ಕಂಪ್ಲಿ: ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಜರುಗಿತು.
ಕಂಪ್ಲಿ ಬೋವಿ ಸಂಘದ ಅಧ್ಯಕ್ಷ ಸಾಮಿಲ್ ವಿ. ಶೇಖಪ್ಪ ಮಾತನಾಡಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಎಲ್ಲರೂ ಸಮಾನರು ಎಂದು ಸಮಾಜಮುಖಿ ತತ್ವಗಳನ್ನು ಸಾರಿದ ವ್ಯಕ್ತಿ ಶಿವಯೋಗಿ ಸಿದ್ದರಾಮೇಶ್ವರರಾಗಿದ್ದಾರೆ. ಜನ- ಜಾನುವಾರುಗಳಿಗೆ, ಪಶು-ಪಕ್ಷಿಗಳಿಗೆ ಕುಡಿಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿ ಸಮಾಜಮುಖಿಯಾಗಿ ನಡೆದ ಸಿದ್ದರಾಮೇಶ್ವರರ ನಡೆ ಇಂದಿಗೂ ಪ್ರಸ್ತುತವಾಗಿದೆ. ಅಂತರ್ಜಲ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಕೆರೆಗಳನ್ನು ಕಟ್ಟಲು ಸಾಧ್ಯವಾಗದಿದ್ದರೂ, "ಹಿಂದಿನವರು ನಿರ್ಮಿಸಿರುವ ಕೆರೆ-ಕಟ್ಟೆಗಳನ್ನು ಹಾಳಾಗದಂತೆ, ಒತ್ತುವರಿಯಾಗದಂತೆ ಸಂರಕ್ಷಿಸುವ ಮುಂದಿನ ಪೀಳಿಗೆಗೆ ಉಳಿಸುವ ಹೊಣೆ ನಮ್ಮೆಲ್ಲರದ್ದಾಗಿದೆ. ಸಿದ್ದರಾಮೇಶ್ವರರು ಜನತೆಯ ಕಷ್ಟಗಳನ್ನು ಹತ್ತಿರದಿಂದ ನೋಡಿ ಅವರ ನೋವುಗಳನ್ನು ನಿವಾರಿಸಲು ಶ್ರಮಿಸುತ್ತ, ನುಡಿದಂತೆ ನಡೆದಿದ್ದಾರೆ. ದುಡಿಮೆಯಲ್ಲಿ ಭಗವಂತನನ್ನು ಕಾಣಬೇಕು. ಕಷ್ಟಬಂದಾಗ ಕೊರಗದೇ ಸಹಿಷ್ಣುವಾಗಿ ಬದುಕಬೇಕೆಂದು ಸಂದೇಶ ನೀಡಿ ಸಮಾನತೆಯ ಗಾರುಡಿಗರಾಗಿದ್ದರು ಎಂದರು.ಬೋವಿ ಸಂಘದ ಗೌರವಾಧ್ಯಕ್ಷ ಎ.ವಿ. ಗೋವಿಂದರಾಜು ಮಾತನಾಡಿ, ಬೋವಿ ಸಮುದಾಯ ಭವನಕ್ಕೆ ಶಾಸಕರು ಅನುದಾನ ಬಿಡುಗಡೆಗೊಳಿಸಬೇಕು. ಪಟ್ಟಣದ ವೃತ್ತ, ರಸ್ತೆಗಳಿಗೆ ಸಿದ್ಧರಾಮೇಶ್ವರರ ಹೆಸರಿಡಬೇಕು. ಶಾಲೆ-ಕಾಲೇಜು ಸೇರಿ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯ ಸಿದ್ಧರಾಮೇಶ್ವರರ ಜಯಂತಿ ಜರುಗಿಸಬೇಕು ಎಂದು ಒತ್ತಾಯಿಸಿದರು.ಕಂಪ್ಲಿ ತಾಲೂಕು ಬೋವಿ ಸಂಘದ ಕಚೇರಿಯಲ್ಲಿಯೂ ಸಿದ್ಧರಾಮೇಶ್ವರ ಜಯಂತಿ ಜರುಗಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಶಿವರಾಜ, ಕಂಪ್ಲಿ ತಾಲೂಕು ಬೋವಿ ಸಂಘದ ಪದಾಧಿಕಾರಿಗಳಾದ ಎಂ. ಹುಲುಗಪ್ಪ, ವೆಂಕಟರಮಣ, ವಿ. ಗರ‍್ರಪ್ಪ, ವಿ. ಸತ್ಯಪ್ಪ, ವಿ.ಬಿ. ನಾಗರಾಜ, ಎಸ್.ವಿ. ಗೋವಿಂದರಾಜ, ಮೌನೇಶ್, ತಿಪ್ಪೇಸ್ವಾಮಿ, ಬಂಡಿ ತಿಮ್ಮಪ್ಪ, ಸತೀಶ್, ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖ ನಾನಾ ಅಧಿಕಾರಿಗಳಿದ್ದರು.