ನಿಸರ್ಗ ಪ್ರೀತಿಸುವ ಸಿದ್ದೇಶ್ವರ ಶ್ರೀಗಳು ನಿಸರ್ಗದಲ್ಲಿ ಲೀನ

KannadaprabhaNewsNetwork |  
Published : Jan 04, 2025, 12:30 AM IST
ಮಮದಾಪುರದಲ್ಲಿರುವ ಸಿದ್ದೇಶ್ವರ ಶ್ರೀಗಳ ಹೆಸರಿನ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಸ್ಮರಣೆ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಿಸರ್ಗವನ್ನು ಪ್ರೀತಿಸುವವರು ದೇವರಿಗೆ ಹತ್ತಿರವಿದ್ದಂತೆ ಎಂಬ ಸಂದೇಶದಂತೆ ಸಿದ್ದೇಶ್ವರ ಶ್ರೀಗಳು ನಿಸರ್ಗದಲ್ಲಿ ಲೀನರಾಗಿದ್ದಾರೆ ಎಂದು ಬಾಲ್ಕಿ ಬಸವಲಿಂಗ ದೇವರು ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಿಸರ್ಗವನ್ನು ಪ್ರೀತಿಸುವವರು ದೇವರಿಗೆ ಹತ್ತಿರವಿದ್ದಂತೆ ಎಂಬ ಸಂದೇಶದಂತೆ ಸಿದ್ದೇಶ್ವರ ಶ್ರೀಗಳು ನಿಸರ್ಗದಲ್ಲಿ ಲೀನರಾಗಿದ್ದಾರೆ ಎಂದು ಬಾಲ್ಕಿ ಬಸವಲಿಂಗ ದೇವರು ಹೇಳಿದರು.

ಬಬಲೇಶ್ವರ ತಾಲೂಕಿನ ಮಮದಾಪುರದ ಸಿದ್ದೇಶ್ವರ ಶ್ರೀಗಳ ಹೆಸರಿನ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶದಲ್ಲಿ ಸಿದ್ದೇಶ್ವರಶ್ರೀಗಳ ಸ್ಮರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು. ಭಗವಂತ ನಿಸರ್ಗ ಪ್ರಿಯನಾಗಿದ್ದಾನೆ. ಮನುಷ್ಯನಿಗೆ ಪರಿಸರದಲ್ಲಿಯೇ ಎಲ್ಲವೂ ದೊರಕುತ್ತದೆ. ಪರಿಸರವನ್ನು ಮಾನವ ಕಾಪಾಡಿದರೇ ಮಾನವನನ್ನು ಪರಿಸರ ಕಾಪಾಡುತ್ತದೆ. ಯುವಪೀಳಿಗೆ ಸುಂದರ ನಿಸರ್ಗ ನಿರ್ಮಾಣ ಮಾಡುವಲ್ಲಿ ಶ್ರಮವಹಿಸಿದರೆ, ಬದುಕು ಸುಂದರವಾಗುತ್ತದೆ ಎಂಬ ಸಂದೇಶ ನೀಡಿದರು.

ಕಾಖಂಡಕಿ ಗುರುದೇವಾಶ್ರಮದ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಕೇವಲ ೪೦ ವರ್ಷಗಳಲ್ಲಿ ಪರಿಸರದಲ್ಲಿ ತಾಪಮಾನ ಹೆಚ್ಚಾಗಿದೆ. ಸದ್ಯದ ತಾಪಮಾನ ಇನ್ನಷ್ಟು ಹೆಚ್ಚಾಗದಂತೆ ಪ್ರತಿಯೊಬ್ಬರು ಸಸಿ ನೆಟ್ಟರೆ ಪರಿಸರದಲ್ಲಿ ಸಮತೋಲನ ಕಾಪಾಡಬಹುದು. ಅದಕ್ಕಾಗಿ ಪರಿಸರ ಸಂರಕ್ಷಣೆ ಕುರಿತ ಜನಜಾಗೃತಿಗಾಗಿ ವರ್ಷದಲ್ಲಿ ಒಂದೆರಡು ಬಾರಿ ನುರಿತ ತಜ್ಞರಿಂದ ಚಿಂತನಾಗೋಷ್ಠಿ ಏರ್ಪಡಿಸಬೇಕು. ಇದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದರು.

ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ೩ ವರ್ಷಗಳ ಹಿಂದೆ ಸಿದ್ದೇಶ್ವರ ಶ್ರೀಗಳ ಪ್ರೇರಣೆಯಿಂದ ಎಂ.ಬಿ.ಪಾಟೀಲ ಅವರು ಮಮದಾಪುರ ಕೆರೆ ಪಕ್ಕದಲ್ಲಿ ಅರಣ್ಯ ಪ್ರದೇಶ ನಿರ್ಮಿಸಲು ಸಂಕಲ್ಪ ಮಾಡಿದ್ದರು. ಅರಣ್ಯ ನಿರ್ಮಿಸಿ ಶ್ರೀಗಳನ್ನು ಕರೆತಂದು ತೋರಿಸಬೇಕು ಎನ್ನುವಷ್ಟರಲ್ಲಿ ಅವರು ಅನಾರೋಗ್ಯಕ್ಕೆ ತುತ್ತಾದರು. ರಾಜ್ಯ ಸರ್ಕಾರ ಮಮದಾಪುರ ಅರಣ್ಯ ಪ್ರದೇಶವನ್ನು ಸಿದ್ದೇಶ್ವರ ಶ್ರೀಗಳ ಜೀವವೈವಿದ್ಯತೆಯ ಪಾರಂಪರಿಕ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಿದ್ದು, ಶ್ರೀಗಳ ಪ್ರೀತಿಯ ಪ್ರಕೃತಿಯನ್ನು ಮರು ನಿರ್ಮಾಣ ಮಾಡುವುದರ ಜೊತೆಗೆ ಮುಂದಿನ ತಲೆಮಾರುಗಳು ಶ್ರೀಗಳು ಬಯಲಲ್ಲಿ ಬಯಲಾಗಿ ನೋಡಲು ಪೂರಕವಾಗುತ್ತದೆ ಎಂದು ಹೇಳಿದರು.

ವಲಯ ಅರಣ್ಯಾಧಿಕಾರಿ ಸಂತೋಷ ಆಜುರು ಮಾತನಾಡಿ, ಬೇವು, ಆಲ, ಹೊಂಗೆ ಇತ್ಯಾದಿ ಸಸಿಗಳನ್ನು ಕೈಗಾರಿಕೆ ಸಚಿವರ ಮುಂದಾಳತ್ವದಲ್ಲಿ ೩೦೦ ಹೆಕ್ಟರ್ ಪ್ರದೇಶದಲ್ಲಿ ಸಸಿ ನೆಡಲಾಗಿದೆ. ಇದೀಗ ಅವು ಸಮೃದ್ಧವಾಗಿ ಬೆಳೆದು ನಿಂತಿವೆ ಎಂದರು.

ಬಸವಕಲ್ಯಾಣದ ಬಸವ ದೇವರು, ಬಾಲ್ಕಿಯ ಪ್ರಭುಲಿಂಗ ದೇವರು, ವೃಕ್ಷ ಅಭಿಯಾನ ಪ್ರತಿಷ್ಠಾನ ಸಂಚಾಲಕ ಡಾ.ಮುರುಗೇಶ ಪಟ್ಟಣಶೆಟ್ಟಿ, ವೃಕ್ಷೋಥಾನ್‌ ಗ್ರುಪ್ ಸದಸ್ಯರಾದ ಶಿವನಗೌಡ ಪಾಟೀಲ, ವೀರೇಂದ್ರ ಗುಚ್ಚಟ್ಟಿ, ಅಪ್ಪು ಭೈರಗೊಂಡ, ಡಾ.ಪ್ರವೀಣ ಚೌರ, ಸಮೀರ ಬಳಗಾರ, ಶಂಬುಲಿಂಗ ಕರ್ಪೂರಮಠ, ಸೋಮಶೇಖರ ಸ್ವಾಮಿ, ಸೋಮು ಮಠ, ಸಂದೀಪ ಮಡಗೊಂಡ, ಮುತ್ತಣ್ಣ ಬಿರಾದಾರ ಸೇರಿದಂತೆ ಮುಂತಾದವರು ಇದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ