ಕೆಪಿಎಸ್ ಮ್ಯಾಗ್ನೆಟ್ ವಿರುದ್ಧ 10ರಂದು ಬೃಹತ್ ಜನ ಸಮಾವೇಶ

KannadaprabhaNewsNetwork |  
Published : Apr 05, 2026, 02:00 AM IST
ಏ. 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಮ್ಮೂರ ಶಾಲೆ ಉಳಿಸಿ ರಾಜ್ಯಮಟ್ಟದ ಸಮಾವೇಶ ಹಿನ್ನೆಲೆಯಲ್ಲಿ ಪೋಸ್ಟರ್‌ ಪ್ರದರ್ಶಿಸಲಾಯಿತು. | Kannada Prabha

ಸಾರಾಂಶ

ಧಾರವಾಡ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿಯಲ್ಲಿವೆ. ನಾಡಿನ ಜನತೆಯ ತೀವ್ರ ವಿರೋಧದ ನಡುವೆಯೂ ಸರ್ಕಾರ ಶಾಲೆ ಮುಚ್ಚುವ ಕೆಲಸ ಮುಂದುವರಿಸಿದೆ. ಯಾವ್ಯಾವ ಶಾಲೆ ವಿಲೀನಗೊಳಿಸಬೇಕೆಂದು ಈಗಾಗಲೇ ಮ್ಯಾಪಿಂಗ್ ನಡೆಸಲಾಗಿದೆ ಎಂದು ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಶಶಿಕಲಾ ಮೇಟಿ ಹೇಳಿದರು.

ಧಾರವಾಡ:

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ರಾಜ್ಯದಲ್ಲಿ 40 ಸಾವಿರ ಸರ್ಕಾರಿ ಶಾಲೆ ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ನೀತಿ ಖಂಡಿಸಿ ಏ. 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ "ನಮ್ಮೂರ ಶಾಲೆ ಉಳಿಸಿ " ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಶಶಿಕಲಾ ಮೇಟಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ನಾಲ್ಕು ತಿಂಗಳಿಂದ ಎಐಡಿಎಸ್‌ಒ ನೇತೃತ್ವದಲ್ಲಿ ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಹಳ್ಳಿ-ಹಳ್ಳಿಗಳಲ್ಲಿ ಪೋಷಕರು ಹಾಗೂ ಗ್ರಾಮಸ್ಥರು ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿ ರಚಿಸಿಕೊಂಡು ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಒಕ್ಕೊರಲಿನಿಂದ ಧ್ವನಿಯೆತ್ತಿದ್ದಾರೆ. ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿಯಲ್ಲಿವೆ. ನಾಡಿನ ಜನತೆಯ ತೀವ್ರ ವಿರೋಧದ ನಡುವೆಯೂ ಸರ್ಕಾರ ಶಾಲೆ ಮುಚ್ಚುವ ಕೆಲಸ ಮುಂದುವರಿಸಿದೆ. ಯಾವ್ಯಾವ ಶಾಲೆ ವಿಲೀನಗೊಳಿಸಬೇಕೆಂದು ಈಗಾಗಲೇ ಮ್ಯಾಪಿಂಗ್ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಲೀನಗೊಳ್ಳುವ ಶಾಲೆಗಳ ಮುಖ್ಯಶಿಕ್ಷಕರಿಗೆ ಮೌಖಿಕವಾಗಿ ಆದೇಶ ನೀಡಲಾಗಿದೆ. ಏ. 8 ಮತ್ತು 9ರಂದು ನಡೆಯಲಿರುವ ಪೋಷಕರ ಸಭೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮಕ್ಕಳನ್ನು ಮ್ಯಾಗ್ನೆಟ್‌ ಶಾಲೆಗೆ ಕಳುಹಿಸುವಂತೆ ಒತ್ತಾಯಿಸಲು ಶಾಲೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಶಶಿಕಲಾ ಮೇಟಿ ನೋಟಿಸ್‌ ಪ್ರದರ್ಶಿಸಿದರು.ಈ ನಿಟ್ಟಿನಲ್ಲಿ ರಾಜ್ಯಮಟ್ಟದ ಜನ ಸಮಾವೇಶ ಏ. 10ಕ್ಕೆ ಬೆಂಗಳೂರಿನಲ್ಲಿ ಆಯೋಜಿಸಿದ್ದು, ಹಿರಿಯ ಸಾಹಿತಿಗಳಾದ ಡಾ. ಹಂಪ ನಾಗರಾಜಯ್ಯ, ಡಾ. ಕೆ. ಮರುಳಸಿದ್ದಪ್ಪ, ಪ್ರೊ ಎಸ್.ಜಿ. ಸಿದ್ದರಾಮಯ್ಯ, ಡಾ. ಅಲ್ಲಮಪ್ರಭು ಬೆಟ್ಟದೂರು, ಪ್ರೊ. ಎ ಮುರಿಗೆಪ್ಪ, ಎಸ್‌.ಆರ್. ಹಿರೇಮಠ ಭಾಗವಹಿಸುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಸಂಘಟನೆಯ ವಿನಯ ಚಂದ್ರ, ಶರಣಬಸವ ಗೋನವಾರ, ಸಿಂಧು ಕೌದಿ, ಮಲ್ಲೇಶ್ ಕಟಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋಗಳಿಗೆ ಹೆಚ್ಚುತ್ತಿರುವ ಎಲ್‌ಪಿಜಿ ಸಂಕಷ್ಟ
ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಶಾಸಕ ನೇಮರಾಜ್ ನಾಯ್ಕ