ಅಯೋಧ್ಯೆ ರಾಮಮಂದಿರ ಕಾಮಗಾರಿ ಪೂರ್ಣ । ನ.26ರಂದು ಮೋದಿ ರಾಷ್ಟ್ರಧ್ವಜಾರೋಹಣ
ಉಡುಪಿ: ನೂರು ವರ್ಷ ಪೂರೈಸಿರುವ ಆರ್‌ಎಸ್ಎಸ್‌ನ್ನು ನಿಷೇಧ ಮಾಡುವುದು ಸರಿಯಲ್ಲ, ಮೂಗು ಸೋರುತ್ತಿದೆ ಎಂದು ಅದನ್ನೇ ಕಿತ್ತೆಸೆಯುತ್ತಾರಾ ? ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಸರಕಾರ ಎಲ್ಲಾ ವಿಷಯದಲ್ಲೂ ಲಾಭ ನಷ್ಟ ಗಮನಿಸಬೇಕು, ಸಚಿವ ಖರ್ಗೆ ತಮ್ಮ ಅಭಿಪ್ರಾಯ ಸರ್ಕಾರಕ್ಕೆ ಹೇಳಿದ್ದಾರೆ, ಅವರಿಗೆ ಆ ಹಕ್ಕು ಖಂಡಿತವಾಗಿಯೂ ಇದೆ, ಆದರೆ ಮುಖ್ಯಮಂತ್ರಿ ಎಲ್ಲರ ಜೊತೆ ವಿಮರ್ಶಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ, ಎಲ್ಲವೂ ಸುಖಾಂತ್ಯವಾಗುತ್ತದೆ ಎಂದು ಶ್ರೀಗಳು ಹೇಳಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಹೆಸರಿನಂತೆ ರಾಷ್ಟ್ರೀಯ ಸೇವೆಯನ್ನು ಮಾಡುತ್ತಿದೆ, ಒಬ್ಬರಿಗೆ ಸರಿ ಎಂದು ಕಂಡದ್ದು ಮತ್ತೊಬ್ಬರಿಗೆ ತಪ್ಪು ಎಂದೆನಿಸಬಹುದು, ಅದನ್ನು ವಿಮರ್ಷಿಸಬೇಕು, ತಪ್ಪುಗಳಿದ್ದರೆ ಸರಿಪಡಿಸಬೇಕು, ಆದರೇ ಆರ್‌ಎಸ್ಎಸ್ ನೂರು ವರ್ಷಗಳಿಂದ ಮಾಡುತ್ತಿರುವ ದೇಶದ ಕಾರ್ಯವನ್ನು ಗಮನಿಸಬೇಕು, ದೇಶಕ್ಕೆ ಆಗಿರುವ ಲಾಭ ಗಮನಿಸಬೇಕು, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಆರ್‌ಎಸ್ಎಸ್ ಮಾಡಿರುವ ಸೇವೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ, ಮುಂದೆಯೂ ಆರ್‌ಎಸ್ಎಸ್ ತನ್ನ ಈ ಸೇವಾ ಕಾರ್ಯವನ್ನು ಮುಂದುವರಿಯುತ್ತದೆ ಎಂದು ಶ್ರೀಗಳು ಹೇಳಿದರು. ರಾಮಮಂದಿರ ಪೂರ್ಣಅಯೋಧ್ಯೆಯ ಶ್ರೀ ರಾಮಮಂದಿರದ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ. ನವೆಂಬರ್ ನಲ್ಲಿ ಈ ಭವ್ಯ ಮಂದಿರವನ್ನು ರಾಮ ದೇವರಿಗೆ ಅರ್ಪಿಸಲಾಗುತ್ತದೆ. ನ.26ರಂದು ರಾಷ್ಟ್ರ ಧ್ವಜಾರೋಹಣದ ಮೂಲಕ ಈ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಧ್ವಜಾರೋಹಣ ಮಾಡುತ್ತಾರೆ. ಅದಕ್ಕೆ ಮೊದಲು ಪೂರ್ವಭಾವಿ ಪೂಜಾ ಕಾರ್ಯಗಳು ನಡೆಯಲಿವೆ, ಈಗಾಗಲೇ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ ಎಂದು ಶ್ರೀಗಳು ಹೇಳಿದರು.