ಲೋಕಕಲ್ಯಾಣಾರ್ಥವಾಗಿ ಸಿದ್ಧಚಕ್ರ ಆರಾಧನಾ ಮಹೋತ್ಸವ

KannadaprabhaNewsNetwork |  
Published : Dec 11, 2025, 02:15 AM IST
10ಎಚ್‌ವಿಆರ್2 | Kannada Prabha

ಸಾರಾಂಶ

ಜಗತ್ತಿನಲ್ಲಿ ಶಾಂತಿ ನೆಲೆಸಲು ಹಾಗೂ ಭೂಮಿ ಮೇಲಿನ ಚರಾಚರ ಜೀವರಾಶಿಗಳ ಕಲ್ಯಾಣಾರ್ಥವಾಗಿ ಬೃಹತ್‌ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ ಮತ್ತು ಪಿಂಛಿ ಪರಿವರ್ತನಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಹೇಳಿದರು.

ಹಾವೇರಿ: ಜಗತ್ತಿನಲ್ಲಿ ಶಾಂತಿ ನೆಲೆಸಲು ಹಾಗೂ ಭೂಮಿ ಮೇಲಿನ ಚರಾಚರ ಜೀವರಾಶಿಗಳ ಕಲ್ಯಾಣಾರ್ಥವಾಗಿ ಬೃಹತ್‌ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ ಮತ್ತು ಪಿಂಛಿ ಪರಿವರ್ತನಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಹೇಳಿದರು.

ನಗರದ ಜಿನಮಂದಿರದಲ್ಲಿ ಡಿ. 11ರಿಂದ ಆರಂಭವಾಗಲಿರುವ ಬೃಹತ್ ಸಿದ್ಧಚಕ್ರ ಆರಾಧನೆ ಮಹೋತ್ಸವ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಸಂಸಾರದಲ್ಲಿ ಯಾವುದೇ ಉದ್ದೇಶವಿಲ್ಲದೇ ಯಾವುದೇ ಕಾರ್ಯ ಮಾಡುವುದಿಲ್ಲ. ಪ್ರತಿಯೊಂದು ಕಾರ್ಯ ಮಾಡಬೇಕಾದರೆ ಏನಾದರೂ ಒಂದು ಕಾರಣ ಇರುತ್ತದೆ. ಸಂಸಾರ ದುಃಖಮಯ ಹಾಗೂ ಶರೀರ ರೋಗಮಯವಾಗಿದೆ. ಎಂಟು ಕರ್ಮಗಳಿಂದ ಮುಕ್ತರಾದಾಗ ಮಾತ್ರ ಶಾಶ್ವತ ಸುಖ ಪ್ರಾಪ್ತವಾಗಲು ಸಾಧ್ಯ. ಜೈನ ಧರ್ಮದ ಆಚರಣೆಗಳಲ್ಲಿ ಸಿದ್ಧಚಕ್ರ ಆರಾಧನೆ ಶ್ರೇಷ್ಠವಾಗಿದೆ. ಹಾಗಾಗಿ ಎಂಟು ಕರ್ಮಗಳ ನಿರ್ಜರ ಮಾಡಲು ಹಾಗೂ ಭಗವಂತರಾಗಲು ಭಾವಮಾಡಲು ಆರಾಧನೆ ಮಾಡಲಾಗುತ್ತದೆ ಎಂದರು.

ಮುನಿ ಮಹಾರಾಜರ ಸಾನ್ನಿಧ್ಯದಲ್ಲಿ ಹಾವೇರಿ ನಗರದಲ್ಲಿ ಬೃಹತ್ ಸಿದ್ಧಚಕ್ರ ಆರಾಧನೆ ಮಾಡುವುದು ಇಲ್ಲಿಯ ಶ್ರಾವಕ ಮತ್ತು ಶ್ರಾವಕಿಯರ ಬಹುದಿನಗಳ ಸಂಕಲ್ಪವಾಗಿತ್ತು. ಯೋಗಾಯೋಗದಿಂದ ಅದು ಈಗ ನೆರವೇರುತ್ತಿದೆ. ಅತ್ಯಂತ ಉತ್ಕೃಷ್ಟವಾಗಿ ಈ ಆರಾಧನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪ್ರತಿಷ್ಠಾ ಆಚಾರ್ಯರಾದ ಸದಲಗಾದ ಮಾಣಿಕ ಶ್ರೀಪಾಲ ಚಂದಗಡೆ ಮಾತನಾಡಿ, ಸತತ 9 ದಿನಗಳ ಆರಾಧನೆ ನಡೆಯಲಿದ್ದು, ಡಿ. 11ರಿಂದ ಡಿ. 21ರ ವರೆಗೆ ಹಾವೇರಿ ನಗರದ ರಜನಿ ಸಭಾಂಗಣದಲ್ಲಿ ಬೃಹತ್ ಸಿದ್ಧಚಕ್ರ ಆರಾಧನೆಯಲ್ಲಿ ಒಟ್ಟು 2048 ಅರ್ಘ್ಯಗಳನ್ನು ಬೆಳಗಲಾಗುವುದು. ಜೈನ ಧರ್ಮದಲ್ಲಿ ಆರಾಧನೆಗೆ ಆದ್ಯತೆ ನೀಡಲಾಗಿದೆ. ಹಾವೇರಿ ಜಿಲ್ಲೆ ಸೇರಿದಂತೆ ವಿವಿಧ ವಿವಿಧ ಜಿಲ್ಲೆಗಳಲ್ಲಿ ಶ್ರಾವಕ ಮತ್ತು ಶ್ರಾವಕಿಯರು ಶ್ವೇತವರ್ಣ ಹಾಗೂ ಕೇಸರಿ ವಸ್ತ್ರಗಳನ್ನು ಧರಿಸಿ ಈ ಆರಾಧನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12.30ರ ವರೆಗೆ ವಿಶೇಷ ಪೂಜೆಗಳು, ಮಧ್ಯಾಹ್ನ 2.30ಕ್ಕೆ ಸಭೆ ಕಾರ್ಯಕ್ರಮ, ಸಂಜೆ ಆರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಹೇಳಿದರು.

ಬೃಹತ್ ಸಿದ್ಧಚಕ್ರ ಆರಾಧನೆ ಮಹೋತ್ಸವ ಸಮಿತಿ ಕಾರ್ಯದರ್ಶಿ ಎಸ್.ಎ. ವಜ್ರಕುಮಾರ ಅವರು ಪೂಜಾ ವಿಧಿ-ವಿಧಾನಗಳು ಹಾಗೂ ಮೆರವಣಿಗೆ, ಸಭಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಬೃಹತ್ ಸಿದ್ಧಚಕ್ರ ಆರಾಧನೆ ಮಹೋತ್ಸದ ಪ್ರಚಾರದ ಪೋಸ್ಟರ್ ಬಿಡುಗಡೆಗೊಳಿಸಿದರು.

ಬೃಹತ್ ಸಿದ್ಧಚಕ್ರ ಆರಾಧನೆ ಮಹೋತ್ಸವ ಸಮಿತಿ ಅಧ್ಯಕ್ಷ ಸುಭಾಸ ಪಾಟೀಲ, ಸಿದ್ಧಚಕ್ರ ಆರಾಧನೆ ಮಹೋತ್ಸವದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಭರತ ಹಜಾರಿ, ಚಂದ್ರನಾಥ ಕಳಸೂರ, ಸಂಜೀವ ಇಂಡಿ, ಮದನಕುಮಾರ ಶೆಟ್ಟರ್, ವಿಮಲ ಬೋಗಾರ, ಭೂಪಾಲ ಹೊಳಗಿ, ಮಹಾವೀರ ಹಜಾರಿ, ಶ್ರೀಧರ ವರೂರ, ಮಂಜು ಬಾಳಕ್ಕನವರ, ಅರಿಹಂತ ಕಳಸೂರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರೇಕೆರೆ ಒತ್ತುವರಿ ಆರೋಪ: ತುರ್ತು ಕ್ರಮಕ್ಕೆ ಸೂಚನೆ
ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದೆ: ಮಂಜುಳಾ ಆರೋಪ