;Resize=(412,232))
ಬೆಂಗಳೂರು : ಕರುನಾಡಿನ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ದಾಖಲೆ ಸೃಷ್ಟಿಯ ಹೆಬ್ಬಾಗಿಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಂತಿದ್ದಾರೆ. ನಾಡಿನ ಈವರೆಗಿನ ಅತಿ ಸುದೀರ್ಘ ಅವಧಿಯವರೆಗೆ ಮುಖ್ಯಮಂತ್ರಿಯಾಗಿದ್ದ ದಿ.ದೇವರಾಜ ಅರಸು ಅವರ ದಾಖಲೆ ಮಂಗಳವಾರ ಸರಿಗಟ್ಟಲಿದ್ದಾರೆ.
ಇನ್ನೊಂದೇ ದಿನ ಅಂದರೆ ಬುಧವಾರ ಅರಸು ಅವರ ಹೆಸರಿನಲ್ಲಿ ಈವರೆಗೂ ಇದ್ದ ದಾಖಲೆಯನ್ನು ಮುರಿದು ‘ನಾಡಿನ ಅತಿ ಸುದೀರ್ಘ ಅವಧಿಯ ಸಿಎಂ’ ಎಂಬ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.
ಜ.6ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 2,792 ದಿನ ಪೂರೈಸಲಿದ್ದು, ಆ ಮೂಲಕ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಲಿದ್ದಾರೆ. ದೇವರಾಜ ಅರಸು ಅವರು 1972ರ ಮಾ.20 ರಂದು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದಿದ್ದರು. 1977ರ ಡಿ.31ರವರೆಗೆ ಅಂದರೆ 5 ವರ್ಷ 286 ದಿನಗಳ ಕಾಲ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದರು.
ಬಳಿಕ 1978ರ ಫೆ.28ರಿಂದ 1980ರ ಜ.12ರವರೆಗೆ ಅಂದರೆ 1 ವರ್ಷ 318 ದಿನಗಳ ಕಾಲ ಸೇರಿ ಒಟ್ಟು 2,792 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು.
ದೀರ್ಘ ಅವಧಿ ಮುಖ್ಯಮಂತ್ರಿ ಚುಕ್ಕಾಣಿ ಹಿಡಿದಿದ್ದ ದೇವರಾಜ ಅರಸು ಅವರ ಈ ದಾಖಲೆಯನ್ನು ನಾಲ್ಕೂವರೆ ದಶಕಗಳ ಬಳಿಕ ಸಿದ್ದರಾಮಯ್ಯ ಅವರು ಸರಿಗಟ್ಟುತ್ತಿದ್ದಾರೆ.
2013ರ ಮೇ 13 ರಂದು ಮೊದಲ ಬಾರಿಗೆ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅವರು 2018ರ ಮೇ 17ರವರೆಗೆ ಅಂದರೆ 5 ವರ್ಷ 4 ದಿನ (1,829) ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ 2023ರ ಮೇ 20 ರಂದು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು 963 ದಿನ ಪೂರೈಸುತ್ತಿದ್ದು, ಜ.6ಕ್ಕೆ ಒಟ್ಟು 2,792 ದಿನ ಅಧಿಕಾರ ನಡೆಸುವ ಮೂಲಕ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಲಿದ್ದಾರೆ.
ಬಜೆಟ್ ಮಂಡನೆಯಲ್ಲೂ ಸಿದ್ದರಾಮಯ್ಯ ಈಗಾಗಲೇ ಎಲ್ಲರಿಗಿಂತ ಮುಂದಿದ್ದು, ಬರೋಬ್ಬರಿ 16 ಬಜೆಟ್‌ಗಳನ್ನು ಮಂಡನೆ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.6ಕ್ಕೆ ಅರಸು ಅವರ ದಾಖಲೆ ಸರಿಗಟ್ಟುತ್ತಿದ್ದರೂ ಸರ್ಕಾರ ಅಥವಾ ಸಿದ್ದರಾಮಯ್ಯ ಅವರ ಕಡೆಯಿಂದ ಯಾವುದೇ ಅಧಿಕೃತ ಸಂಭ್ರಮಾಚರಣೆ ಹಮ್ಮಿಕೊಂಡಿಲ್ಲ. ಬದಲಿಗೆ ಫೆ.16ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡನೇ ಅವಧಿಯ ಸರ್ಕಾರವು 1000 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ‘ಸಾವಿರದ ಸರ್ಕಾರ’ ಕಾರ್ಯಕ್ರಮದ ಮೂಲಕ ಬೃಹತ್ ಸಮಾವೇಶ ಹಾಗೂ ಶಕ್ತಿ ಪ್ರದರ್ಶನ ನಡೆಸುವ ಮೂಲಕ ಸಂಭ್ರಮಾಚರಣೆ ನಡೆಸಲು ಚಿಂತನೆ ನಡೆಸಲಾಗಿದೆ.
ಅಭಿಮಾನಿಗಳಿಂದ ಸಂಭ್ರಮ:
ಸಿದ್ದರಾಮಯ್ಯ ಅಭಿಮಾನಿಗಳು ಈ ದಾಖಲೆಯ ಕ್ಷಣ ಸಂಭ್ರಮಿಸಲು ರಾಜ್ಯಾದ್ಯಂತ ಸಿದ್ಧತೆ ನಡೆಸಿದ್ದಾರೆ. ಪ್ರಮುಖ ಬೀದಿಗಳಲ್ಲಿ ಫ್ಲೆಕ್ಸ್‌ಗಳನ್ನು ಕಟ್ಟಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇನ್ನು ಜ.6 ರಂದು ನೆಲಮಂಗಲದ ಭಕ್ತನಪಾಳ್ಯದಲ್ಲಿ ಯುವ ಅಹಿಂದ ವತಿಯಿಂದ ‘ನಾಟಿ ಕೋಳಿ ಔತಣಕೂಟ’ ಆಯೋಜಿಸುವ ಮೂಲಕ ವಿಭಿನ್ನವಾಗಿ ಸಂಭ್ರಮಾಚರಣೆಗೆ ನಿರ್ಧರಿಸಲಾಗಿದೆ.
ನಾಟಿಕೋಳಿ ಸಾಂಬಾರ್, ಮುದ್ದೆ, ಕಾಳು ಗೊಜ್ಜು, ರೈಸ್, ಪುಲಾವ್ ಮತ್ತು ಸಿಹಿತಿಂಡಿ ನೀಡಲು ತೀರ್ಮಾನಿಸಲಾಗಿದ್ದು, ಇದರ ಪೋಸ್ಟರ್ ಅನ್ನು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಬಿಡುಗಡೆ ಮಾಡಿದ್ದರು.
ಸಿಎಂ ಆಗಿ 2,792 ದಿನ ಅಧಿಕಾರ ನಡೆಸಿದ್ದ ಅರಸು
- ಇಂದು ಈ ದಾಖಲೆ ಸರಿಗಟ್ಟಲಿರುವ ಸಿದ್ದರಾಮಯ್ಯ
- ನಾಳೆ ‘ನಾಡಿನ ಸುದೀರ್ಘ ಅವಧಿಯ ಸಿಎಂ’ ಗೌರವ
- ಈಗಾಗಲೇ ಅತೀ ಹೆಚ್ಚು ಬಜೆಟ್ ಮಂಡಿಸಿರುವ ಸಿದ್ದು
- ಅಹಿಂದ ನಾಯಕ ಸಿದ್ದು ಸಾಧನೆಗೆ ಇದೀಗ ಹೊಸ ಗರಿ