ಬಳ್ಳಾರಿ ಮಹಾನಗರ ಪಾಲಿಕೆ ಎಂಜಿನಿಯರ್‌ಗೆ ದಾಳಿ ಪ್ರಕರಣ; ಎರಡನೇ ದಿನವೂ ಮುಂದುವರಿದ ಪ್ರತಿಭಟನೆ

KannadaprabhaNewsNetwork |  
Published : Apr 05, 2026, 02:15 AM IST
ಮಹಾನಗರ ಪಾಲಿಕೆ ಸಹಾಯಕ ಇಂಜಿನಿಯರ್ ಮೇಲೆ ಹಲ್ಲೆ ಖಂಡಿಸಿ ಪಾಲಿಕೆ ನೌಕರರು ಹಾಗೂ ಪೌರಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಶನಿವಾರ ಎರಡನೇ ದಿನಕ್ಕೆ ಮುಂದುವರಿದಿದ್ದು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಬೆಂಬಲ ಸೂಚಿಸಿದರು.  | Kannada Prabha

ಸಾರಾಂಶ

Bellary Municipal Corporation Engineer Attacked Protest Continues for Second Day

ಬಳ್ಳಾರಿ: ಮಹಾನಗರ ಪಾಲಿಕೆ ಸಹಾಯಕ ಇಂಜಿನಿಯರ್ ಜಿ.ಎಂ. ವೀರೇಶ್ ಮೇಲೆ 38ನೇ ವಾರ್ಡ್‌ನ ಪಾಲಿಕೆ ಸದಸ್ಯ ವಿ.ಕುಬೇರ ನಡೆಸಿದ ಹಲ್ಲೆಯನ್ನು ಖಂಡಿಸಿ ಇಲ್ಲಿನ ಮಹಾನಗರ ಪಾಲಿಕೆ ಎದುರು ನೌಕರರು ಹಾಗೂ ಸಿಬ್ಬಂದಿ ನಡೆಸುತ್ತಿರುವ ಹೋರಾಟ ಮುಂದುವರಿದಿದೆ. ಆರೋಪಿ ಬಂಧಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.ರಾಜ್ಯ ಸರ್ಕಾರಿ ನೌಕರರ ಸಂಘ ಹೋರಾಟಕ್ಕೆ ಸಾಥ್ ನೀಡಿದೆ. ಹಲ್ಲೆ ನಡೆಸಿರುವ ಪಾಲಿಕೆ ಸದಸ್ಯನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಲ್ಲೆ ಪ್ರಕರಣ ನೌಕರರಿಗೆ ಆಘಾತವನ್ನುಂಟು ಮಾಡಿದೆ. ಭೀತಿಯಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸದಾನಂದ ನೆಲ್ಕುದ್ರಿ, ಜಿಲ್ಲಾ ಕಾರ್ಯದರ್ಶಿ ಜಿ.ವೈ. ತಿಪ್ಪಾರೆಡ್ಡಿ ಹೇಳಿದ್ದಾರೆ.

ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ರಾಜಶೇಖರ ಗಾಣಿಗಾರ ಮಾತನಾಡಿ, ಕರ್ತವ್ಯನಿರತ ಅಧಿಕಾರಿಗೆ ಹಲ್ಲೆಗೈದ ಆರೋಪಿ ವಿರುದ್ಧ ಕ್ರಮ ವಹಿಸಬೇಕು ಎಂದರು.

ಮಾರ್ಕ್ಸ್‌ವಾದಿ ಕಮ್ಯುನಿಸ್ಟ್‌ ಪಕ್ಷ ಘಟನೆ ಖಂಡಿಸಿದೆ. ಪಾಲಿಕೆ ನೌಕರರ ಸಂಘ, ಸಿಬ್ಬಂದಿ ಪಾಲಿಕೆ ಎದುರು ಶುಕ್ರವಾರ ಧರಣಿ ಆರಂಭಿಸಿದ್ದು, ಅದು ಶನಿವಾರವಾದ ಎರಡನೇ ದಿನಕ್ಕೆ ಕಾಲಿರಿಸಿದೆ. ಪಾಲಿಕೆ ಸದಸ್ಯನ ನಡೆ ಆಡಳಿತಾರೂಢ ಕಾಂಗ್ರೆಸ್ ಮುಖಂಡರು ಸಹ ಟೀಕಿಸಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ತಡರಾತ್ರಿವರೆಗೆ ನಡೆದ ಧರಣಿ:

ಹಲ್ಲೆ ಖಂಡಿಸಿ ನಡೆದ ಧರಣಿ ಸ್ಥಳಕ್ಕೆ ತೆರಳಿದ ವಿಪ ಸದಸ್ಯ ವೈ.ಎಂ. ಸತೀಶ್, ನಿಮ್ಮೊಂದಿಗೆ ನಾವಿದ್ದೇವೆ. ಧೈರ್ಯವಾಗಿರಿ. ಬಳ್ಳಾರಿಯಲ್ಲಿ ಪದೇಪದೇ ಏನಾದರೂ ಗಲಭೆ ನಡೆಯುತ್ತಿರುವುದು ವಿಷಾದನೀಯ. ಇದರಿಂದ ಬಳ್ಳಾರಿ ನಗರಕ್ಕೆ ಕಪ್ಪುಚುಕ್ಕೆ ಬರುತ್ತಿದೆ. ಇಂತವನ್ನು ಆಡಳಿತ ಪಕ್ಷದ ಜನಪ್ರತಿನಿಧಿಗಳು ತಡೆಗಟ್ಟಬೇಕು ಎಂದರು.

ಕೆಲಸದಿಂದ ದೂರ ಉಳಿದ ಸಿಬ್ಬಂದಿ; ಮನವೊಲಿಕೆ:

ಹಲ್ಲೆ ಘಟನೆ ಖಂಡಿಸಿ ಪೌರಕಾರ್ಮಿಕರು, ನೌಕರರು ಕೆಲಸದಿಂದ ದೂರ ಉಳಿಯಲು ನಿರ್ಧರಿಸಿದ್ದರು. ಮಧ್ಯಪ್ರವೇಶಿಸಿದ ಹಿರಿಯ ಅಧಿಕಾರಿಗಳು, ಪೌರಕಾರ್ಮಿಕರು ಸೇವೆಯಿಂದ ದೂರ ಉಳಿದು ಪ್ರತಿಭಟಿಸುವುದು ಸರಿಯಲ್ಲ ಎಂದು ಮನವೊಲಿಸಿದ ಬಳಿಕ ಪಾಲಿಕೆ ಸಿಬ್ಬಂದಿ ಕೆಲಸಕ್ಕೆ ಹಾಜರಾದರು ಎನ್ನಲಾಗಿದೆ.

ಹಲ್ಲೆ ಖಂಡಿಸಿ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯರು ಪ್ರತಿಭಟನೆ ನಡೆಸಿದರು. ಮಹಾಸಭಾದ ಜಿಲ್ಲಾಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ, ಮುಖಂಡರಾದ ಬಿ.ಎಂ. ಎರಿಸ್ವಾಮಿ, ಸಿರಿಗೇರಿ ವಿಶ್ವನಾಥ ಇದ್ದರು.

ಕೇಸು ದಾಖಲು:

ಹಲ್ಲೆ ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡದಂತೆ ಅನೇಕ ಒತ್ತಡ ತರಲಾಗಿದೆ. ಆದರೆ, ಪಾಲಿಕೆ ನೌಕರರು ಪಟ್ಟು ಸಡಿಲಿಸಲಿಲ್ಲ. ಕೊನೆಗೆ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾಗಿದ್ದ ಎಂಜಿನಿಯರ್‌ನನ್ನು ಜಿಲ್ಲಾಸ್ಪತ್ರೆಯಿಂದ ಶುಕ್ರವಾರ ರಾತ್ರಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಕನ್ನಡಪ್ರಭಕ್ಕೆ ತಿಳಿಸಿದರು.

ಪ್ರಾಣ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ:

ಹಲ್ಲೆ ಆರೋಪಿಯನ್ನು ಬಂಧಿಸಲಾಗಿಲ್ಲ. ಈವರೆಗೆ ಆತ ಪೊಲೀಸರ ಕೈಗೆ ಸಿಕ್ಕಿಲ್ಲ. ಸರ್ಕಾರಿ ನೌಕರನಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ, ಪ್ರಾಣ ಬೆದರಿಕೆ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬ್ರೂಸ್‌ಪೇಟೆ ಪೊಲೀಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಲಿ ತಲಗೇರಿಯಲ್ಲಿ ಅಕ್ರಮ ಗೋಸಾಗಾಟಕ್ಕೆ ಗ್ರಾಮಸ್ಥರ ತಡೆ
ದೇಶದ ಅಭಿವೃದ್ಧಿಯಲ್ಲಿ ಶಿಕ್ಷರ ಪಾತ್ರ ಮಹತ್ವದ್ದು: ಸಚಿವ ಮಂಕಾಳ ವೈದ್ಯ