ಟಿ.ಎನ್.ಸೀತಾರಾಮ್‌ಗೆ ಸಿದ್ದೇಗೌಡ ಸ್ಮರಣಾರ್ಥ ಮಾನಸ ಪ್ರಶಸ್ತಿ

KannadaprabhaNewsNetwork | Published : Dec 25, 2024 12:48 AM

ಸಾರಾಂಶ

ಮಾನಸ ಸಭಾಂಗಣದಲ್ಲಿ ಸಂಸ್ಥಾಪಕ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಂಕರ್, ಡಾ.ಚನ್ನಶೆಟ್ಟಿ ಇನ್ನಿತರರಿದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಈ ಬಾರಿ ಮೂರು ದಿನಗಳ ಕಾಲ ಪಟ್ಟಣದಲ್ಲಿ ಮಾನಸ ಶಿಕ್ಷಣ ಸಂಸ್ಥೆಯು ವರ್ಣರಂಜಿತವಾಗಿ ಮಾನಸೋತ್ಸವ ಆಚರಿಸುತ್ತಿದ್ದು, ಡಿ.27ರಿಂದ 29ರತನಕ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿ ಸಿದ್ದೇಗೌಡರ ಸ್ಮರಣಾರ್ಥ ನೀಡುವ ಮಾನಸ ಪ್ರಶಸ್ತಿಯನ್ನು ಖ್ಯಾತ ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರಿಗೆ ನೀಡಿ ಅಭಿನಂದಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿ.ಎನ್.ಸೀತಾರಾಮ್ ಅವರು ಕಿರುತೆರೆ ಹಾಗೂ ಸಿನಿಮಾ ರಂಗದಲ್ಲಿ ಅಪ್ರತಿಮ ಸಾಧನೆಗೈದ ನಾಡು ಕಂಡ ಅಪ್ರತಿಮ ನಿರ್ದೇಶಕರು. ಈ ಬಾರಿ ಅವರಿಗೆ ಮಾನಸ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದರಿಂದ ಪ್ರಶಸ್ತಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ. ಡಿ.27ರಂದು ಮಾನಸ ಪ್ರಶಸ್ತಿಯನ್ನು ಸೀತಾರಾಮ್ ಅವರಿಗೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ.ಎಸ್ ಹೊರಟ್ಟಿ ಅವರು ಸಮಾರಂಭ ಉದ್ಘಾಟಿಸಿ, ಸಿದ್ದೇಗೌಡ-ಲಿಂಗಮ್ಮ ಸ್ಮರಣಾರ್ಥನೀಡುವ ಮಾನಸ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 10ಗಂಟೆಗೆ ಜರುಗುವ ಅಂದಿನ ಸಮಾರಂಭದ ಸಾನ್ನಿಧ್ಯವನ್ನು ತುಮಕೂರು ಶ್ರೀ ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ವಹಿಸಲಿದ್ದು ಅಧ್ಯಕ್ಷತೆಯನ್ನು ನಿರ್ದೇಶಕ ಪಿ.ಶೇಷಾದ್ರಿ ಅವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯದ ವಿಶ್ರಾಂತ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 1ಗಂಟೆಗೆ ಮಾನಸ ಸಾಂಸ್ಕೃತಿಕ ವೈಭವ ನಡೆಯಲಿದೆ. 3 ಗಂಟೆಗೆ ನಿಸರ್ಗ ವಿದ್ಯಾನಿಕೇತನ ಶಾಲಾ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ. ಈ ಬಾರಿ ಸಾಧಕ 428 ವಿದ್ಯಾರ್ಥಿಗಳಿಗೆ 3 ದಿನಗಳ ಕಾಲ ಜರುಗುವ ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಗುವುದು ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರು ಪ್ರತಿಭಾ ಪುರಸ್ಕರಿಸಲಿದ್ದಾರೆ, ನಗರಸಭಾಧ್ಯಕ್ಷೆ ಸಿ.ಎನ್.ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಸದಸ್ಯೆ ಸಿರಿಶ ಸತೀಶ್, ಬಿಇಒ ಎಂ.ಮಂಜುಳಾ, ಮಾಜಿ ಶಾಸಕ ಎಸ್.ಬಾಲರಾಜ್ ಪಾಲ್ಗೊಳ್ಳುವರು, ಸಂಜೆ 5 ಗಂಟೆಗೆ ನೂರಾರು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲರವ ಜರುಗಲಿದೆ ಎಂದರು.

ಡಿ.28ರಂದು ಬೆಳಗ್ಗೆ 9 ಗಂಟೆಗೆ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಬೆಳಗು, 10.30ಕ್ಕೆ ಗುರುವಂದನಾ ಕಾರ್ಯಕ್ರಮ ಜರುಗಲಿದ್ದು ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ, ಜಿಪಂ ಸಿಇಒ ಮೋನಾರೋತ್, ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ಡಿವೈಎಸ್ಪಿ ಎಂ.ಧರ್ಮೇಂದ್ರ, ನಗರಸಭಾ ಪೌರಾಯುಕ್ತ ಎ.ರಮೇಶ್, ಮಾಜಿ ಸಚಿವ ಎನ್.ಮಹೇಶ್ ಪಾಲ್ಗೊಳ್ಳುವರು. ಮಧ್ಯಾಹ್ನ ಮಾನಸ ಸಾಂಸ್ಕೃತಿಕ ವೈಭವ, ಕವಿಗೋಷ್ಠಿಯು ಸಾಹಿತಿ ಕೃಷ್ಣಕುಮಾರ್, ಜಯಪ್ಪ ಹೊನ್ನಾಳಿ ಇನ್ನಿತರರ ಅಧ್ಯಕ್ಷತೆಯಲ್ಲಿ ಜರುಗಲಿದೆ. ರಾತ್ರಿ ಜರ್ನಿ ಥೇಟರ್ ಸಂಸ್ಥೆಯ ಮಂಗಳೂರು ರವಿರಿಂದ ಗೀತ ಗಾಯನ ಜರುಗಲಿದೆ.ಡಿ.29ರಂದು 10.30ಕ್ಕೆ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಜರುಗಲಿದ್ದು ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಾಧಕರಿಗೆ ಗೌರವಿಸಲಿದ್ದಾರೆ. ಕೊಳ್ಳೇಗಾಲದ ಶಾಸಕ ಎ.ಆರ್.ಕೃಷ್ಣಮೂರ್ತಿ, ಹನೂರು ಶಾಸಕ ಎಂ.ಆರ್.ಮಂಜುನಾಥ್, ಚಾ.ನಗರ ವಿವಿ ಕುಲಪತಿ ಎಂ.ಆರ್.ಗಂಗಾಧರ್ ಇತರ ಗಣ್ಯರು ಪಾಲ್ಗೊಳ್ಳುವರು. 3 ಗಂಟೆಗೆ ಮಾನಸೋತ್ಸವದ ಸಮಾರೋಪ ಸಮಾರಂಭ, ಪ್ರತಿಭಾ ಪುರಸ್ಕಾರ ನಡೆಯಲಿದೆ. ತಾಲೂಕಿನ ಜೇತವನದ ಬೌದ್ಧ ಬಿಕ್ಕು ಶ್ರೀ ಮನೋರಖ್ಖಿತ ಬಂತೇಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಮೈಸೂರಿನ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸಮಾರೋಪ ಭಾಷಣ ಮಾಡಲಿದ್ದಾರೆ. ಎಸ್ಪಿ ಡಾ.ಬಿ.ಟಿ.ಕವಿತಾ, ಡಿಡಿಪಿಯು ಸಿ.ಮಂಜುನಾಥ ಪ್ರಸನ್ನ, ಕನ್ನಡಪ್ರಭ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನ ಕುಮಾರ್, ನಟ ರಿಷಿ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಪಾಲ್ಗೊಳ್ಳುವರು. ಸಂಜೆ ಮಿಮಿಕ್ರಿ ಗೋಪಿ, ಕಲರ್ಸ್ ಕನ್ನಡ ಗಿಚ್ಚಿ ಗಿಲಿಗಿಲಿ ಮತ್ತು ಜೀ ಕನ್ನಡ ಕಾಮಿಡಿ ಕಿಲಾಡಿಗಳು ತಂಡದವರಿಂದ ನಗೆಹಬ್ಬದಲ್ಲಿ ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಪಾಲ್ಗೊಳ್ಳಲಿದ್ದಾರೆ. ಜಾನಪದ ಕಲಾವಿದ ಮಳವಳ್ಳಿ ಮಹದೇವಸ್ವಾಮಿ ಹಾಡುಗಾರಿಕೆ ಮೂಲಕ ರಂಜಿಸಲಿದ್ದಾರೆ. ಚಾ.ನಗರ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀಮತಿ ಪುಟ್ಟಿರಮ್ಮ, ಡಾ.ಎಚ್ ಸುಂದರರಾಜ್, ಡಾ.ಕೇಶವಮೂರ್ತಿ, ಶ್ರೀಮತಿ ಪ್ರೇಮಲತಾ ಕೃಷ್ಣಸ್ವಾಮಿ, ಅಬ್ದುಲ್ ರಶೀದ್, ಮಲ್ಲೇಶಪ್ಪ, ದೇವರಾಜು ಕಪ್ಪಸೋಗೆ, ದೊಡ್ಡಗವಿ ಬಸಪ್ಪ, ಶ್ರೀಮತಿ ಮಂಜುಳ, ಎಂ ಶಿವಣ್ಣ ಅವರನ್ನು 29ರ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಬಿಎಡ್ ಪ್ರಾಂಶುಪಾಲ ಡಾ.ಚನ್ನಶೆಟ್ಟಿ, ನಿಸರ್ಗ ವಿದ್ಯಾನಿಕೇತನ ಮುಖ್ಯ ಶಿಕ್ಷಕ ಶಂಕರ್ ಇದ್ದರು.

Share this article