್ದ ಶಾಮನೂರು ಸದಾ ಸ್ಮರಣೀಯ