ಚಿತ್ರದುರ್ಗ: ಬಿಜೆಪಿಯ ಪದೇ ಪದೆ ದಲಿತ ವಿರೋಧಿ ಎಂದು ದೂರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ದಲಿತರಿಗೆ ಏನು ಮಾಡಿದೆ ಎಂದು ಪ್ರಶ್ನೆ ಮಾಡಿಕೊಂಡರೆ ನಿಜವಾದ ದಲಿತ ವಿರೋಧಿ ಯಾರು ಎಂಬುದು ಅರ್ಥವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದರು.
ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ಕಾಂಗ್ರೆಸ್ ದಲಿತರನ್ನು ಮುಖ್ಯಮಂತ್ರಿ ಮಾಡಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದಾಗ ಖರ್ಗೆ, ಪರಮೇಶ್ವರ್ ಹಾಗೂ ಮುನಿಯಪ್ಪ ಅವರ ಹೆಸರಿತ್ತು. ಆದರೆ ಯಾರನ್ನು ಸಿಎಂ ಮಾಡಲಿಲ್ಲ. ಸಿದ್ದರಾಮಯ್ಯ ಪಕ್ಕಾ ದಲಿತ ವಿರೋಧಿ. ದಲಿತರ ಸಮಾಧಿ ಮೇಲೆ ಚಕ್ರಾಧಿಪತ್ಯ ಸ್ಥಾಪಿಸಿರುವ ಅವರ ಆಡಳಿತ ಬಹುಕಾಲ ನಡೆಯದೆಂದರು.ದೇಶದಲ್ಲಿ ಕಾಂಗ್ರೆಸ್ 30ರಿಂದ 40 ಸ್ಥಾನಗಳನ್ನು ಗೆಲ್ಲುವುದಿಲ್ಲವೆಂಬ ಸಂಗತಿ ತಿಳಿದ ಕಾಂಗ್ರೆಸ್ಸಿಗರು ಹತಾಶೆಗೊಂಡ ಪ್ರಧಾನಿ ಮೋದಿ ಅವರಿಗೆ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಗ್ಯಾರಂಟಿಗಳನ್ನು ನಾವು ವಿರೋಧ ಮಾಡುವುದಿಲ್ಲ. ಇವು ತಾತ್ಕಾಲಿಕ. ಆದರೆ ಕ್ರೋಢೀಕರಣಗೊಂಡ ಎಲ್ಲಾ ಸಂಪನ್ಮೂಲಗಳನ್ನು ಗ್ಯಾರಂಟಿಗೆ ಸುರಿದರೆ ಹೇಗೆ. ಇದರಿಂದ ರಾಜ್ಯ ಎಂದಿಗೂ ಅಭಿವೃದ್ಧಿಯಾಗದು. ಸರ್ಕಾರ ಬರುವಾಗಲೇ ದಾರಿದ್ರ್ಯ ಹೊತ್ತು ತಂದಿದೆ. ಅನಾವಶ್ಯಕವಾಗಿ ಕೇಂದ್ರದ ಮೇಲೆ ಬೆರಳು ಮಾಡುತ್ತಿದೆ. ಸಿದ್ದರಾಮಯ್ಯ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಯಾವುದೇ ವಿಷಯವನ್ನು ಪೂರ್ಣವಾಗಿ ಹೇಳದೆ, ಹಾರಿಕೆ ಉತ್ತರ ನೀಡಿ ಮುಂದೆ ಹೋಗುತ್ತಾರೆ. ಗ್ಯಾರಂಟಿಗಳಿಂದ ರಾಜ್ಯವನ್ನು ದಿವಾಳಿ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು.
ಅಂಬೇಡ್ಕರ್ ಅವರನ್ನು ದೇವರೆಂದು ನಂಬುವ ಜನ ಇನ್ನು ಕಾಂಗ್ರೆಸ್‌ನಲ್ಲಿದ್ದಾರೆ. ಇದಕ್ಕೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಎಸ್ಸಿಪಿ ಟಿಎಸ್ಪಿ ಯೋಜನೆಯಲ್ಲಿ ಶೇ.24ರಷ್ಟು ಹಣವನ್ನು ತೆಗೆದಿರಿಸಬೇಕು. ಆದರೆ ಸಿದ್ದರಾಮಯ್ಯ ಇದರಲ್ಲಿ 24 ಸಾವಿರ ಕೋಟಿ ರು. ಹಣವನ್ನು ಗ್ಯಾರಂಟಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ದಲಿತರಿಗೆ ಮಾಡಿದ ದ್ರೋಹವಲ್ಲವೇ ಎಂದು ಪ್ರಶ್ನಿಸಿದರು.ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯನ್ನು ಅಪವಿತ್ರ ಎಂದು ಕರೆಯುವ ಕಾಂಗ್ರೆಸ್‌ನವರು ಯಾವುದು ಪವಿತ್ರ ಮತ್ತು ಅಪವಿತ್ರ ಎಂದು ಹೇಳಬೇಕು. 70ರ ದಶಕದಲ್ಲಿ ಕಾಂಗ್ರೆಸ್ ಸರ್ಕಾರ ಎಮರ್ಜೆನ್ಸಿ ಜಾರಿಗೆ ತಂದು ಎಲ್ಲರ ಮೇಲೂ ದೌರ್ಜನ್ಯ ಮಾಡುತ್ತಾ, ಸಂವಿಧಾನದ ಆಶಯಗಳ ತಿರುಚಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ವಿರೋಧ ಪಕ್ಷಗಳು ಸಿಡಿದೆದ್ದು, ಎಲ್ಲಾ ಪಕ್ಷಗಳನ್ನು ಮೈತ್ರಿ ಮಾಡಿಕೊಂಡಾಗ ಜನತಾ ಪಕ್ಷ ಹುಟ್ಟಿಕೊಂಡಿತು. ಯಾವುದು ಮೈತ್ರಿ ಯಾವುದು ಅಪವಿತ್ರ ಎಂಬುದ ಕಾಂಗ್ರೆಸ್ ಹೇಳಬೇಕೆಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಛಲವಾದಿ ತಿಪ್ಪೇಸ್ವಾಮಿ ಇನ್ನಿತರರಿದ್ದರು.