ಸುದ್ದಿಗೋಷ್ಠಿ । ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಗೌಡ । ಎಂ.ಆರ್.ಪುಟ್ಟಸ್ವಾಮಿ ಅಭಿಮಾನಿ ಬಳಗ ಕ್ರಮ
ಕನ್ನಡಪ್ರಭ ವಾರ್ತೆ ಹಾಸನಜಿಲ್ಲಾ ಒಕ್ಕಲಿಗರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ದಾನಿಗಳಾದ ಅಂದಿನ ಅಬಕಾರಿ ಗುತ್ತಿಗೆದಾರ ಎಂ.ಚೌಡಯ್ಯ ಅವರ ಮಗ ಎಂ.ಸಿ. ರಾಮಪ್ಪ ಅವರ ಮಗ ಪಿಕ್ಚರ್ ಪ್ಯಾಲೇಸ್ ಚಿತ್ರಮಂದಿರದ ಮಾಲೀಕ ಎಂ.ಆರ್.ಪುಟ್ಟಸ್ವಾಮಿ ಸುಮಾರು ಒಂದು ಎಕರೆಯಷ್ಟು ಜಾಗವನ್ನು ದಾನ ನೀಡಿದ್ದು, ಇವರನ್ನು ಸ್ಮರಿಸುವ ಕಾರ್ಯಕ್ರಮ ರೂಪಿಸಬೇಕು. ಇಲ್ಲವಾದರೆ ಮೇ ೨೨ ರಂದು ಕಟ್ಟಡದ ನಾಮಫಲಕ ಅಳವಡಿಸುವ ಕಾರ್ಯಕ್ರಮವನ್ನು ಎಂ.ಆರ್.ಪುಟ್ಟಸ್ವಾಮಿ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಗೌಡ ಎಚ್ಚರಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ‘ಈ ಜಾಗದಲ್ಲಿ ಒಕ್ಕಲಿಗ ಸಂಘದ ಸಂಕೀರ್ಣ ಹಾಗೂ ವಿದ್ಯಾರ್ಥಿನಿಲಯ ಇದೆ. ಸಮುದಾಯದ ಶ್ರೇಯೋಭಿವೃದ್ಧಿ ಹಾಗೂ ಮಕ್ಕಳ ವಿದ್ಯಾರ್ಜನೆ ಅನುಕೂಲವಾಗಲಿ ಎಂದು ಎಂ.ಆರ್.ಪುಟ್ಟಸ್ವಾಮಯ್ಯ ೧೯೨೫ ರಿಂದ ೩೦ರ ಇಸವಿಯಲ್ಲಿ ದಾನ ನೀಡಿರುವುದು ಹೆಮ್ಮೆಯ ವಿಷಯ. ಇದರಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವುದು ಶ್ಲಾಘನೀಯ. ಆದರೆ ಸಂಘದ ಕಟ್ಟದಲ್ಲಿ ಮಾತ್ರ ಇವರ ಹೆಸರು ನಮೂದಿಸಿರುವುದು ಬಿಟ್ಟರೆ ಕಟ್ಟಡದ ಯಾವುದೇ ಸ್ಥಳದಲ್ಲಿ ಇವರ ನೆನಪಿಗಾಗಿ ಹೆಸರು ಕೆತ್ತನೆ ಮಾಡದ ಕಾರಣ ಮೇ.೨೨ರ ಬುಧವಾರ ಎಂ.ಆರ್. ಪುಟ್ಟಸ್ವಾಮಿ ಅವರ ಅಭಿಮಾನಿಗಳ ಬಳಗದಿಂದ ಒಕ್ಕಲಿಗರ ಸಂಘದ ಕಟ್ಟಡಕ್ಕೆ ದಾನಿಗಳ ನಾಮಫಲಕ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಹೂವಿನ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ನಂಗರರ ಅಲ್ಲಿಂದ ಬಿ.ಎಂ.ರಸ್ತೆ ಮೂಲಕ ಒಕ್ಕಲಿಗರ ಸಂಘದ ಕಟ್ಟಡ ಬಳಿ ಹೋಗಿ ನಾಮಫಲಕವನ್ನು ಅಳವಡಿಸಲಾಗುವುದು. ನಂತರ ಸಿಹಿ ಹಂಚಲಾಗುವುದು. ಹಾಗಾಗಿ ಕಾರ್ಯಕ್ರಮಕ್ಕೆ ಒಕ್ಕಲಿಗ ಸಮುದಾಯದ ಮುಖಂಡರು, ಎಂ.ಆರ್.ಪುಟ್ಟಸ್ವಾಮಿ ಅಭಿಮಾನಿಗಳು ಹಾಗೂ ಈ ಕಟ್ಟಡದಲ್ಲಿ ವಿದ್ಯೆ ಕಲಿತ ವಿದ್ಯಾರ್ಥಿಗಳು ಆಗಮಿಸಬೇಕು ಎಂದು ಹೇಳಿದರು.
ಒಕ್ಕಲಿಗರ ಸಂಘದ ಬೇರೆ ಯಾವುದೇ ಕಾರ್ಯ ಚಟುವಟಿಕೆಗಳಲ್ಲಿ ದಾನಿಗಳ ಹೆಸರನ್ನು ಉಲ್ಲೇಖ ಮಾಡದಿರುವುದು ಖಂಡನೀಯ. ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ನಿಮಿತ್ತ ಪೂರ್ವಬಾವಿ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಸಂಘದ ಬಗ್ಗೆ ಚರ್ಚೆ ನಡೆದಾಗ ಯಾರೊಬ್ಬರೂ ದಾನ ನೀಡಿರುವುದನ್ನು ಸ್ಮರಿಸದೆ ಕಡೆಗಣಿಸಿರುವ ನೋವಿನ ಸಂಗತಿಯಾಗಿದೆ. ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ದಾನ ನೀಡಿರುವ ಮಹನೀಯರ ಹೆಸರನ್ನು ಸಂಘದ ಕಟ್ಟದಲ್ಲಿ ಕೆತ್ತನೆ ಮಾಡಿಸಬೇಕು. ಇದರಿಂದ ಮುಂದಿನ ಪೀಳಿಗೆಗೆ ದಾನ ಮಾಡಿರುವ ಮಹನೀಯರು ಬಗ್ಗೆ ತಿಳಿಸಿ ಸ್ಮರಿಸಿದಂತೆ ಆಗುತ್ತದೆ ಎಂದು ಹೇಳಿದರು.ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಸಮಾಜದಲ್ಲಿ ವಿದ್ಯಾರ್ಜನೆ ಮಾಡಿ ಎಲ್ಲರಂತೆ ಬದುಕುಬೇಕು ಎಂಬ ಕಲ್ಪನೆಯೊಂದಿಗೆ ಇವರೇ ಸ್ವಂತ ಜಾಗ ನೀಡಿ ಅವರೇ ಪಂಚಮ ಶಾಲೆ ಕಟ್ಟಿಸಿದ್ದು ಈಗಲೂ ಇದೆ. ಈ ಶಾಲೆಯನ್ನು ಅಂದು ಸರ್.ಎಂ.ವಿಶ್ವೇಶ್ವರಯ್ಯ ಅವರು ಉದ್ಘಾಟಿಸಿದ್ದಾರೆ. ಇದಲ್ಲದೆ ಅರಸೀಕೆರೆ ಚಿಕ್ಕ ತಿರಪತಿ ಕೊಳದ ಪಕ್ಕದಲ್ಲಿ ೧೯೩೧ ರಲ್ಲಿ ಎಂ.ಆರ್ ಪುಟ್ಟಸ್ವಾಮಯ್ಯ, ಕೆ.ವಿ.ವೆಂಕಟಸ್ವಾಮಪ್ಪ, ಕೆಂಚಪ್ಪರವರು ಛತ್ರ ಕಟ್ಟಿಸಿಕೊಟ್ಟಿದ್ದಾರೆ. ದಾನ ಮಾಡಿರುವವರನ್ನು ನೆನಪಿಸಿಕೊಂಡು ಅವರನ್ನು ನೆನಪಿಸಿಕೊಳ್ಳುವುದು ಅಗತ್ಯ. ಆದರೆ ಇಂದು ಅಂತವರನ್ನು ಮರೆಯುವಂತ ಕೆಲಸವನ್ನು ಜಿಲ್ಲಾ ಒಕ್ಕಲಿಗರ ಸಂಘ ಮಾಡುತ್ತಿರುವುದು ಖಂಡನೀಯ ಎಂದರು.