ಉತ್ತರ ಕರ್ನಾಟಕದ ಹಿನ್ನೆಡೆಗೆ ಕೇವಲ ರಾಜಕಾರಣಿಗಳು ಮಾತ್ರವಲ್ಲದೆ ಪ್ರತಿಯೊಬ್ಬರು ಕಾರಣ. ಈ ನಿರ್ಲಕ್ಷ್ಯದ ಬಗ್ಗೆ ಯಾರನ್ನು ದೂರುವ ಅವಶ್ಯಕತೆ ಇಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿ:
ನಮ್ಮಲ್ಲಿ ಒಗ್ಗಟ್ಟು ಇಲ್ಲದೆ ಇರುವುದರಿಂದ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿನ್ನೆಡೆ ಅನುಭವಿಸುತ್ತಿದೆ. ಇನ್ನಾದರೂ ಪಕ್ಷಬೇಧ ಮರೆತು ಒಂದಾಗಿ ಈ ಭಾಗದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿದರು.
ಶನಿವಾರ ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಏ. 25ರಿಂದ 29ರ ವರೆಗೆ ನಗರದಲ್ಲಿ ನಡೆಯಲಿರುವ ಇನ್‌ಕಾಮೆಕ್ಸ್-2026ರ ಕರ್ಟನ್ ರೈಸರ್ ಮತ್ತು ವೀಡಿಯೋ ತುಣುಕುಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಉತ್ತರ ಕರ್ನಾಟಕದ ಹಿನ್ನೆಡೆಗೆ ಕೇವಲ ರಾಜಕಾರಣಿಗಳು ಮಾತ್ರವಲ್ಲದೆ ಪ್ರತಿಯೊಬ್ಬರು ಕಾರಣ. ಈ ನಿರ್ಲಕ್ಷ್ಯದ ಬಗ್ಗೆ ಯಾರನ್ನು ದೂರುವ ಅವಶ್ಯಕತೆ ಇಲ್ಲ ಎಂದ ಅವರು, ಈ ಭಾಗದವರೇ ಹಲವು ಬಾರಿ ಕೈಗಾರಿಕೆ ಸಚಿವರಾದರೂ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿದೆ. ಹೀಗೇಕೆ ಎಂಬುದರ ಕುರಿತು ಅತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಈ ಭಾಗದಲ್ಲಿ 96 ಶಾಸಕರಿದ್ದರೂ ಅಭಿವೃದ್ಧಿ ವಿಷಯದಲ್ಲಿ ಪಕ್ಷಬೇಧ ಮರೆತು ಎಂದಿಗೂ ಒಂದಾಗದೆ ಒಬ್ಬರ ಕಾಲು ಮತ್ತೊಬ್ಬರು ಎಳೆಯುತ್ತಾ ಬಂದಿದ್ದಾರೆ. ಹೀಗಾಗಿ ಈ ಭಾಗದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ನನ್ನ ವಿರೋಧವಿದೆ. ನಮಗೆ, ನಮ್ಮವರಿಗೆ ಅಧಿಕಾರ ದೊರೆತಾಗ ಈ ಭಾಗದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಸಚಿವರು ಸಹ ಇದಕ್ಕೆ ಬದ್ಧರಾಗಿರಬೇಕೆಂದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ 6ನೇ ಬಾರಿಗೆ ಬೃಹತ್ ಕೈಗಾರಿಕಾ ಮತ್ತು ವಾಣಿಜ್ಯ ವಸ್ತು ಪ್ರದರ್ಶನ ಆಯೋಜಿಸಿರುವುದು ಶ್ಲಾಘನೀಯ. ಕೇವಲ ಮೇಳ ಆಯೋಜಿಸದೇ ಸಲಹೆ, ಸೂಚನೆ, ಅಭಿಪ್ರಾಯ ಪಡೆದುಕೊಳ್ಳಿ. ಸರ್ಕಾರದಿಂದ ಬೇಕಾಗುವ ಸಹಕಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಹೊರಟ್ಟಿ ತಿಳಿಸಿದರು.
ಇನ್ ಕಾಮೆಕ್ಸ್-2026ರ ವೆಬ್‌ಸೈಟ್‌ಗೆ ಚಾಲನೆ ನೀಡಿದ ಶಾಸಕ ಎನ್.ಎಚ್. ಕೋನರಡ್ಡಿ , ಬೆಳಗಾವಿ, ಬಾಗಲಕೋಟೆಗೆ ಹೋಲಿಸಿದರೆ ಹು-ಧಾ ಅವಳಿ ನಗರ ಅಭಿವೃದ್ಧಿಯಲ್ಲಿ ಬಹಳಷ್ಟು ಹಿಂದೆ ಉಳಿದಿದೆ. ಇಲ್ಲಿನ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಹಲವಾರು ಸಮಸ್ಯೆಯಿಂದ ಕೈಗಾರಿಕೆ ಸ್ಥಾಪನೆಗೆ ಯಾರು ಮುಂದಾಗುತ್ತಿಲ್ಲ. ಇಲ್ಲಿನ ಜನಪ್ರತಿನಿಧಿಗಳು ಮೂಲಭೂತ ಸಮಸ್ಯೆಗಳ ಸುಧಾರಣೆಗೆ ಹೊಣೆಗಾರಿಕೆ ಹೊರಬೇಕು ಎಂದರು.
ಕೆಸಿಸಿಐ ಅಧ್ಯಕ್ಷ ಜೆ.ಕೆ. ಆದಪ್ಪಗೌಡರ, ಇನ್‌ಕಾಮೆಕ್ಸ್ ಪ್ರದರ್ಶನ ಅಧ್ಯಕ್ಷ ಮಹಾದೇವ ಕರಮರಿ, ಸಂಸ್ಥೆಯ ಕಾರ್ಯದರ್ಶಿ ಉದಯ ರೇವಣಕರ ಹಾಗೂ ಉಪಾಧ್ಯಕ್ಷ ಅಶೋಕ ಗಡಾದ ಮಾತನಾಡಿದರು. ಉದ್ಯಮಿ ಎಚ್.ಎನ್. ನಂದಕುಮಾರ ಇನ್ ಕಾಮೆಕ್ಸ್-2026 ಕುರಿತ ತ್ರೀಡಿ ವೀಡಿಯೋ ಹಾಗೂ ಬ್ರೋಚರ್ ಬಿಡುಗಡೆ ಮಾಡಿದರು. ವಿಪ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ, ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ, ಕೆಸಿಸಿಐ ಉಪಾಧ್ಯಕ್ಷ ಸಿದ್ದೇಶ್ವರ ಕಮ್ಮಾರ, ಉಪಾಧ್ಯಕ್ಷ ಜಯಪ್ರಕಾಶ ಟೆಂಗಿನಕಾಯಿ, ರಾಘವೇಂದ್ರ ಬಾಗಲಕೋಟಿ, ಪ್ರವೀಣ ಅಗಡಿ ಸೇರಿದಂತೆ ಹಲವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.