''ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಬಾಗಿಲು ಬಡಿದ ಬಿಎಸ್‌ವೈರನ್ನ ತಡೆದು, ಸಿಎಂ ಆಗಿಸಿದ್ದೇ ಸಿದ್ದೇಶ್ವರ ''

KannadaprabhaNewsNetwork |  
Published : Jul 09, 2025, 12:18 AM ISTUpdated : Jul 09, 2025, 01:19 PM IST
 Yediyurappa

ಸಾರಾಂಶ

ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಬಾಗಿಲನ್ನು ಬಡಿದಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಮಾಡುವ ಜವಾಬ್ದಾರಿ ಪಡೆದಿದ್ದಲ್ಲದೇ, ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ದೊಡ್ಡ ಕೊಡುಗೆ ನೀಡಿದ್ದು, ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು  ಜಿ.ಎಂ. ಸಿದ್ದೇಶ್ವರ   ಅರವಿಂದ ಲಿಂಬಾವಳಿ 

  ದಾವಣಗೆರೆ :  ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಬಾಗಿಲನ್ನು ಬಡಿದಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಮಾಡುವ ಜವಾಬ್ದಾರಿ ಪಡೆದಿದ್ದಲ್ಲದೇ, ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ದೊಡ್ಡ ಕೊಡುಗೆ ನೀಡಿದ್ದು, ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಎಂದು ಬಿಜೆಪಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಮಂಗಳವಾರ ಜಿ.ಎಂ. ಸಿದ್ದೇಶ್ವರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ. ಸಿದ್ದೇಶ್ವರ್‌ 74ನೇ ಜನ್ಮದಿನ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಮಾಜಿ ಸಂಸದ ದಿವಂಗತ ಜಿ.ಮಲ್ಲಿಕಾರ್ಜುನಪ್ಪ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಕುಟುಂಬ ದೊಡ್ಡ ಕೊಡುಗೆ ನೀಡಿದೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಬಿಜೆಪಿ ಕಚೇರಿ ತೆರೆಯಲು ಜಾಗ ನೀಡಿದ್ದು ಸಿದ್ದೇಶ್ವರ. ದಾವಣಗೆರೆ ಎಸ್.ಎ. ರವೀಂದ್ರನಾಥ ಮಂತ್ರಿ ಆಗುವುದಕ್ಕೂ ಸಿದ್ದೇಶ್ವರರೇ ಕಾರಣ. ಯಡಿಯೂರಪ್ಪ ನಮ್ಮ ಪಕ್ಷವನ್ನು ಬಿಟ್ಟುಹೋದವರು ಮತ್ತೆ ಯಾಕೆ ಬಂದರೋ ಗೊತ್ತಾಗಿಲ್ಲ. ಲೀ-ಮೆರೆಡಿಯನ್ ಹೋಟೆಲ್‌ನಲ್ಲಿ ಏನಾಯ್ತು ಎಂಬುದು ನನಗೆ ಗೊತ್ತಿದೆ. ಯಡಿಯೂರಪ್ಪ ಸಿಎಂ ಆಗುವಲ್ಲಿ ಅನೇಕರು ಕಾರಣರಿದ್ದಾರೆ. ಅದರ ಮುಂದಾಳತ್ವ ವಹಿಸಿದ್ದು ಸಿದ್ದೇಶ್ವರ ಎಂದು ತಿಳಿಸಿದರು.

ಜನ್ಮದಿನ ಸಂಭ್ರಮಕ್ಕೆ ಬಾರದ ಯಡಿಯೂರಪ್ಪ:

ನಮ್ಮ ಪಕ್ಷಕ್ಕೆ ಆರ್ಥಿಕ ನಷ್ಟ ಆದಾಗಲ್ಲೆಲ್ಲಾ ಸಿದ್ದೇಶ್ವರ ಸಹಕಾರ ನೀಡಿದ್ದಾರೆ. ಇದೇ ಎಸ್.ಎ. ರವೀಂದ್ರನಾಥ ಜನ್ಮದಿನಕ್ಕೆ ಹೋಗುವುದಕ್ಕೆ ಯಡಿಯೂರಪ್ಪನವರಿಗೆ ಆಗುತ್ತದೆ. ಆದರೆ, ತಾವು ಮುಖ್ಯಮಂತ್ರಿ ಆಗಲು ಕಾರಣನಾದ ವ್ಯಕ್ತಿ ಸಿದ್ದೇಶ್ವರ ಜನ್ಮದಿನಕ್ಕೆ ಬರುವುದಕ್ಕೂ ಆಗದಷ್ಟು ಅಕ್ಷಮ್ಯ ಅಪರಾಧ ಏನು ಮಾಡಿದ್ದಾರೆ ಯಡಿಯೂರಪ್ಪನವರೇ? ಇಂತಹ ದೊಡ್ಡ ವ್ಯಕ್ತಿತ್ವದ, ಮಹಾನ್ ನಾಯಕನನ್ನು ನಡೆಸಿಕೊಂಡ ರೀತಿ ನಮಗೆ ನೋವುಂಟು ಮಾಡುತ್ತಿದೆ. ಒಂದು ಕ್ಷೇತ್ರವನ್ನು 6 ಅವಧಿಗೆ ಪ್ರತಿನಿಧಿಸುವುದು ಸಾಮಾನ್ಯವಲ್ಲ. ಅಂತಹ ಸಾಧನೆ ಜಿ.ಮಲ್ಲಿಕಾರ್ಜುನಪ್ಪ, ಜಿ.ಎಂ.ಸಿದ್ದೇಶ್ವರ ತಂದೆ, ಮಗ ಇಲ್ಲಿ ಮಾಡಿ, ಸಾಧಿಸಿದ್ದಾರೆ ಎಂದು ಅವರು ಹೇಳಿದರು.

ಶಿಕಾರಿಪುರದಲ್ಲೂ ಬಿಜೆಪಿ ಗೆಲ್ಲಿಸಿದ್ದು ಸಿದ್ದೇಶ್ವರ:

ಬಿಜೆಪಿ ಮಧ್ಯ ಕರ್ನಾಟಕದ ಆಧಾರ ಸ್ತಂಭ ಸಿದ್ದೇಶ್ವರ. ಇಲ್ಲಿ ಗಾಯತ್ರಿ ಸಿದ್ದೇಶ್ವರ ಗೆಲ್ಲಬೇಕಾಗಿತ್ತು. ಸೋತರೂ ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಕುಟುಂಬ ನಿರಂತರ ಪಕ್ಷದ ಕೆಲಸ ಮಾಡುತ್ತಿದೆ. ಯಾರು ಪಕ್ಷದ ವಿರುದ್ಧ ಕೆಲಸ ಮಾಡುತ್ತಾರೋ, ಮಾಡಿದ್ದಾರೋ ಅಂತಹವರ ವಿರುದ್ಧ ಕ್ರಮ ಆಗಬೇಕು. ದಾವಣಗೆರೆಯಲ್ಲಷ್ಟೇ ಅಲ್ಲ, ಶಿಕಾರಿಪುರದಲ್ಲೂ ಬಿಜೆಪಿ ಗೆಲ್ಲುವಲ್ಲಿ ಸಿದ್ದೇಶ್ವರ ಪರಿಶ್ರಮ ಇದೆ. ಇದನ್ನು ಗೆದ್ದವರು ಮರೆಯಬಾರದು. ಇಂಟರ್ನಲ್ ಲುಬ್ರಿಕಂಟ್‌ ಅಂತೀವಿ. ಹಾಗೆಯೇ ಲುಬ್ರಿಕೆಂಟ್ ಆಗಿ ಕೆಲಸ ಮಾಡುತ್ತಿದ್ದವರು ಸಿದ್ದೇಶ್ವರ ಎಂದು ಅವರು ವಿವರಿಸಿದರು.

ನಿಮಗೆ ಕೇಂದ್ರ ನಾಯಕರ ಜೊತೆಗೆ ಉತ್ತಮ ಸಂಬಂಧವಿದೆ ಸಿದ್ದೇಶಣ್ಣ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ 3 ಸಲ ಭೇಟಿ ನೀಡಿದ್ದಾರೆ. ನಿಮ್ಮನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಕೆಲವರು ಕಿವಿಯಲ್ಲಿ, ಕೆಲವರು ಮೈಕ್‌ನಲ್ಲಿ ಮಾತನಾಡುತ್ತಾರೆ. ಪಕ್ಷದ ಆಂತರಿಕ ವಿಚಾರ ಸಾರ್ವಜನಿಕವಾಗಿ ಚರ್ಚಿಸಬೇಡಿ. ಪಕ್ಷದಲ್ಲಿ ಬಲವಿದೆ. ಸಿದ್ದೇಶ್ವರರ ಕುಟುಂಬದಲ್ಲೂ ಬಲವಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಹಗರಣಗಳ ದೊಡ್ಡ ಪಟ್ಟಿಯೇ ಇದೆ. ಸ್ವತಃ ಆಡಳಿತ ಪಕ್ಷದ ಶಾಸಕರೇ ಇದೀಗ ಒಬ್ಬೊಬ್ಬರಾಗಿ ಧ್ವನಿ ಎತ್ತುತ್ತಿದ್ದಾರೆ. ಯಾವುದೇ ಪಕ್ಷವೂ ಸಾರ್ವಜನಿಕರ ತೆರಿಗೆ ಹಣ ಪಡೆದು, ಚುನಾವಣೆ ಮಾಡಿದ್ದು ನೋಡಿಲ್ಲ. ಆದರೆ, ಸಿದ್ದರಾಮಯ್ಯ ಸರ್ಕಾರವು ವಾಲ್ಮೀಕಿ ನಿಗಮದ ಹಣವನ್ನು ಲೋಕಸಭೆ ಚುನಾವಣೆಗೆ ಬಳಸಿದ್ದನ್ನು ಪ್ರಶ್ನಿಸಿ, ನ್ಯಾಯಾಲಯಕ್ಕೆ ಹೋಗಿದ್ದರಿಂದ ಸಿಬಿಐ ತನಿಖೆಗೆ ಕೋರ್ಟ್ ಆದೇಶಿಸಿದೆ ಎಂದು ಲಿಂಬಾವಳಿ ಹೇಳಿದರು.

ಬಾಂಗ್ಲಾ ನುಸುಳುಕೋರರೂ ಇರಬಹುದು:

ನಿಮದ ಹಣದ ದುರ್ಬಳಕೆ ವಿರುದ್ಧ ನಮಗೆ ಪಾದಯಾತ್ರೆಗೆ ಅವಕಾಶ ನೀಡಲಿಲ್ಲ. ನಾವು ಕೋರ್ಟ್‌ಗೆ ಹೋದ ನಂತರ ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ. ಈ ಸರ್ಕಾರದ ವಿರುದ್ಧ ನಾವು ಧ್ವನಿ ಎತ್ತಿ ಹೋರಾಟ ಬಲಪಡಿಸಬೇಕಿದೆ. ವಕ್ಫ್ ವಿರುದ್ಧವೂ ರಾಜ್ಯಾದ್ಯಂತ ಹೋರಾಟ ನಡೆಸಿದೆವು. ಮುಂದಿನ ದಿನಗಳಲ್ಲಿ ಒಂದು ದೊಡ್ಡ ಅನಾಹುತವೂ ಆಗುವುದಿದೆ. ಬಾಂಗ್ಲಾ ದೇಶದ ನುಸುಳುಕೋರರು ಅಕ್ರಮವಾಗಿ ಬಂದು ಭಾರತದೊಳಗೆ, ಕರ್ನಾಟಕದಲ್ಲಿ ಸೇರಿಕೊಂಡಿದ್ದಾರೆ. ಅಂತಹವರು ದಾವಣಗೆರೆಯಲ್ಲೂ ಇರಬಹುದು ಜಾಗ್ರತೆ ಎಂದು ಅವರು ಎಚ್ಚರಿಸಿದರು.

ಬಾಂಗ್ಲಾ ವಲಸಿಗರ ವಿರುದ್ಧ ಹೋರಾಡಲು ನಮ್ಮ ಪಕ್ಷ ವಾರ್ ರೂಂ ಸ್ಥಾಪಿಸಿದೆ. ಬೆಂಗಳೂರಿನಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದ ಮನೆ ಮಾಲೀಕರನ್ನೇ ಬಾಂಗ್ಲಾ ವಲಸಿಗರು ಹತ್ಯೆ ಮಾಡಿದ್ದಾರೆ. ಕಡಿಮೆ ಕೂಲಿಗೆ ಕೆಲಸ ಮಾಡುತ್ತಾರೆಂದು ಅಂತಹವರನ್ನು ಕೆಲಸಕ್ಕೆ ಇಟ್ಟುಕೊಂಡು ಪ್ರಾಣವನ್ನೇ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಇಂಥದ್ದರ ವಿರುದ್ಧ ಜಿ.ಎಂ.ಸಿದ್ದೇಶ್ವರ, ರಮೇಶ ಜಾರಕಿಹೊಳಿ, ಕುಮಾರ ಬಂಗಾರಪ್ಪ, ನಾನು ಸೇರಿದಂತೆ ಎಲ್ಲರೂ ಅಭಿಯಾನ ಮಾಡುತ್ತಿದ್ದೇವೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು. 

PREV
Read more Articles on