ಶಿವಮೊಗ್ಗ: ತಮ್ಮ ಕಾಯಕ ನಿಷ್ಠೆ ಮತ್ತು ಶರಣ ಸಾಹಿತ್ಯದ ಮೂಲಕ ಮನುಕುಲದ ಕಣ್ತೆರೆಸಿದ ಮಹನೀಯ ಶಿವಯೋಗಿ ಸಿದ್ದರಾಮೇಶ್ವರರು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸಾಧಕ ಸಿದ್ಧರಾಮೇಶ್ವರರು ಯಾವುದೇ ಒಂದು ಜಾತಿ- ಸಮುದಾಯಕ್ಕೆ ಸೀಮಿತವಾದವರಲ್ಲ. ಶರಣ ಸಿದ್ದರಾಮರನ್ನು ಭೋವಿ ಮತ್ತು ವೀರಶೈವ ಸಮಾಜದ ಬಂಧುಗಳು ಅವರನ್ನು ಭಕ್ತಿ ಭಾವದಿಂದ ಕಾಣುತ್ತಾರೆ. ಇಂದಿನ ಎಲ್ಲಾ ರಾಜಕಾರಣಿಗಳು ಸಿದ್ದರಾಮೇಶ್ವರರ ಆದರ್ಶ ಮತ್ತು ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂದರು.
ಪ್ರಕೃತಿಯ ಮೇಲೆ ಪ್ರತಿ ಬಾರಿ ದಾಳಿಯಾದಾಗಲೂ ಸೂಕ್ತ ದಂಡ ತೆರಬೇಕಾಗುತ್ತದೆ ಎಂದು ಶಿವಯೋಗಿ ಸಿದ್ದರಾಮೇಶ್ವರರು ಅಂದೆ ಎಚ್ಚರಿಸಿದ್ದರು. ಅವರು ತಮ್ಮ ಕಾಯಕ ನಿಷ್ಠೆ ಜೊತೆಗೆ ಜನಸಾಮಾನ್ಯರ ಬದುಕಿಗೆ ಅನುಕೂಲವಾಗುವಂತೆ ಕೆರೆ-ಕಟ್ಟೆ-ಕಾಲುವೆಗಳನ್ನು ನಿರ್ಮಿಸುವ ಮೂಲಕ ಶಿವನನ್ನು ಕಾಣುವ ಪ್ರಯತ್ನ ಮಾಡಿ ಸಫಲರಾದರು ಎಂದರು.ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿ, ವಿವಿಧ ಕಾರಣಗಳಿಂದಾಗಿ ಅಸಂಘಟಿತರಾಗಿರುವ ಭೋವಿ ಸಮಾಜದ ಬಂಧುಗಳು ಸಿದ್ದರಾಮೇಶ್ವರ ಜಯಂತಿಯ ನೆಪದಲ್ಲಿ ಆದರೂ ಸಮನ್ವಯತೆ ಕಾಯ್ದುಕೊಳ್ಳಬೇಕು, ಒಗ್ಗಟ್ಟಾಗಿರಬೇಕು ಮಾತ್ರವಲ್ಲ ಸಿದ್ದರಾಮೇಶ್ವರರ ಮಾರ್ಗದರ್ಶನದಂತೆ ನಡೆದುಕೊಳ್ಳುಬೇಕು ಎಂದು ಕರೆ ನೀಡಿದರು.
ಮಂತ್ರ ಪೂಜೆಗಳನ್ನು ಹೊರತುಪಡಿಸಿ ಕಾಯಕದ ಮೂಲಕ ಶಿವನ ದರ್ಶನ ಮಾಡಿದ ಸಿದ್ದರಾಮೇಶ್ವರರು ಸಂತ ಸಜ್ಜನರ ಸಂಘದಿಂದ ಜ್ಞಾನಾರ್ಜನೆ ಹೊಂದಿದರು. ಸತತವಾಗಿ ಕೆರೆಕಟ್ಟೆ ಕಾಲುವೆಗಳ ನಿರ್ಮಾಣದಿಂದ ಶಿವನನ್ನು ಆರಾಧಿಸಿದರು. ಸಿದ್ದರಾಮರ ಬದುಕು ಮತ್ತು ಜೀವನ ಹಾಗೂ ಕಾರ್ಯ ಶೈಲಿ ಎಲ್ಲರಿಗೂ ಮಾದರಿಯಾಗಿದ್ದು ಅದನ್ನು ಅನುಸರಿಸಬೇಕು ಎಂದು ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಉತ್ತಮ ಪರಂಪರೆಯ ಪ್ರತೀಕವಾಗಿದ್ದ ಶ್ರೇಷ್ಠ ವಚನಕಾರ ಹಾಗೂ ಶಿವನ ಭಕ್ತ ಶಿವಯೋಗಿ ಸಿದ್ದರಾಮೇಶ್ವರರು, ರೈತರ ನೆಮ್ಮದಿ ಬದುಕಿಗೆ ಸಹಕರಿಸಿ ಎಲ್ಲರ ಮನದಲ್ಲಿ ಅಚ್ಚಳಿದೆ ಉಳಿದಿದ್ದಾರೆ ಮಾತ್ರವಲ್ಲ ತಮ್ಮ ಮೌಲ್ಯಯುತ ಸಾಹಿತ್ಯದ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ರುಜು ಮಾರ್ಗವನ್ನು ಪರಿಚಯಿಸಿದವರಾಗಿದ್ದಾರೆ. ಸಮಾನತೆಯ ಶ್ರೇಷ್ಠ ಪರಂಪರೆಯ ನಾಯಕರಾಗಿ ಬಿಂಬಿತರಾಗಿದ್ದಾರೆ ಎಂದರು.