ಯಲಬುರ್ಗಾ: ಜನರಿಗೆ ಅನ್ಯಾಯವಾದರೆ ನ್ಯಾಯ ಸಿಗುವ ಭರವಸೆಯಿಂದ ನ್ಯಾಯಾಲಯಕ್ಕೆ ಬರುತ್ತಾರೆ. ಅವರಿಗೆ ತ್ವರಿತಗತಿಯಲ್ಲಿ ನ್ಯಾಯ ಸಿಗುವಂತ ಕೆಲಸ ಮಾಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಸಿ.ಎಂ. ಪೂಣಚ್ಚ ಹೇಳಿದರು.
ಆಧುನಿಕ ಕಾಲದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆಯಾಗಿದ್ದು, ಹೊಸ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಧಾರವಾಡ ಮತ್ತು ಕಲಬುರ್ಗಿಯಲ್ಲಿ ೨೦ವರ್ಷದ ಹಿಂದೆ ಹೆಚ್ಚುವರಿ ಹೈಕೋರ್ಟ್ ಸ್ಥಾಪಿಸಲಾಗಿದ್ದು, ಈ ಭಾಗದ ಜನರಿಗೆ ಅನುಕೂಲವಾಗಿದೆ. ಕಟ್ಟಡದ ಕಾಮಗಾರಿ ಪೂರ್ಣಗೊಂಡರೆ ಕೂಡಲೇ ಬಳಸಿಕೊಳ್ಳಬೇಕು. ನಂತರ ಉದ್ಘಾಟನೆ ಮಾಡಬಹುದು. ಉದ್ಘಾಟನೆ ದಿನದಂದೆ ಕೋರ್ಟ್ ಕಲಾಪ ನಡೆಸಿರುವುದು ಖುಷಿ ವಿಚಾರ ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ ಮಾತನಾಡಿ, ಪಟ್ಟಣದಲ್ಲಿ ಸುಸಜ್ಜಿತ ನ್ಯಾಯಾಲಯಗಳ ಸಂಕೀರ್ಣ ಕಟ್ಟಡ ನಿರ್ಮಾಣವಾಗಿದೆ. ಜನರು ನ್ಯಾಯಾಂಗದ ಮೇಲೆ ಬಹಳಷ್ಟು ವಿಶ್ವಾಸ ಇಟ್ಟಿದ್ದಾರೆ. ಹಿರಿಯ ವಕೀಲರ ಸಲಹೆ ಸೂಚನೆಯಂತೆ ಕಿರಿಯ ವಕೀಲರು ಕಾರ್ಯ ನಿರ್ವಹಿಸಬೇಕು. ಕಳೆದ ಹಲವು ದಶಕಗಳಿಂದ ನ್ಯಾಯಾಂಗ ಭರವಸೆಯ ಬೆಳಕಾಗಿದೆ ಹೊರಟಿದೆ. ನ್ಯಾಯಾಲಯಕ್ಕೆ ಹೋದರೆ ನ್ಯಾಯ ಸಿಗುವ ಭರವಸೆ ಜನರಲ್ಲಿದೆ. ನ್ಯಾಯಾಲಯಗಳಿಗೆ ಮೂಲ ಸೌಕರ್ಯ ಕಲ್ಪಿಸಿದರೆ, ಕಕ್ಷಿದಾರರಿಗೆ ಶೀಘ್ರ ಮತ್ತು ನೈಜ ನ್ಯಾಯ ಒದಗಿಸಲು ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಸರ್ಕಾರ ಮೂಲ ಸೌಕರ್ಯ ಒದಗಿಸಲು ಮುಂದಾಗಬೇಕು ಎಂದರು.ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ನಾನೂ ಕೂಡ ವಕೀಲನಾಗಿದ್ದೆ. ಸಮಾಜಸೇವೆಗೆ ಬಂದಿದ್ದರಿಂದ ವಕೀಲ ವೃತ್ತಿಯಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜುಕುಮಾರ ಕಟ್ಟಡಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಹೇಳಿರುವುದು ಸ್ವಾಗತಾರ್ಹ.ಈ ಬಗ್ಗೆ ಸಿಎಂ ಜತೆಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು. ನನ್ನ ಕ್ಷೇತ್ರದ ಕುಕನೂರಿನಲ್ಲಿ ನೂತನ ನ್ಯಾಯಾಲಯ ನಿರ್ಮಾಣಕ್ಕೆ ₹೯ ಕೋಟಿ ಅನುದಾನ ನೀಡಲಾಗಿದೆ. ಯಲಬುರ್ಗಾ ಹಾಗೂ ಕುಕನೂರು ವಕೀಲರ ಸಂಘ ನಿರ್ಮಾಣಕ್ಕೆ ತಲಾ ₹೩ ಕೋಟಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಜಿಲ್ಲಾ ನ್ಯಾಯಾಲಯಕ್ಕೆ ₹೫೦ ಕೋಟಿ ಬಿಡುಗಡೆಯಾಗಿದೆ. ಕನಕಗಿರಿ, ಕಾರಟಗಿಯಲ್ಲಿ ಕೂಡ ನ್ಯಾಯಾಲಯ ಕಟ್ಟಡ ನಿರ್ಮಾಣವಾಗಲಿವೆ ಎಂದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಚಂದ್ರಶೇಖರ, ವಕೀಲರ ಸಂಘದ ತಾಲೂಕಾಧ್ಯಕ್ಷ ಸುಭಾಷಚಂದ್ರ ಹೊಂಬಳ ಮಾತನಾಡಿದರು.
ಈ ಸಂದರ್ಭ ಹಿರಿಯ ಸಿವಿಲ್ ನ್ಯಾಯಾಧೀಶ ಜೆ.ರಂಗಸ್ವಾಮಿ, ಕಿರಿಯ ಸಿವಿಲ್ ನ್ಯಾಯಾಧೀಶ ಸಂಜುಕುಮಾರ ಪಚ್ಚೆಪೂರೆ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಎಸ್ಪಿ ಡಾ. ರಾಮ್ ಎಲ್.ಅರಸಿದ್ದಿ, ಪಿಡಬ್ಲುಡಿ ಇಇ ಹೇಮಂತರಾಜ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ವಕೀಲರ ಸಂಘದ ಪದಾಧಿಕಾರಿ ಎಂ.ಎಸ್.ನಾಯ್ಕರ, ಮಹಾಂತೇಶ ಈ.ಟಿ., ಹಸನ್‌ಸಾಬ್ ನದಾಫ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಿನ ನಿವೃತ್ತ ನ್ಯಾಯಾಧೀಶರು, ನ್ಯಾಯಾವಾದಿಗಳು ಮತ್ತಿತರರು ಇದ್ದರು.
ಏ.೪ ಐತಿಹಾಸಿಕ ದಿನವಾಗಿ ದಾಖಲಾಯಿತು. ಐತಿಹಾಸಿಕ ಕಾರ್ಯಕ್ರಮದಲ್ಲಿ ಕೊಪ್ಪಳ, ಕುಷ್ಟಗಿ, ಕುಕನೂರು, ರೋಣ ಹಾಗೂ ಗಜೇಂದ್ರಗಡ ಭಾಗದ ವಕೀಲರು, ನಿವೃತ್ತ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನ್ಯಾಯಾಧೀಶರೊಂದಿಗೆ ಗ್ರುಪ್ ಫೋಟೊ ತೆಗೆಯಿಸಿಕೊಂಡು ಸಂಭ್ರಮಿಸಿದರು.