ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ತೆರಳಿ ನನ್ನನ್ನು ಉಳಿಸಿ, ನನಗೆ ಹೆಚ್ಚು ವೋಟ್ ಕೊಡಿ ಎಂದು ಕೇಳಿದ್ದಾರೆ. ಅಂದರೆ, ನನ್ನ ಕಾಲ ಮುಗಿತು. ಬಿಜೆಪಿ ಅವರು ಖುರ್ಚಿಯಲ್ಲಿ ಕೂರುತ್ತಾರೆ ಎಂಬುದು ಅವರ ಅನುಭವಕ್ಕೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಂಗಳವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಹಣ ಮತ್ತು ಹೆಂಡದ ಮೇಲೆ ತುಘಲಕ್ ದರ್ಬಾರ್ ನಡೆಸಿ ಅಧಿಕಾರ ಹಿಡಿಯುವ ಭ್ರಮೆಯಲ್ಲಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರ 6 ಸಾವಿರ ರು. ಹಾಗೂ ರಾಜ್ಯ ಸರ್ಕಾರ 4 ಸಾವಿರ ರು. ಸೇರಿಸಿ ಒಟ್ಟು 10 ಸಾವಿರ ರು. ನೀಡಲಾಗುತಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆ 4 ಸಾವಿರ ರು. ನಿಲ್ಲಿಸಿದೆ. ಇನ್ನು ಭಾಗ್ಯಲಕ್ಷ್ಮೀ ಯೋಜನೆ ನಿಲ್ಲಿಸಿದೆ. ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಪಾಪರ್ ಆಗಿದೆ. ಅಭಿವೃದ್ಧಿಗೆ ಹಣವಿಲ್ಲ. ನೀರಾವರಿಗೆ ಅನುದಾನವಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್‌ನವರೇ ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು? ಅಭ್ಯರ್ಥಿಯ ಹೆಸರನ್ನು ಹೇಳುವ ಆ ತಾಕತ್ತು ನಿಮಗೆ ಇದೆಯೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಎರಡು ದಿನಗಳಲ್ಲಿ ನಾಮಪತ್ರ ಸಲ್ಲಿಕೆ ಬಳಿಕ ರಾಜ್ಯದ ಉದ್ದಗಲಕ್ಕೂ ನಾವೆಲ್ಲ ಹಿರಿಯ ಮುಖಂಡರ ಜತೆಗೆ ವಿಧಾನಸಭಾ ಕ್ಷೇತ್ರವಾರು ಪ್ರವಾಸ ಮಾಡಿ ಕಾರ್ಯಕರ್ತರ, ಸಾರ್ವಜನಿಕರ ಸಭೆ ಮಾಡುತ್ತೇವೆ. ಈ ಬಾರಿ ನಾವು 28 ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿದೆ. 28 ಲೋಕಸಭಾ ಸದಸ್ಯರನ್ನು ಗೆಲ್ಲಿಸಿಕೊಂಡು ದೆಹಲಿಗೆ ಕರೆತರುವೆ ಎಂದು ವೇದಿಕೆ ಮೇಲಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಭರವಸೆ ನೀಡಿದರು.
ರಾಜ್ಯದ ಉದ್ದಗಲ ಸುತ್ತಿದ್ದೇನೆ. ರಾಜ್ಯದ ಜನರ ನಾಡಿಮಿಡಿತ ಗೊತ್ತಿದೆ. ಕಾಂಗ್ರೆಸ್ ನಾಯಕರೇ ನೀವು ಕೊಟ್ಟ ಭರವಸೆಗಳು ಏನಾದವು? ನಿಮ್ಮ ತುಘಲಕ್ ದರ್ಬಾರ್ ನಡೆಯಲ್ಲ. ಬರಗಾಲ ಇದೆ. ಕುಡಿಯುವ ನೀರಿಗೆ ಹಾಹಾಕಾರ ಇದೆ. ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರಿಲ್ಲ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಬರಲಿದ್ದಾರೆ. ನಾವೆಲ್ಲ ಒಂದಾಗಿ ಕೆಲಸ ಮಾಡೋಣ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ನನಗೆ 82 ವರ್ಷವಾದರೂ ಮನೆ ಸೇರುವ ಪ್ರಶ್ನೆಯಿಲ್ಲ. ಎಲ್ಲರೂ ಒಟ್ಟಾಗಿ ಜನರ ಮುಂದೆ ಹೋಗಿ ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರ್ ಮನವರಿಕೆ ಮಾಡೋಣ. ನಾವು ಪ್ರಮುಖವಾಗಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಮೊಹಲ್ಲಾಗಳಿಗೆ ಹೆಚ್ಚು ಹೋಗಬೇಕು. ಮೀಸಲು ಹಣವನ್ನು ಈ ಸರ್ಕಾರ ಹೇಗೆ ದುರ್ಬಳಕೆ ಮಾಡಿಕೊಂಡಿದೆ ಎಂಬುದನ್ನು ಮನವರಿಕೆ ಮಾಡಬೇಕು ಎಂದು ಯಡಿಯೂರಪ್ಪ ಹೇಳಿದರು.