ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಭಕ್ತಿ ಹಾಗೂ ಕಾಯಕ ನಿಷ್ಠೆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಸಿದ್ಧರಾಮೇಶ್ವರರು ಕೈಗೊಂಡರು. ಅವರ ವಚನಗಳು ಇಂದಿನ ಸಮಾಜದಲ್ಲೂ ಪ್ರಸ್ತುತ ಎನಿಸಿವೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಸಿದ್ಧರಾಮೇಶ್ವರರು ವಿಶ್ವ ಮಾನವರಾಗಿದ್ದಾರೆ ಎಂದರು.
ವಚನಗಳು ಪಠ್ಯಕ್ಕೆ ಮಾತ್ರ ಸೀಮಿತವಲ್ಲ. ವಿದ್ಯಾರ್ಥಿಗಳು ಅವುಗಳ ಆಳ-ಅಗಲ ತಿಳಿದಾಗ ಮಾತ್ರ ಮಹನೀಯರ ಚಿಂತನೆಗಳನ್ನು ಅರ್ಥೈಸಿಕೊಳ್ಳಬಹುದು.ಮಹನೀಯರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಸಿದ್ಧರಾಮೇಶ್ವರರು ಇಂತಹದೇ ಜಾತಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಜನಿಸಲಿಲ್ಲ. ಅವರ ಕೊಡುಗೆಗಳು ಸಹ ಒಂದು ಜಾತಿಗೆ ಸೀಮಿತವಾಗಿಲ್ಲ. ಸಮಾಜದ ಎಲ್ಲ ವರ್ಗಗಳ ಏಳಿಗೆಗೆ ಶ್ರಮಿಸಿದರು ಎಂದರು.
ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಬಿ.ಎಂ.ಗುರುನಾಥ ಉಪನ್ಯಾಸ ನೀಡಿ, ಸಿದ್ಧರಾಮರು ಲೋಕೋಪಯೋಗಿ, ಜನಹಿತ ಕಾರ್ಯಗಳಿಂದ ಎಲ್ಲರ ಬದುಕನ್ನು ಬೆಳೆಸಿದವರು ಹಾಗೂ ಬೆಳಗಿಸಿದವರು. ಶರಣ ಸಿದ್ಧರಾಮರು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಯಾವ ವ್ಯಕ್ತಿ, ವ್ಯಕ್ತಿತ್ವ ಜನಸಮುದಾಯದಲ್ಲಿ ಉಳಿಯುತ್ತದೆಯೋ ಆ ವ್ಯಕ್ತಿಯ ನಡೆ-ನುಡಿ ಚಂದ ಹಾಗೂ ಸತ್ಯವಾಗಿರುತ್ತವೆ ಎಂದರು. ಭಕ್ತನಾದರೆ ಬಸವಣ್ಣನಾಗಬೇಕು. ಜಂಗಮನಾದರೆ ಪ್ರಭುವಿನಂತಾಗಬೇಕು. ಭೋಗಿಯಾದರೆ ನಮ್ಮ ಶ್ರೀಗುರು ಚನ್ನಬಸವಣ್ಣನಂತಾಗಬೇಕು. ಯೋಗಿಯಾದರೆ ನನ್ನಂತಾಗಬೇಕು ಎಂಬ ಸಿದ್ಧರಾಮರ ಆತ್ಮನಿವೇದನೆಯ ಮಾತು ಬಹಳ ಮುಖ್ಯವಾದದು. ಇದು ಸಿದ್ಧರಾಮರ ಗುಣವಿಶೇಷವು ಹೌದು ಎಂದರು.
ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಮಾತನಾಡಿ, 12ನೇ ಶತಮಾನದಲ್ಲಿ ಕಾಯಕಯೋಗಿ ಸಿದ್ಧರಾಮರು ಮಾಡಿದ ಕಾಯಕದಿಂದಾಗಿ ಇಂದು ನಾವು ಸಿದ್ಧರಾಮೇಶ್ವರರ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಕಾಯಕದಿಂದ ಕೈಲಾಸ ಕಂಡ ಪುಣ್ಯಾತ್ಮರು ಸಿದ್ಧರಾಮರು ಎಂದು ಅಭಿಪ್ರಾಯಪಟ್ಟರು.