ಕನ್ನಡಪ್ರಭ ವಾರ್ತೆ ಹಾರೂಗೇರಿ
ರಾಯಬಾಗ ತಾಲೂಕಿನ ಹಾರೂಗೇರಿಯ ಜೈನ ದಿಗಂಬರ ಸಭಾಭವನದ ಗಣಿತ ಭಾಸ್ಕರ ರಾಜಾದಿತ್ಯ ಮುಖ್ಯ ವೇದಿಕೆಯಲ್ಲಿ ಶನಿವಾರ ನಡೆದ ಬೆಳಗಾವಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮ್ಮೇಳನಗಳು ಮನಸುಗಳನ್ನು ಕಟ್ಟುವ ಸಾಮರಸ್ಯದ ತಾಣಗಳಾಗಿವೆ. ಆಧುನಿಕ ಭರಾಟೆಯಲ್ಲಿ ಛಿದ್ರವಾಗುತ್ತಿರುವ ಮನಸುಗಳಲ್ಲಿ ಬಂಧುತ್ವ ಭಾವವನ್ನು ಬೆಳೆಸುತ್ತವೆ. ನಾನು ಹಾರೂಗೇರಿಯಲ್ಲಿ ದುಡಿದೆ. ಅದು ನನ್ನನ್ನು ತನ್ನ ಹೆಗಲ ಮೇಲೆ ಹೊತ್ತು ಮೆರೆಸಿತು. ನಾನು ಸಲ್ಲಿಸಿದ ಸೇವೆ ಅಲ್ಪ. ಆದರೆ ನೀವು ಕೊಟ್ಟ ಪ್ರೀತಿ ಪಟ್ಟದಷ್ಟು ಎಂದು ಸಂತಸದಿಂದ ನುಡಿದರು.
ನಾಡು-ನುಡಿ ಕನ್ನಡ ಉಳಿವಿಗಾಗಿ ಬೆಳಗಾವಿ ಜಿಲ್ಲೆ ವಿಭಜನೆಯಾಗಲಿ. ಅದು ಎಷ್ಟು ಜಿಲ್ಲೆಗಳಾದರೂ, ವಿಭಜನೆ ಆಗಲಿ. ವಿಭಜನೆಯಿಂದ ಆಡಳಿತ ಮತ್ತಷ್ಟು ಚುರುಕುಗೊಳ್ಳುತ್ತದೆ ಎಂದು ಆಶಯ ವ್ಯಕ್ತಪಡಿಸಿದ ಸರ್ವಾಧ್ಯಕ್ಷ ಡಾ.ಮಾಳಿ ಅವರು, ಸರ್ಕಾರಿ ಕನ್ನಡ ಶಾಲೆ ಉಳಿವು ಮತ್ತು ಬೆಳವಣಿಗೆಗೆ ಕನ್ನಡ ಭಾಷೆ ಉಳಿವಿಗಾಗಿ ಸರ್ಕಾರ ಹೆಚ್ಚಿನ ಮಹತ್ವ ನೀಡಬೇಕು ಎಂದೂ ಆಗ್ರಹಿಸಿದರು.ಆಶಯ ನುಡಿಗಳನ್ನಾಡಿದ ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲ ಮೆಟಗುಡ್ಡ, ಕನ್ನಡ ಸಾಹಿತ್ಯ ಸಮ್ಮೇಳನಗಳು ತಾಯಿಯ ಒಡಲು ತುಂಬುತ್ತವೆ. ಕನ್ನಡ ಭಾಷೆ ಇಡೀ ಭಾರತ ದೇಶಾದ್ಯಂತ ಹರಡಿದ್ದು, ಮಹಾರಾಷ್ಟ್ರ, ಕಾಶಿ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿಯೂ ಕನ್ನಡ ಶಾಸನಗಳು ಸಿಕ್ಕಿವೆ. ಆದರೂ ಕನ್ನಡಕ್ಕೆ ಮಹತ್ವ ಇಲ್ಲದಂತಾಗಿದೆ. ಕಾರಣ ಸರ್ಕಾರಗಳು ಪ್ರತಿವರ್ಷ ಕನ್ನಡ ಶಾಲೆಗಿಂತ ಬೇರೆ ಭಾಷೆಗಳ ಶಾಲೆಗಳಿಗೆ ಅನುಮತಿ ನೀಡುತ್ತಿವೆ ಎಂದು ಬೇಸರಿಸಿದರು.
30, 40 ಮಕ್ಕಳಿದ್ದರೆ ಮಾತ್ರ ಶಿಕ್ಷಕರನ್ನು ಶಾಲೆಗಳಲ್ಲಿ ಉಳಿಸುತ್ತಿವೆ. ಇಲ್ಲದಿದ್ದರೆ ಹೆಚ್ಚುವರಿ ಮಾಡಿ ಆ ಶಾಲೆಗಳನ್ನು ಮುಚ್ಚುವ ಹಂತಕ್ಕೆ ತಲುಪಿವೆ. ಸರ್ಕಾರ ಆ ಶಾಲೆಯಲ್ಲಿ ಎಷ್ಟೇ ಕನ್ನಡ ಕಲಿಯುವ ಮಕ್ಕಳಿದ್ದರೂ ಅಲ್ಲಿ ಶಿಕ್ಷಕರು ಇರವಂತೆ ನಿರ್ಧರಿಸಬೇಕು. ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಿದ್ದರೂ ಅಂಕಿಗಳನ್ನು ಬಳಸುತ್ತಿಲ್ಲ. ಪಕ್ಕದ ಮಹಾರಾಷ್ಟ್ರದಲ್ಲಿ ಮರಾಠಿಯಲ್ಲಿ ಅಂಕಿಗಳನ್ನು ಬಳಸುತ್ತಾರೆ. ಇದು ಸರ್ಕಾರ ಅಂಕಿಗಳನ್ನು ಬಳಸುವುದಕ್ಕೆ ಮಹತ್ವ ನೀಡಬೇಕು. ಇಲ್ಲದಿದ್ದರೆ ಕನ್ನಡ ಅಂಕಿಗಳು ಅವನತಿ ಹೊಂದುತ್ತವೆ. ಕನ್ನಡ ಉಳಿವಿಗಾಗಿ ಎಲ್ಲರೂ ಕೆಲಸ ಶ್ರಮ ವಹಿಸಿ ದುಡಿಯಬೇಕಿದೆ ಎಂದು ಹೇಳಿದರು.ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಸಾಹಿತ್ಯ ಪರಿಷತ್ತನ್ನು ಸ್ಥಾಪನೆ ಮಾಡಿದವರು ನಾಲ್ವಡಿ ಕೃಷ್ಣರಾಜ ಒಡೆಯರ ಅವರು. ರಾಜರಿಗೆ ಮಾತ್ರ ಸೀಮಿತವಾಗಿದ್ದ ಆ ಕಾಲದಲ್ಲಿ ಅವರು ಸಾಮಾನ್ಯ ಜನರಿಗೂ ಸಾಹಿತ್ಯದ ಅರಿವು ಮಹತ್ವ ತಿಳಿಸುವ ಸಲುವಾಗಿ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು. ಅದಕ್ಕೆ ಮಾನ್ಯತೆ, ಅಸ್ತಿತ್ವ ಕೊಟ್ಟರು. ಎಲ್ಲ ಕಡೆ ಕನ್ನಡ ಸಾಹಿತ್ಯವನ್ನು ಪಸರಿಸುವ ಕಾರ್ಯವನ್ನು ಪರಿಷತ್ತು ಮಾಡಬೇಕು. ಸಾಮಾನ್ಯ ಜನರು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು. ಆದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಸಾಹಿತ್ಯದ ಹಿರಿಮೆ ಕಡಿಮೆಯಾಗುತ್ತಿದೆ. ಸಾಹಿತ್ಯ ಬೆಳವಣಿಗೆಗೆ ಸರ್ಕಾರಗಳು ಹೆಚ್ಚಿನ ಮಹತ್ವ ನೀಡುತ್ತಿಲ್ಲ ಎಂದರು.
ಯುವ ಸಾಹಿತಿಗಳಿಗೆ ಪ್ರೋತ್ಸಾಹ ಅಗತ್ಯವಾಗಿದೆ. ಕನ್ನಡ ಉಳಿವಿಗಾಗಿ ಪಾಲಕರು ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡಕ್ಕೆ ಮಹತ್ವ ನೀಡಬೇಕು. ಶಿಕ್ಷಕರು ಮಕ್ಕಳಿಗೆ ಕನ್ನಡ ಕಲಿಸುವ ಬೆಳೆಸುವ ಮಹತ್ತರ ಜವಾಬ್ದಾರಿ ಅವರ ಮೇಲಿದೆ. ಸಮಾವೇಶಗಳಿಗೆ ಮಾತ್ರ ಸೀಮಿತವಾಗಿರದೆ ಕನ್ನಡ ಉಳಿಯಲು ಮತ್ತು ಬೆಳೆಸುವ ಕಾರ್ಯ ಮಾಡೋಣ ಎಂದು ಹೇಳಿದರು.