ಸಿದ್ದರಾಮಯ್ಯ ಅವರೇ ಐದು ವರ್ಷ ಪೂರ್ತಿ ಮುಖ್ಯಮಂತ್ರಿ ಆಗಿರುತ್ತಾರೆ : ಬಸವರಾಜ ರಾಯರೆಡ್ಡಿ

KannadaprabhaNewsNetwork |  
Published : Apr 15, 2025, 01:04 AM ISTUpdated : Apr 15, 2025, 12:37 PM IST
Basavaraja Rayareddy

ಸಾರಾಂಶ

ಕೇಂದ್ರ ಸರ್ಕಾರ ವಕ್ಫ್‌ ಬಿಲ್‌ ತರುವ ಮೂಲಕ ಮುಸ್ಲಿಂರ ಹಕ್ಕುಗಳ ಧ್ವಂಸ ಮಾಡಲು ಹೋರಟಿದೆ. ಇದರಿಂದ ದೇಶದಲ್ಲಿ ಅಶಾಂತಿ ಉಂಟಾಗಲಿದೆ ಎಂದ ರಾಯರಡ್ಡಿ 

ಕೊಪ್ಪಳ:  ಸಿದ್ದರಾಮಯ್ಯ ಅವರೇ ಐದು ವರ್ಷ ಪೂರ್ತಿ ಮುಖ್ಯಮಂತ್ರಿ ಆಗಿರುತ್ತಾರೆಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಸಿಎಂ ಆಗಲು ಯತ್ನಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅವರೂ ಮುಂದೆ ಯಾಕೆ ಸಿಎಂ ಆಗಬಾರದು? ಆದರೆ ಈಗ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲಿದ್ದಾರೆ. ಡಿ.ಕೆ. ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾಗಿ ಇರುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಸ್ಲಿಂ ಹಕ್ಕು ಧ್ವಂಸ:

ಕೇಂದ್ರ ಸರ್ಕಾರ ವಕ್ಫ್‌ ಬಿಲ್‌ ತರುವ ಮೂಲಕ ಮುಸ್ಲಿಂರ ಹಕ್ಕುಗಳ ಧ್ವಂಸ ಮಾಡಲು ಹೋರಟಿದೆ. ಇದರಿಂದ ದೇಶದಲ್ಲಿ ಅಶಾಂತಿ ಉಂಟಾಗಲಿದೆ ಎಂದ ರಾಯರಡ್ಡಿ, ದೇಶದಲ್ಲಿ 20 ಕೋಟಿ ಮುಸ್ಲಿಂರ ಸ್ಥಿತಿ ಹೀನಾಯವಾಗಿದೆ. ಬಹಳಷ್ಟು ಜನರು ಬಡವರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಅರಿತುಕೊಂಡು ಕೆಲಸ ಮಾಡುತ್ತಾರೋ ಅಥವಾ ತಿಳಿಯದೆ ಮಾತಾಡುತ್ತಾರೋ ತಿಳಿಯುತ್ತಿಲ್ಲ. ಶಿಕ್ಷಣವಂತೂ ಅವರಿಗೆ ಇಲ್ಲವೇ ಇಲ್ಲ. ಅವರಿಗೆ ರಾಜ್ಯ ಸರ್ಕಾರ ಏನಾದರೂ ನೀಡಿದರೆ ಅದರಲ್ಲಿ ತಪ್ಪೇನಿದೆ ಎಂದ ಪ್ರಶ್ನಿಸಿದರು.

ಮುಸ್ಲಿಂರು ಮದುವೆ ಕಾಂಟ್ರ್ಯಾಕ್ಟ್‌ ಮಾಡಿಕೊಳ್ಳುತ್ತಾರೆಯೇ ಹೊರತು ಹಿಂದುಗಳ ತರಹ ಏಳೇಳು ಜನ್ಮದ ಅನುಬಂಧವಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಜಾತಿ ಗಣತಿ ಅಲ್ಲ:

ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿದ ಕಾಂತರಾಜ ವರದಿ ಜಾತಿ ಗಣತಿಯಲ್ಲ, ಅದು ಸಾಮಾಜಿಕ ಸ್ಥಿತಿಗತಿ ತಿಳಿಯುವ ವರದಿಯಾಗಿದೆ. ಸರ್ವೇ ವೇಳೆ ಜಾತಿ ಕಾಲಂ ಸೇರಿಸಲಾಗಿದೆ ಎಂದ ಅವರು, ಶಿಕ್ಷಕರು ಮನೆ-ಮನೆಗೆ ಹೋಗಿ ಸರ್ವೇ ಮಾಡಿದ್ದಾರೆ. ಇದು ಶೇ. 100ರಷ್ಟು ಸರಿಯಾಗಿದೆಯೋ ಇಲ್ಲವೋ ಎನ್ನುವ ಚರ್ಚೆ ನಡೆದಿದೆ. ಆದರೆ, 96-97ರಷ್ಟು ಸರಿಯಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಇದರ ಅವಶ್ಯಕತೆ ಇತ್ತು ಎಂದರು.

ಲಿಂಗಾಯತರು ಮತ್ತು ಒಕ್ಕಲಿಗರ ಅಂಕಿ-ಸಂಖ್ಯೆ ಉಹಾಪೋಹವಾಗಿದೆ. ಸಚಿವ ಎಂ.ಬಿ. ಪಾಟೀಲ್ ಅವರು ಲಿಂಗಾಯತರು 1 ಕೋಟಿಗೂ ಅಧಿಕ ಇದ್ದಾರೆ ಎನ್ನುವುದು ಸರಿ ಇದೆ ಎನ್ನುವ ಮೂಲಕ ಅವರ ಹೇಳಿಕೆ ಸಮರ್ಥಿಸಿಕೊಂಡರು.

ಶಂಕರ್ ಬಿದರಿ ಸೇರಿದಂತೆ ಅನೇಕರು ಕಾಂತರಾಜ ವರದಿ ವಿರೋಧಿಸಿದ್ದಾರೆ. ನಾನು ವಿರೋಧ ಮಾಡಬೇಡಿ ಎಂದಿದ್ದೇನೆ ಎಂದ ಅವರು, ಲಿಂಗಾಯತ ಶಾಸಕರು ವಿದ್ಯಾವಂತರಾಗಿದ್ದು ಈ ಕುರಿತು ಚರ್ಚೆ ಮಾಡಲಿ. ಆದರೆ, ಶೇ. 2ರಿಂದ 3ರಷ್ಟು ಇರುವ ಬ್ರಾಹ್ಮಣರು ಪಕ್ಷವನ್ನು ಕಂಟ್ರೋಲ್ ಮಾಡಲ್ವ ಎಂದು ವ್ಯಂಗ ಮಾಡಿದರು.

ರಾಜ್ಯದಲ್ಲಿ ಕೆಲ ಜಾತಿಯನ್ನು ಬಿಟ್ಟರೇ ಮಿಕ್ಕವರು ಹಿಂದುಳಿದವರೇ ಆಗಿದ್ದಾರೆ ಎಂದರು.

ಯಲ್ಬುರ್ಗಾ ಮಹಿಳಾ ಮೀಸಲಾದರೆ, ಹಿಟ್ನಾಳ್‌ ಕುಟುಂಬದವರು ಸ್ಪರ್ಧಿಸ್ತಾರೆ

ಯಲಬುರ್ಗಾ ವಿಧಾನಸಭೆ ಕ್ಷೇತ್ರ ಮಹಿಳಾ ಮೀಸಲಾದರೆ, ನನ್ನ ಮಗಳು ಸೇರಿದಂತೆ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸೋಲ್ಲ, ಆದರೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್‌ ಅವರ ಮನೆಯ ಹೆಣ್ಣು ಮಕ್ಕಳನ್ನು ಕಣಕ್ಕಿಳಿಸುವಂತೆ ಕೋರುತ್ತೇನೆ ಎಂದು ಬಸವರಾಜ ರಾಯರಡ್ಡಿ ಅಚ್ಚರಿಯ ಹೇಳಿಕೆ ನೀಡಿದರು.

ಸುದ್ದಿಗಾರರ ಜೊತೆ ಮಾತನಾಡುತ್ತ, ಯಲಬುರ್ಗಾ ಕ್ಷೇತ್ರ ಮಹಿಳಾ ಮೀಸಲಾಗುವ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಈ ರೀತಿ ಪ್ರತಿಕ್ರಿಯೆ ನೀಡಿದರು.ನಾನು ಈಗಲೇ ರಾಜಕೀಯದಿಂದ ನಿವೃತ್ತಿಯಾಗಲ್ಲ, ಇನ್ನು ಮೂರು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಹಾಗೆಯೇ ನನ್ನ ಮಗಳನ್ನು ರಾಜಕೀಯಕ್ಕೆ ತರುವುದಿಲ್ಲ. ನಮ್ಮ ಮನೆಯಿಂದ ಯಾರೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದರು.

ಒಂದು ವೇಳೆ ಯಲಬುರ್ಗಾ ಮಹಿಳಾ ಮೀಸಲು ಕ್ಷೇತ್ರವಾದರೇ ಆಗ ಏನಾಗುತ್ತದೆಯೋ ನೋಡೋಣವೆಂದರು. ಶಾಸಕ ರಾಘವೇಂದ್ರ ಹಿಟ್ನಾಳಗೆ ಹೆಣ್ಣು ಮಕ್ಕಳ ಮೇಲೆ ಪ್ರೀತಿ ಜಾಸ್ತಿ. ನನಗೂ ಅವನ ಮೇಲೆ ಪ್ರೀತಿ ಹೆಚ್ಚು. ಒಂದು ವೇಳೆ ಮಹಿಳಾ ಮೀಸಲಾತಿ ಬಂದರೆ ಅವರ ಮನೆಯ ಹೆಣ್ಣುಮಕ್ಕಳನ್ನು ಚುನಾವಣೆಗೆ ನಿಲ್ಲಿಸುವಂತೆ ಹೇಳುತ್ತೇನೆ ಎಂದ ಅವರು, ನನಗೆ ಯಲಬುರ್ಗಾ ಕ್ಷೇತ್ರ ಬಿಟ್ಟರೆ ಬೇರೆ ಯಾವ ಕ್ಷೇತ್ರವೂ ಹೊಂದಾಣಿಕೆ ಆಗುವುದಿಲ್ಲ. ಹೀಗಾಗಿ ನಾನು ಕೊಪ್ಪಳ ಕ್ಷೇತ್ರಕ್ಕೆ ಬರುತ್ತೇನೆ ಎನ್ನುವುದು ಸುಳ್ಳು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ