ಸರ್ಕಾರದ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಂಡ ಕೆಲವರಿಗೆ ಇನ್ನೂ ಹಣ ಬಿಡುಗಡೆಗೊಂಡಿಲ್ಲ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಆರ್ಥಿಕ ದಿವಾಳಿಯಾಗಿ, ಮಹಿಳೆಯರನ್ನು ಬೀದಿ ಪಾಲು ಮಾಡಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ಸರ್ಕಾರದ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಂಡ ಕೆಲವರಿಗೆ ಇನ್ನೂ ಹಣ ಬಿಡುಗಡೆಗೊಂಡಿಲ್ಲ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಆರ್ಥಿಕ ದಿವಾಳಿಯಾಗಿ, ಮಹಿಳೆಯರನ್ನು ಬೀದಿ ಪಾಲು ಮಾಡಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ ಆರೋಪಿಸಿದರು.

ಗುರುವಾರ ನಗರದ ದೀನದಯಾಳ ಸಭಾಭವನದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಸಂಘಟನಾತ್ಮಕ ಸಭೆ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿನಿಯರ ವಸತಿಗೃಹದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಸಚಿವರು, ಶಾಸಕರು, ಪರಿಶೀಲನೆ ಸಭೆ ನಡೆಸುತ್ತಿಲ್ಲ. ರಸ್ತೆಗಳೆಲ್ಲವೂ ಹೊಂಡಗಳು ತುಂಬಿವೆ. ರಾಜ್ಯದಲ್ಲಿ ಬಾಲ್ಯವಿವಾಹ ಆಗುತ್ತಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅಕ್ಕ ಪಡೆ ಸ್ಥಾಪಿಸಿ ಏನು ಸಾಧನೆ ಮಾಡಿದ್ದಾರೆ. ಪುಂಡ-ಪೋಕರಿಗಳಿಗೆ ಕಾನೂನು ಸುವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ಅಡವು ಇಟ್ಟಿದೆ. ಸಮಾಜದ ದುಷ್ಟ ಶಕ್ತಿಗಳಿಗೆ ಕಾಂಗ್ರೆಸ್ ಸರ್ಕಾರ ಬೆನ್ನೆಲುಬಾಗಿ ನಿಂತಿದೆ. ಮಹಿಳೆಯರನ್ನು ಕಣ್ಣೀರಿನಲ್ಲಿ ಕೈತೊಳೆಸುತ್ತಿದೆ. ಮನೆಗಳಿಗೆ ಹಣಕ್ಕಾಗಿ ಕಾಯುತ್ತಿರುವರನ್ನು ಸಂಪರ್ಕಿಸಿ ದೊಡ್ಡ ಮಟ್ಟದ ಹೋರಾಟ ಮಾಡಬೇಕು. ಕರ್ನಾಟಕದಲ್ಲಿ ಲಿಂಗಾನುಪಾತ ಕುಸಿದಿದೆ. ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಕೆಲಸ ಮಾಡಲು ಸಮಯವಿಲ್ಲದಿದ್ದರೆ ರಾಜೀನಾಮೆ ನೀಡಿ ಸಕ್ಕರೆ ಕಾರ್ಖಾನೆ ಸಚಿವರಾಗಿ ಕಾರ್ಯನಿರ್ವಹಿಸಲಿ ಎಂದು ಸವಾಲು ಹಾಕಿದರು.

ರಾಷ್ಟ್ರಮಟ್ಟದಲ್ಲಿ ಜನರ ಭಾವನೆಗೆ ವಿರುದ್ಧ ಧ್ವನಿ ಎತ್ತುವುದು ಕಾಂಗ್ರೆಸ್‌ನ ಅಜೆಂಡಾ. ವಂದೇ ಮಾತರಂ 150ನೇ ವರ್ಷದ ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್‌ ಅನಾವಶ್ಯಕ ಜನರ ದಿಕ್ಕುತಪ್ಪಿಸುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆ ಸುರಕ್ಷತೆಗೆ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ.‌ ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್‌ ಕುರಿತು ಅವಹೇಳನಕಾರಿ ಮಾತನಾಡಿದ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಬಿಹಾರದ ಸಹೋದರಿಯರು ಉತ್ತರ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಅನೇಕ ಯೋಜನೆ ಅನುಷ್ಠಾನಗೊಳಿಸಿದೆ. ನರೇಂದ್ರ ಮೋದಿ ಕನಸಿನಂತೆ ಲಕ್ಷಾಂತರ ಮಹಿಳೆಯರು ಸ್ವ-ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಹೆಗಡೆ ಕರ್ಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ಗೌಡ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ, ರಾಜ್ಯ ಸಮಿತಿ ಸದಸ್ಯೆ ರೇಖಾ ಹೆಗಡೆ ಕಂಪ್ಲಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಾತಾ, ಮಹಿಳಾ ಮೋರ್ಚಾ ನಗರ ಘಟಕಾಧ್ಯಕ್ಷೆ ಶಿಲ್ಪಾ ನಾಯ್ಕ, ಮಹಿಳಾ ಮೋರ್ಚಾ ಗ್ರಾಮೀಣ ಘಟಕಾಧ್ಯಕ್ಷೆ ಅನಸೂಯಾ ಹೆಗಡೆ ಮತ್ತಿತರು ಇದ್ದರು.

ಜಿಲ್ಲೆಯಲ್ಲಿ 12 ಯುವತಿಯರ ನಾಪತ್ತೆ

ಉತ್ತರಕನ್ನಡ ಜಿಲ್ಲೆಯಲ್ಲಿ 12 ಯುವತಿಯರು ನಾಪತ್ತೆಯಾಗಿದ್ದು, ಅವರನ್ನು ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ನಾಪತ್ತೆಯಾದ ಕುರಿತು ಪೊಲೀಸ್‌ ಇಲಾಖೆ ಎಫ್‌ಐಆರ್‌ ದಾಖಲಿಸಿಲ್ಲ. ಇದರ ಕುರಿತು ಮುಂದಿನ ದಿನಗಳಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೇಟಿಯಾಗಿ ಉಗ್ರ ಹೋರಾಟ ನಡೆಸಿ, ಧ್ವನಿ ಎತ್ತಲಾಗುತ್ತದೆ. ಅಲ್ಲದೇ ಮಹಿಳೆಯರಿಗೆ ಅನ್ಯಾಯವಾದ ವೇಳೆ ಖಂಡಿಸಲು ಜಿಲ್ಲಾ ಮಹಿಳಾ ಮೋರ್ಚಾ ಸದೃಢವಾಗಿದೆ ಎಂದು ಸಿ.ಮಂಜುಳಾ ಹೇಳಿದರು.