ಇಂದಿನಿಂದ ಸಿದ್ಧೇಶ್ವರ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Jan 11, 2026, 03:15 AM IST
 | Kannada Prabha

ಸಾರಾಂಶ

ಪ್ರತಿವರ್ಷದಂತೆ ಈ ವರ್ಷವೂ ನಗರದ ಆರಾಧ್ಯ ದೈವ ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಗುತ್ತಿದೆ. 2026 ಜನವರಿ 11ರಿಂದ 17ರವರೆಗೆ ನಮ್ಮೂರ ಜಾತ್ರೆಯ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ನಗರ ಶಾಸಕ, ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರತಿವರ್ಷದಂತೆ ಈ ವರ್ಷವೂ ನಗರದ ಆರಾಧ್ಯ ದೈವ ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಗುತ್ತಿದೆ. 2026 ಜನವರಿ 11ರಿಂದ 17ರವರೆಗೆ ನಮ್ಮೂರ ಜಾತ್ರೆಯ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ನಗರ ಶಾಸಕ, ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಶ್ರೀ ಶಿವಾನುಭವ ಮಂಟಪದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧವಾದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಜಾತ್ರೆ ಈ ಬಾರಿ 109ನೇ ವರ್ಷದ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಶ್ರೀ ಸಿದ್ಧೇಶ್ವರ ಸಂಸ್ಥೆ ವತಿಯಿಂದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದ್ದು, ನರ್ಸರಿಯಿಂದ ಪಿಜಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಸಿದ್ಧಸಿರಿ ಲಾ ಕಾಲೇಜು, ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಲಾಗಿದೆ. 150 ಎಕರೆ ಜಮೀನು, ₹450 ಕೋಟಿ ಆಸ್ತಿ ಹಾಗೂ ಗೋ ಶಾಲೆಯನ್ನು ಈ ಸಂಸ್ಥೆ ಹೊಂದಿದೆ. ಸಂಸ್ಥೆಯಿಂದ ಪ್ರವಾಸಿಗರು, ಭಕ್ತರು ಸೇರಿದಂತೆ ಎಲ್ಲರಿಗೂ ನಿತ್ಯ ಅನ್ನದಾಸೋಹ ನಡೆಸಲಾಗುತ್ತಿದೆ ಎಂದರು.ಗೋ ಶಾಲೆಯಲ್ಲಿಯೂ ಮಂತ್ರಾಲಯಕ್ಕೆ, ಗುಡ್ಡಾಪುರ, ಅಯ್ಯಪ್ಪಸ್ವಾಮಿ ಭಕ್ತರಿಗೆ ಸೇರಿದಂತೆ ಎಲ್ಲರಿಗೂ ವಸತಿ, ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಜಾತ್ರೆಗೆ ಮೊದಲೆಲ್ಲ ಸಾಕಷ್ಟು ಜಾನುವಾರುಗಳು ಬರುತ್ತಿದ್ದವು. ಜಾನುವಾರು ಜಾತ್ರೆ ಸಂಭ್ರಮದಿಂದ ನಡೆಯುತ್ತಿತ್ತು. ಇತ್ತೀಚೆಗೆ ಗೋ ಸಂಪತ್ತು ಕಡಿಮೆಯಾಗುತ್ತಿದ್ದು, ಜಾನುವಾರು ಜಾತ್ರೆಗೆ ಎತ್ತುಗಳು, ಜಾನುವಾರುಗಳು ಕಡಿಮೆ ಸಂಖ್ಯೆಯಲ್ಲಿ ಬರುತ್ತಿವೆ. ಜಾನುವಾರುಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ‌ ಸಿದ್ಧೇಶ್ವರ ಸಂಸ್ಥೆಯಿಂದ, ಬಿಎಲ್‌ಡಿಇ ಸಂಸ್ಥೆಯಿಂದ ಹಾಗೂ ವಿಡಿಸಿಸಿ ಬ್ಯಾಂಕ್ ಸೇರಿದಂತೆ ವಿವಿಧ ಗಣ್ಯರಿಂದ ಒಳ್ಳೆಯ ಆಕಳಿಗೆ ಒಂದು ತೊಲೆ (10 ಗ್ರಾಂ) ಬಂಗಾರವನ್ನು ಬಹುಮಾನವಾಗಿ ಕೊಡಲಾಗುತ್ತಿದೆ ಎಂದರು.ಸಿದ್ಧೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ ಮಾತನಾಡಿ, ಈ ವರ್ಷದ ಜಾತ್ರೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ಈಗಾಗಲೇ ಹಲವು ಸಮಿತಿಗಳನ್ನು ರೂಪಿಸಿ ಪೂರ್ವಭಾವಿ ಸಭೆಗಳನ್ನು ಕೂಡ ಮಾಡಲಾಗಿದೆ. 1918ರಲ್ಲಿ ಶ್ರೀ ಸಿದ್ಧೇಶ್ವರ ಜಾತ್ರೆ ಆರಂಭವಾಗಿದ್ದು, ಈಗ 109ನೇ ವರ್ಷದ ಜಾತ್ರೆ ನಡೆಯುತ್ತಿದೆ. ಒಂದು ವಾರದವರೆಗೆ ನಿತ್ಯ ವಿವಿಧ ಕಾರ್ಯಕ್ರಮಗಳು, ಪೂಜೆ ಪುನಸ್ಕಾರಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.ಜ.11ರಂದು ಸಂಜೆ 6ಕ್ಕೆ ಸಿದ್ಧೇಶ್ವರ ದೇವಸ್ಥಾನದಿಂದ ಗೋಮಾತೆ ಪೂಜೆ, ಮೆರವಣಿಗೆ ಹಾಗೂ ನಂದಿ ಧ್ವಜ ಪೂಜೆ ಮಾಡಲಾಗುವುದು. ಬಳಿಕ ನಂದಿಕೋಲು ಉತ್ಸವ ನಡೆಯಲಿದೆ. ಜ.12ರಂದು ಮಧ್ಯಾಹ್ನ 12.30ಕ್ಕೆ ದೇವಸ್ಥಾನದಿಂದ ನಂದಿ ಧ್ವಜಗಳ ಉತ್ಸವ ಹೊರಟು 770 ಲಿಂಗದ ಗುಡಿಯಲ್ಲಿ ಎಣ್ಣೆ ಮಜ್ಜನ, ಅಭಿಷೇಕ ಜರುಗಲಿದೆ. ರಾತ್ರಿ 8 ಗಂಟೆಗೆ ಭಜನಾ ಕಾರ್ಯಕ್ರಮಗಳು ಜರುಗಲಿವೆ. ಜ.13ರಂದು ಅಕ್ಷತಾರ್ಪಣೆ-ಭೋಗಿ ಕಾರ್ಯಕ್ರಮ ನಡೆಯಲಿದೆ. ನಂದಿ ಧ್ವಜಗಳ ಉತ್ಸವ ಇರಲಿದೆ. ರಾತ್ರಿ 8ಗಂಟೆಗೆ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಮನರಂಜನೆ ಕಾರ್ಯಕ್ರಮ ನಡೆಯಲಿದೆ ಎಂದರು.ಜ.14ರಂದು ಮಧ್ಯಾಹ್ನ 12.30ಕ್ಕೆ ಸಂಕ್ರಮಣ ಆಚರಣೆ, ಹೋಮ ಹವನ ಇರಲಿದೆ. ದೇವಸ್ಥಾನದ ಆವರಣದಲ್ಲಿ ಪಲ್ಲಕ್ಕಿಯೊಂದಿಗೆ ನಂದಿ ಧ್ವಜಗಳ ಉತ್ಸವ ಜರುಗಲಿದೆ. ರಾತ್ರಿ 8ಕ್ಕೆ ಮನರಂಜನೆ ಕಾರ್ಯಕ್ರಮ ಜರುಗಲಿದೆ. ಜ.15ರಂದು ನಂದಿ ಧ್ವಜಗಳ ಭವ್ಯ ಮೆರವಣಿಗೆ ಇರಲಿದೆ. ರಾತ್ರಿ 8ಕ್ಕೆ ಸಾಂಕೇತಿಕವಾಗಿ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ಜ.16ರಂದು ಬೆಳಗ್ಗೆ 11ಕ್ಕೆ ದೇವಸ್ಥಾನದ ಆವರಣದಲ್ಲಿ ಭಾರ ಎತ್ತುವ ಸ್ಪರ್ಧೆ ಇರಲಿದೆ. ಜ.17ರಂದು ಮಧ್ಯಾಹ್ನ 3ಕ್ಕೆ ಎಸ್.ಎಸ್.ಹೈಸ್ಕೂಲ್‌ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಜಂಗೀ ನಿಕಾಲಿ ಕುಸ್ತಿಗಳು ನಡೆಯಲಿವೆ. ಕೊನೆಗೆ ಜ.20ರಂದು ಕಪ್ಪಡ ಇಳಿಸುವ ಕಾರ್ಯಕ್ರಮ (ನಂದಿಕೋಲಿನ ಅಲಂಕಾರ ಇಳಿಸುವುದು) ಇರಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಗುರು ಗಚ್ಚಿನಮಠ, ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಬಸವರಾಜ ಸುಗೂರ, ಸಿದ್ರಾಮಪ್ಪ ಉಪ್ಪಿನ, ಅಮೃತ ತೋಸನಿವಾಲ, ಪ್ರೇಮಾನಂದ ಬಿರಾದಾರ, ರಾಜಶೇಖರ ಮಗಿಮಠ, ಸಂಸ್ಥೆಯ ನಿರ್ದೇಶಕರು ಇದ್ದರು.ಇತ್ತೀಚೆಗೆ ಗೋ ಸಂಪತ್ತು ಕಡಿಮೆಯಾಗುತ್ತಿದ್ದು, ಜಾನುವಾರು ಜಾತ್ರೆಗೆ ಎತ್ತುಗಳು, ಜಾನುವಾರುಗಳು ಕಡಿಮೆ ಸಂಖ್ಯೆಯಲ್ಲಿ ಬರುತ್ತಿವೆ. ಜಾನುವಾರುಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ‌ ಸಿದ್ಧೇಶ್ವರ ಸಂಸ್ಥೆಯಿಂದ, ಬಿಎಲ್‌ಡಿಇ ಸಂಸ್ಥೆಯಿಂದ ಹಾಗೂ ವಿಡಿಸಿಸಿ ಬ್ಯಾಂಕ್ ಸೇರಿದಂತೆ ವಿವಿಧ ಗಣ್ಯರಿಂದ ಒಳ್ಳೆಯ ಆಕಳಿಗೆ ಒಂದು ತೊಲೆ (10 ಗ್ರಾಂ) ಬಂಗಾರವನ್ನು ಬಹುಮಾನವಾಗಿ ಕೊಡಲಾಗುತ್ತಿದೆ.

- ಬಸನಗೌಡ ಪಾಟೀಲ ಯತ್ನಾಳ, ಶಾಸಕ, ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ