ಅಧಿಕಾರಕ್ಕೆ ಸಮಸ್ಯೆಯಾದ್ರೆ ಸಿದ್ದರಾಮಯ್ಯ ಅಹಿಂದ ಜಪ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

KannadaprabhaNewsNetwork | Updated : Oct 14 2024, 01:22 PM IST

ಸಾರಾಂಶ

2ನೇ ದೊಡ್ಡ ಸಿಮ್ ಎಂದೇ ಹೆಸರಾಗಿದ್ದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯತ್ನಿಸಿದರು.

 ದಾವಣಗೆರೆ : ಐದು ವರ್ಷ ಮುಖ್ಯಮಂತ್ರಿಯಾಗಿದ್ದಾಗ ಅಹಿಂದ ವರ್ಗಕ್ಕೆ ಅನುವಾಗುವ ಯಾವುದೇ ಯೋಜನೆ ಜಾರಿಗೊಳಿಸದೆ, 2ನೇ ಬಾರಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ಪರಿಶಿಷ್ಟರಿಗೆ ಮೀಸಲಾದ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ಬಳಸಿದ್ದ ಸಿದ್ದರಾಮಯ್ಯ ತಮಗೆ ಅಧಿಕಾರದ ಸಮಸ್ಯೆ ಎದುರಾದಾಗ ಅಹಿಂದ ಜಪ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದ ದಾವಣಗೆರೆ-ಹರಿಹರ ಅರ್ಬನ್ ಕೋ-ಆಪ್ ಬ್ಯಾಂಕ್‌ನ ಸಮುದಾಯ ಭವನದಲ್ಲಿ ಭಾನುವಾರ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಹಾಗೂ ಬೂತ್ ಸಮಿತಿ ರಚನೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ 82 ಕೋಟಿ ರು.ಭ್ರಷ್ಟಾಚಾರವಾಗಲು ಸಾಥ್ ನೀಡಿದ ಸಿದ್ದರಾಮಯ್ಯನಂತಹವರು ಈಗ ಅಹಿಂದ ಸಮಾವೇಶ ಮಾಡಿದ್ದಾರೆ ಎಂದರು.

ಹಣಕಾಸು ಸಚಿವರೂ ಆದ ಸಿದ್ದರಾಮಯ್ಯಗೆ ತಿಳಿಯದೇ ವಾಲ್ಮೀಕಿ ನಿಗಮದ ₹82 ಕೋಟಿ ವರ್ಗಾವಣೆಯಾಗಿದ್ದು ಹೇಗೆ? ನಿಗಮದ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ದೇಶದಲ್ಲಾಗಲೀ, ರಾಜ್ಯದಲ್ಲಾಗಲೀ ಹಣದ ಸಮಸ್ಯೆ ಇಲ್ಲ. ಪ್ರತಿ ಕುಟುಂಬಕ್ಕೂ ‍ಆರ್ಥಿಕ ಶಕ್ತಿ ತುಂಬುವಷ್ಟು ಹಣ ಇದೆ. ಆದರೆ, ಅಭಿವೃದ್ಧಿ ಕಾರ್ಯಕ್ಕೆ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಹಾಗಾಗಿ ಸಚಿವರು, ಶಾಸಕರು ಬೇಸತ್ತಿದ್ದು, ಅಂತಹವರ ಮೇಲೆ ಮಾನಸಿಕ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದರು.

ಅಹಿಂದ ಜಪ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯಗೆ ನಾನು ಎರಡು ಸಲ ಸಿಎಂ ಆಗಿದ್ದಕ್ಕೆ ಮತ್ಸರದಿಂದ ಬಿಜೆಪಿ ಜೊತೆ ಹುನ್ನಾರ ಮಾಡಿ, ನನ್ನನ್ನು ಕೆಳಗಿಳಿಸಲು ಪ್ರಯತ್ನಿಸಿದರು. ಜೆಡಿಎಸ್ ಬಗ್ಗೆ ದೂರುವ, ಟೀಕಿಸುವ ನೈತಿಕತೆಯೇ ಸಿದ್ದರಾಮಯ್ಯಗೆ ಇಲ್ಲ. ಸಿಎಂ ಸಿದ್ದರಾಮಯ್ಯ ಗುರುತಿಸಿಕೊಂಡಿದ್ದು ಯಾವ ಪಕ್ಷದಲ್ಲಿ, ಸಿದ್ದರಾಮಯ್ಯಗೆ ಶಕ್ತಿ ಕೊಟ್ಟಿದ್ದು ಯಾವ ಪಕ್ಷ ಎಂಬುದನ್ನು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಲಿ ಎಂದು ಅವರು ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ, ರಾಜ್ಯವನ್ನು ಸದೃಢಗೊಳಿಸಲು ನಾವು ಕೈಜೋಡಿಸಿದ್ದೇವೆ. ನನ್ನ ಮೇಲೆ ನಂಬಿಕೆ ಇಟ್ಟು, ಕೇಂದ್ರ ಸಚಿವರಾಗಿ ಮೋದಿ ಮಾಡಿದ್ದಾರೆ. ಆ ನಂಬಿಕೆ ಉಳಿಸಿಕೊಳ್ಳುವೆ. ಬಿಜೆಪಿ ಜೊತೆ ನಾವು ಕೈಜೋಡಿಸಿದಾಗ ಕಾಂಗ್ರೆಸ್‌ ನಿದ್ದೆಗಡಲಾರಂಭಿಸಿತು. ರಾಜ್ಯದಲ್ಲಿ ಸುಮಾರು 28 ಕ್ಷೇತ್ರ ಗೆಲ್ಲುವ ಭ್ರಮದಲ್ಲಿದ್ದ ಕಾಂಗ್ರೆಸ್ಸಿಗರಿಗೆ ಫಲಿತಾಂಶಬಂದ ನಂತರ ಭ್ರಮನಿರಸನವಾಯಿತು ಎಂದು ಅವರು ವ್ಯಂಗ್ಯವಾಡಿದರು.

ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಮಾತನಾಡಿ, ಈಗಾಗಲೇ ಬಾರಿ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿಯವರನ್ನು ಬಹುಮತದಿಂದ ಮತ್ತೊಮ್ಮೆ ಮುಖ್ಯಮಂತ್ರಿ ಮಾಡಿ, ರಾಜ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಪಕ್ಷವನ್ನು ಮತ್ತಷ್ಟು ಬಲಪಡಿಸಲು, ಬೂತ್ ಮಟ್ಟದಿಂದಲೇ ಬೇರನ್ನು ಗಟ್ಟಿಗೊಳಿಸಿ, ಮುಂಬರುವ ವಿಧಾನಸಭೆ ಚುನಾವಣೆ ಕಡೆಗೆಗಮನ ಕೇಂದ್ರೀಕರಿಸಲಾಗಿದೆ. ಇದಕ್ಕಾಗಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಶಾಸಕ ಸಿ.ಬಿ.ಸುರೇಶ ಗೌಡ, ವಿಪ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಅಲ್ಕೋಡ್ ಹನುಮಂತಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ, ಆರ್.ಸಿ.ಅಂಜಿನಪ್ಪ, ಜೆ.ಅಮಾನುಲ್ಲಾ ಖಾನ್‌, ಟಿ.ಗಣೇಶ ದಾಸಕರಿಯಪ್ಪ, ಬಾತಿ ಶಂಕರ, ಅಂಜಿನಪ್ಪ ಕಡತಿ, ಟಿ.ಅಸ್ಗರ್‌, ಮಹದೇವಪ್ಪ, ಕವಿತಾ ಬೇಡರ್‌, ಜಯಣ್ಣ, ಗಾಯತ್ರಿ ಹಾಲೇಶ, ಪರಮೇಶ್ವರಪ್ಪ, ಎಸ್.ಓಂಕಾರಪ್ಪ ಇತರರು ಇದ್ದರು.

ಜೆಡಿಎಸ್‌ಗೆ ನಾಯಕತ್ವದ ಕೊರತೆ: ಎಚ್‌ಡಿಕೆ

ದಾವಣಗೆರೆ: ರಾಜ್ಯಾದ್ಯಂತ ಜೆಡಿಎಸ್ ಪಕ್ಷಕ್ಕೆ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಅಪಾರ ಸಂಖ್ಯೆಯಲ್ಲಿದ್ದರೂ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಾಯಕತ್ವ, ನಾಯಕರ ಕೊರತೆ ಇದೆ. ನಾಯಕತ್ವವಿರುವವರ ಅಗತ್ಯ ಪಕ್ಷಕ್ಕೆ ಇದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಒಂದು ಕಾಲದಲ್ಲಿ ನಾಯಕರನ್ನು ಸೃಷ್ಟಿಸುವ ಪಕ್ಷವೆಂದು ಹೆಸರಾಗಿದ್ದ ಜೆಡಿಎಸ್‌ಗೆ ಈಗ ನಾಯಕತ್ವದ ಗುಣ ಇರುವವರ ಸಂಖ್ಯೆ ಕಡಿಮೆಯಾಗಿದೆ. ಸತೀಶ ಜಾರಕಿಹೊಳಿ, ಸಿದ್ದರಾಮಯ್ಯ, ಮಧು ಬಂಗಾರಪ್ಪ ಸೇರಿದಂತೆ ಅನೇಕ ನಾಯಕರನ್ನು ಹುಟ್ಟು ಹಾಕಿದ್ದ ಪಕ್ಷ ಜೆಡಿಎಸ್‌ ಎಂದು ಅವರು ತಿಳಿಸಿದರು.

ರಾಜಕೀಯಕ್ಕೆ ಆಕಸ್ಮಿಕವಾಗಿ ಹುಟ್ಟಿ ಬಂದವನು ನಾನು. ಎರಡು ಭಾರಿ ಮುಖ್ಯಮಂತ್ರಿಯಾಗಿದ್ದು, ಸಂಸದನಾಗಿ ಆಯ್ಕೆಯಾಗಿದ್ದು ಸಹ ಆಕಸ್ಮಿಕವೆ. ಆದರೆ, ರಾಜ್ಯದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಮಾತೆತ್ತಿದರೆ ತಮ್ಮ ಜಾತಿಯನ್ನು ಉಲ್ಲೇಖಿಸಿ, ತಾವು ಕುರಿ ಕಾಯುವ ಕುರುಬ ಎಂಬುದಾಗಿ ತೋರಿಸಿಕೊಳ್ಳುತ್ತಾರೆ. ಈ ಮೂಲಕ ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನಮ್ಮ ತೋಟದ ಮನೆಯಲ್ಲಿ ನಾನೂ ಸಹ ಕುರಿ ಸಾಕಾಣಿಕೆ ಮಾಡಿದ್ದೇವೆ. ಆದರೆ, ನಾನೆಲ್ಲಿಯೂ ಸಹ ಜಾತಿಯನ್ನು ಉಲ್ಲೇಖಿಸಿ ಮಾತನಾಡುವುದಿಲ್ಲ. ನಮಗಿರುವುದು ಕನ್ನಡಿಗರ ಜಾತಿ ಅಷ್ಟೇ ಎಂದು ಅವರು ಸಿದ್ದರಾಮಯ್ಯಗೆ ಕೆಣಕಿದರು.

Share this article