ಸಿದ್ದೇಶ್ವರ ಕುಟುಂಬ ದಾವಣಗೆರೆಯಿಂದಲೇ ಕಳಿಸುವ ಷಡ್ಯಂತ್ರ

KannadaprabhaNewsNetwork | Published : Jun 10, 2024 12:33 AM

ಸಾರಾಂಶ

ದಾವಣಗೆರೆಯಿಂದ ಜಿ.ಎಂ. ಸಿದ್ದೇಶ್ವರ ಕುಟುಂಬವನ್ನು ಕಳಿಸುವ ಷಡ್ಯಂತ್ರ ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿರುವುದು ಪ್ರಾಮಾಣಿಕ ಮುಖಂಡರಿಂದ ಅಲ್ಲ. ನಮ್ಮದೇ ಪಕ್ಷದ ಕೆಲವರು ಅಪಸ್ವರ ಎತ್ತಿ, ಸೋಲಿಗೆ ಕಾರಣವಾಗಿದ್ದಾರೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾದವ್ ಹರಿಹಾಯ್ದರು.

- ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಣೆ ಸಭೆಯಲ್ಲಿ ಯಶವಂತ ರಾವ್‌ ಗುಟುರು

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆಯಿಂದ ಜಿ.ಎಂ. ಸಿದ್ದೇಶ್ವರ ಕುಟುಂಬವನ್ನು ಕಳಿಸುವ ಷಡ್ಯಂತ್ರ ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿರುವುದು ಪ್ರಾಮಾಣಿಕ ಮುಖಂಡರಿಂದ ಅಲ್ಲ. ನಮ್ಮದೇ ಪಕ್ಷದ ಕೆಲವರು ಅಪಸ್ವರ ಎತ್ತಿ, ಸೋಲಿಗೆ ಕಾರಣವಾಗಿದ್ದಾರೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾದವ್ ಹರಿಹಾಯ್ದರು.

ನಗರದ ದಾ-ಹ ಅರ್ಬನ್ ಕೋ ಆಪ್ ಬ್ಯಾಂಕ್‌ ಸಮುದಾಯ ಭವನದಲ್ಲಿ ಭಾನುವಾರ ಬಿಜೆಪಿ ಜಿಲ್ಲಾ ಘಟಕದಿಂದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬೆನ್ನಿಗೆ ಚೂರಿ ಹಾಕಿದವರ ಬಗ್ಗೆ ಇಂಚಿಂಚು ಮಾಹಿತಿಯೂ ಇದೆ. ಅವರ ವಾಯ್ಸ್‌ ರೆಕಾರ್ಡ್‌ಗಳೂ ಇವೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಇನ್ನೂ ಬಹಳ ಅಧಿಕಾರ ಬರುವುದಿದೆ ಎಂದರು.

ಈ ಹಿಂದೆ ಇಕ್ಕು ಮದ್ದು ಅಂತಾ ಹಾಕುತ್ತಿದ್ದರು. ಮನಸ್ಸಲ್ಲಿ ಕೆಟ್ಟ ಉದ್ದೇಶವಿಟ್ಟುಕೊಂಡು, ಇಂತಹವರಿಗೆಂದು ಇಕ್ಕು ಮದ್ದು ಇಟ್ಟರೆ, ಇಕ್ಕು ಮುದ್ದು ಇಡಿಸಿಕೊಂಡ ವ್ಯಕ್ತಿಗೆ ಸಮಸ್ಯೆಯಾಗಿ, ಆರೋಗ್ಯ ಕೈಕೊಟ್ಟು, ಜೀವ ಕಳೆದುಕೊಳ್ಳುತ್ತಿದ್ದರು. ಹೀಗೆ ಇಕ್ಕು ಮದ್ದು ಇಟ್ಟವರ ವಂಶವೇ ನಿರ್ವಂಶವಾದ ನಿದರ್ಶನವಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಸಿದ್ದೇಶ್ವರ ದಾವಣಗೆರೆಯವರಲ್ಲ ಎನ್ನುವವರಿಗೆ ಕೇಳುತ್ತೇನೆ, ಜಿ.ಮಲ್ಲಿಕಾರ್ಜುನಪ್ಪ ಇಲ್ಲಿ ಬಂದು ಸ್ಪರ್ಧಿಸಿದ್ದಾಗ ಭೀಮಸಮುದ್ರ ದಾವಣಗೆರೆ ಕ್ಷೇತ್ರದ ಭಾಗವೇ ಆಗಿತ್ತು. ಗೋವಿಂದ ಕಾರಜೋಳ, ನಾರಾಯಣ ಸ್ವಾಮಿ, ಸ್ವತಃ ನರೇಂದ್ರ ಮೋದಿ ತಮ್ಮ ಕ್ಷೇತ್ರ, ರಾಜ್ಯ ಬಿಟ್ಟು ಬೇರೆ ಕಡೆ ಗೆದ್ದಿದ್ದಾರೆ. ನಮ್ಮ ಕ್ಷೇತ್ರದಲ್ಲಿ 6 ಸಲ ಬಿಜೆಪಿಗೆ ಗೆದ್ದು ಕೊಟ್ಟವರನ್ನೇ ಟೀಕಿಸುತ್ತಿರುವವರಿಗೆ ನಾಚಿಕೆ, ಮಾನ ಮರ್ಯಾದೆ ಇದೆಯೇ? ಸಿದ್ದೇಶ್ವರ ಕುಟುಂಬವನ್ನು ಇಲ್ಲಿನವರಲ್ಲ ಅನ್ನುತ್ತೀರಲ್ಲಾ ನಾಚಿಕೆಯಾದರೂ ಆಗಲ್ಲವೇ ಎಂದು ಕಿಡಿಕಾರಿದರು.

ಸಹೋದರಿ ಸಂಸದೆ ಉತ್ತರಿಸಲಿ:

ಧನ್ಯವಾದ ದಾವಣಗೆರೆ ಅಂತಾ ಹೆಸರಿನಲ್ಲಿ ದ್ವೇಷದ ಮಾರುಕಟ್ಟೆ ಮುಚ್ಚಲಾಗಿದೆ. ಪ್ರೀತಿಯ ಬಾಗಿಲು ತೆರೆದಿದ್ದೇವೆ ಎಂಬುದಾಗಿ ಪತ್ರಿಕೆಗಳಿಗೆ ಸಹೋದರಿ, ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಜಾಹೀರಾತು ನೀಡಿದ್ದಾರೆ. ಚುನಾವಣೆ ವೇಳೆ ನಮ್ಮ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಪ್ರಮುಖರ ಜೊತೆಗೆ ಮಾತನಾಡಿದರೆಂಬ ಒಂದೇ ಕಾರಣಕ್ಕೆ ನಿಮ್ಮ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದವರನ್ನು ಕೆಲಸದಿಂದ ತೆಗೆದುಹಾಕಿದ್ದು ದ್ವೇಷದ ಮಾರುಕಟ್ಟೆಯಾ ಅಥವಾ ಪ್ರೀತಿಯಾ ಬಾಗಿಲ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಯಶವಂತ ರಾವ್ ಹೇಳಿದರು.

Share this article