ಗದಗ: ಈ ನಾಡು ಕಂಡ ಶ್ರೇಷ್ಠ ಮಠಾಧೀಶರಾಗಿದ್ದ ಸಿದ್ಧಲಿಂಗ ಮಹಾಸ್ವಾಮಿಗಳು ನಿಜಕ್ಕೂ ಮಾದರಿ ವ್ಯಕ್ತಿತ್ವ ಹೊಂದಿದ್ದರು. ಅವರ ಜತೆ ಅವಿನಾಭಾವ ಸಂಬಂಧ ಇರಿಸಿಕೊಂಡಿದ್ದ ನಾನು, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಎಲ್ಲೆಡೆ ಹಿಂಸೆ, ಅನಾಚಾರ ಹೆಚ್ಚುತ್ತಿರುವ ಹಾಗೂ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿರುವ ಈ ಕಾಲದಲ್ಲಿ ಮಠಗಳ ಹಾಗೂ ಮಠಾಧೀಶರ ಪಾತ್ರ ಮಹತ್ವದ್ದಾಗಿದೆ. ಸಮಾಜದಲ್ಲಿ ಸುಶಿಕ್ಷಿತರ ಪ್ರಮಾಣ ಹೆಚ್ಚಾಗುತ್ತಿದ್ದರೂ ಅದೇ ಪ್ರಮಾಣದಲ್ಲಿ ಜಾತೀಯತೆಯೂ ಹೆಚ್ಚುತ್ತಿರುವುದು ವಿಷಾದಕರ ಸಂಗತಿ. 12ನೇ ಶತಮಾನದ ಬಸವಾದಿ ಶರಣರ ತತ್ವಗಳನ್ನು ಅಳವಡಿಸಿಕೊಂಡಾಗ ಜಾತಿಯ ಸಂಕೋಲೆಯಿಂದ ಹೊರಬರಲು ಸಾಧ್ಯವಾಗುತ್ತದೆ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ತೋಂಟದ ಸಿದ್ಧಲಿಂಗ ಶ್ರೀಗಳ ನೆನಪು ಇಂದಿಗೂ ನನಗೆ ಚೈತನ್ಯದ ಚಿಲುಮೆಯಾಗಿದ್ದು, ಹುಟ್ಟಿದ ಮಗುವಿನ ಮುಗ್ಧತೆಯನ್ನು ಕೊನೆಯವರೆಗೂ ಕಾಪಿಟ್ಟುಕೊಂಡಿದ್ದ ಅಪರೂಪರ ಯತಿಗಳು ಅವರಾಗಿದ್ದರು. ಬದುಕಿನ ಸವಾಲುಗಳನ್ನು ಯಾವ ರೀತಿ ಎದುರಿಸಬೇಕು ಎನ್ನುವುದಕ್ಕೆ ಅವರು ಪ್ರೇರಣೆಯಾಗಿದ್ದಾರೆ. ಬಸವೇಶ್ವರರ ಕಾಯಕ ತತ್ವವನ್ನು ಅಳವಡಿಸಿಕೊಂಡಿರುವ ಬಸವರಾಜ ಹೊರಟ್ಟಿ ನೇರ ನುಡಿಯ ಧೀಮಂತ ನಾಯಕರಾಗಿದ್ದು, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಕರಿಗೆ ಧ್ವನಿಯಾಗಿರುವ ಅವರಿಗೆ ಸಂಮಾನ ಮಾಡಿದ್ದು ಅತ್ಯಂತ ಪ್ರಸ್ತುತ. ದಯವೇ ಧರ್ಮದ ಮೂಲವಯ್ಯಾ ಎಂಬ ಬಸವೇಶ್ವರರ ಆದರ್ಶವನ್ನು ಅಳವಡಿಸಿಕೊಂಡರೆ ಸದ್ಯ ನಡೆಯುತ್ತಿರುವ ಜಾಗತಿಕ ಮಟ್ಟದ ಸಾವು-ನೋವುಗಳನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.ಈ ವೇಳೆ ಬಾಗಲಕೋಟೆ ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಸಂಡೂರ ಪ್ರಭುದೇವರ ವಿರಕ್ತಮಠದ ಪ್ರಭು ಸ್ವಾಮಿಗಳು, ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮಿಗಳು, ಬಾಚಿಗೊಂಡನಗಳ್ಳಿ ತೋಂಟದಾರ್ಯ ಶಾಖಾಮಠದ ಶಿವಮಹಾಂತ ಸ್ವಾಮಿಗಳು, ಆಳಂದದ ಕೋರಣೇಶ್ವರ ಸ್ವಾಮಿಗಳು ಹಾಗೂ ಬಸವ ಬೆಳವಿಯ ಶರಣ ಬಸವದೇವರು ಸಮ್ಮುಖ ವಹಿಸಿದ್ದರು. ಧಾರವಾಡದ ರತಿಕಾ ನೃತ್ಯ ನಿಕೇತನ ಕಲಾವಿದೆ ನಾಗರತ್ನಾ ಹಡಗಲಿ ತಂಡದವರಿಂದ ವಚನ ನೃತ್ಯ ರೂಪಕ ಜರುಗಿತು. ಮಾಜಿ ಸಚಿವ ಎಸ್.ಎಸ್. ಪಾಟೀಲ, ವಿಪ ಸದಸ್ಯ ಎಸ್.ವಿ. ಸಂಕನೂರ, ರಾಜು ಕುರಡಗಿ, ಕಿರಣ ಭೂಮಾ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಇದ್ದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ ಸ್ವಾಗತಿಸಿದರು.