ರಸ್ತೆ ವಿವಾದ, ಬಾರದ ಆ್ಯಂಬುಲೆನ್ಸ್‌: ಬಾಲಕಿಯನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಕರೆತಂದ ಗ್ರಾಮಸ್ಥರು

KannadaprabhaNewsNetwork |  
Published : Apr 05, 2026, 02:00 AM IST
ಸ | Kannada Prabha

ಸಾರಾಂಶ

ಗ್ರಾಮಸ್ಥರು ಸದ್ಯ ಸಂಚರಿಸುವ ತಾತ್ಕಾಲಿಕ ರಸ್ತೆ ಓರ್ವ ವ್ಯಕ್ತಿಯ ಸ್ವಂತ ಜಾಗದಲ್ಲಿದ್ದು, ಇದೇ ಸಮಸ್ಯೆಗೆ ಕಾರಣವಾಗಿದೆ.

ಸಿರುಗುಪ್ಪ: ತಾಲೂಕಿನ ಬಗ್ಗೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತಾತ್ಕಾಲಿಕ ರಸ್ತೆ ವಿವಾದದಿಂದ ಗ್ರಾಮದೊಳಗೆ ಆ್ಯಂಬುಲೆನ್ಸ್ ಬಾರದಂತಾಗಿ ಬಾಲಕಿಯನ್ನು ಹೆಗಲ ಮೇಲೆ ಹೊತ್ತು ತಂದು ಆ್ಯಂಬುಲೆನ್ಸ್ ಮೂಲಕ ಸಿರುಗುಪ್ಪ ಆಸ್ಪತ್ರೆಗೆ ಕಳುಹಿಸಿದ ಘಟನೆ ಶುಕ್ರವಾರ ನಡೆದಿದೆ.

ಗ್ರಾಮಸ್ಥರು ಸದ್ಯ ಸಂಚರಿಸುವ ತಾತ್ಕಾಲಿಕ ರಸ್ತೆ ಓರ್ವ ವ್ಯಕ್ತಿಯ ಸ್ವಂತ ಜಾಗದಲ್ಲಿದ್ದು, ಇದೇ ಸಮಸ್ಯೆಗೆ ಕಾರಣವಾಗಿದೆ. ಸ್ವಂತ ಜಾಗದಲ್ಲಿ ಸಾರ್ವಜನಿಕರಿಗೆ ಓಡಾಡಲು ಅವಕಾಶವಿಲ್ಲ ಎಂದು ನಾಲ್ಕು ವರ್ಷಗಳಿಂದ ಚರಂಡಿ ನೀರು ಬಿಟ್ಟಿದ್ದರಿಂದ ಜನ ತಿರುಗಾಡದಂತೆ ಆಗಿತ್ತು. ಬಳಿಕ ಗ್ರಾಮಸ್ಥರು ಪ್ರತಿಭಟಿಸಿ ಮೂರು ತಿಂಗಳ ಹಿಂದೆ ಈ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದ್ದರು.

ಆಗ ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ್‌ ಗೌಸಿಯಾಬೇಗಂ, ಜನರಿಗೆ ತೊಂದರೆ ಕೊಡಬೇಡಿ. ಅವರಿಗೆ ತಿರುಗಾಡಲು ಅವಕಾಶ ಮಾಡಿಕೊಡಬೇಕು. ಹಾಗಾಗಿ ತಾತ್ಕಾಲಿಕ ರಸ್ತೆ ಮಾಡಿಕೊಡುತ್ತೇವೆ ಎಂದು ಜಾಗದ ಮಾಲೀಕನ ಮನವೊಲಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಆದರೆ ಈ ದಾರಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯಾಲಯ ಶಾಶ್ವತ ತಡೆಯಾಜ್ಞೆ ನೀಡಿರುವುದರಿಂದ, ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು ಎಂದು ತಹಸೀಲ್ದಾರ್ ಸೂಚಿಸಿದ್ದರು.

ಆದರೆ ಇದಕ್ಕೆ ಒಪ್ಪದ ಜಾಗದ ಮಾಲೀಕ ಶುಕ್ರವಾರ ಬೆಳಗ್ಗೆ ಎರಡು ಜೆಸಿಬಿಗಳ ಮೂಲಕ ರಸ್ತೆ ಅಗೆಯಲು ಮುಂದಾದಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆಆಗಮಿಸಿದ ಪೊಲೀಸರು ಜೆಸಿಬಿಯಿಂದ ರಸ್ತೆ ಅಗೆಯುವುದನ್ನು ತಡೆದು, ಪೊಲೀಸ್ ಠಾಣೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿ, ಜೆಸಿಬಿಯನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರು.

ರಸ್ತೆ ವಿವಾದದಿಂದ ಆ್ಯಂಬುಲೆನ್ಸ್ ಗ್ರಾಮದೊಳಗೆ ಬರಲಾಗದೇ ಅನಾರೋಗ್ಯ ಪೀಡಿತ ಬಾಲಕಿಯನ್ನು ಹೊತ್ತುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಅನುಕೂಲಕ್ಕಾಗಿ ತಾತ್ಕಾಲಿಕ ರಸ್ತೆ ದುರಸ್ತಿ ಮಾಡಲಾಗಿದೆ. ಹೊಸ ರಸ್ತೆ ನಿರ್ಮಾಣಕ್ಕೆ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಶೀಘ್ರ ಹೊಸ ರಸ್ತೆ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ತಾತ್ಕಾಲಿಕ ರಸ್ತೆ ಹಾಳು ಮಾಡದಂತೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್‌ ಗೌಸಿಯಾ ಬೇಗಂ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋಗಳಿಗೆ ಹೆಚ್ಚುತ್ತಿರುವ ಎಲ್‌ಪಿಜಿ ಸಂಕಷ್ಟ
ಕೆಪಿಎಸ್ ಮ್ಯಾಗ್ನೆಟ್ ವಿರುದ್ಧ 10ರಂದು ಬೃಹತ್ ಜನ ಸಮಾವೇಶ