ಬಿಜೆಪಿ ಎಂಎಲ್‌ಸಿ ಪ್ರದೀಪ ಜತೆ ಸಿದ್ದು ಚರ್ಚೆ: ಕುತೂಹಲ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ಜಗದೀಶ ಶೆಟ್ಟರ್‌ ನಿವಾಸಕ್ಕೆ ಜನ್ಮದಿನದ ಶುಭಾಶಯ ಕೋರಲು ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಪ್ರದೀಪ ಶೆಟ್ಟರ್‌ ಕೂಡ ಅವರ ಮನೆಯಲ್ಲೇ ಇದ್ದರು. ಆಗ ಸಿದ್ದರಾಮಯ್ಯ, ಜಗದೀಶ ಶೆಟ್ಟರ್‌, ಪ್ರದೀಪ ಶೆಟ್ಟರ್‌ ಮೂವರು ಪರಸ್ಪರ ಕೆಲಕಾಲ ಸಮಾಲೋಚನೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಬಿಜೆಪಿಯ ಎಂಎಲ್‌ಸಿ ಪ್ರದೀಪ ಶೆಟ್ಟರ್‌ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಜಗದೀಶ ಶೆಟ್ಟರ್‌ ನಿವಾಸಕ್ಕೆ ಜನ್ಮದಿನದ ಶುಭಾಶಯ ಕೋರಲು ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಪ್ರದೀಪ ಶೆಟ್ಟರ್‌ ಕೂಡ ಅವರ ಮನೆಯಲ್ಲೇ ಇದ್ದರು. ಆಗ ಸಿದ್ದರಾಮಯ್ಯ, ಜಗದೀಶ ಶೆಟ್ಟರ್‌, ಪ್ರದೀಪ ಶೆಟ್ಟರ್‌ ಮೂವರು ಪರಸ್ಪರ ಕೆಲಕಾಲ ಸಮಾಲೋಚನೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಶೆಟ್ಟರ್‌ ಅವರ ಸಹೋದರ ಪ್ರದೀಪ ಈಗ ಬಿಜೆಪಿ ಎಂಎಲ್‌ಸಿ. ತಮ್ಮ ಸಹೋದರ ಕಾಂಗ್ರೆಸ್‌ಗೆ ತೆರಳಿದ್ದರೂ ಇವರು ಬಿಜೆಪಿಯಲ್ಲೇ ಉಳಿದಿದ್ದರು. ಆದರೆ ಕಳೆದ ಮೂರು ತಿಂಗಳ ಹಿಂದೆ ಬಿಜೆಪಿ ಕಾರ್ಯವೈಖರಿ ಬಗ್ಗೆ, ಲಿಂಗಾಯತರಿಗೆ ಸ್ಥಾನಮಾನ ಸಿಗದಿರುವ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈ ವೇಳೆ ಜಗದೀಶ ಶೆಟ್ಟರ್‌ ಮಾತನಾಡಿ, ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿ ಅಲ್ಲ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಯಾರೂ ಕೂಡ ಇದರ ಬಗ್ಗೆ ನನ್ನ ಜತೆ ಚರ್ಚೆ ಮಾಡಿಲ್ಲ. ಲೋಕಸಭೆ ಚುನಾವಣೆ ಕುರಿತು ಚರ್ಚೆ ಜನವರಿಯಲ್ಲಿ ನಡೆಯುತ್ತದೆ. ನಾನು ಕಾಂಗ್ರೆಸ್​ ಬಲಪಡಿಸುವ ಬಗ್ಗೆ ಆಗ ಅಭಿಪ್ರಾಯ ತಿಳಿಸುತ್ತೇನೆ. ನಮ್ಮ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿದ ವೇಳೆ ನನ್ನ ಸಹೋದರ ಪ್ರದೀಪ ಕೂಡ ಇರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

ಈ ನಡುವೆ ವಿಧಾನಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಮಾತನಾಡಿ, ನಮ್ಮ ಸಹೋದರರ ಜನ್ಮದಿನವಿದ್ದ ಕಾರಣ ಇಲ್ಲಿಗೆ ಬಂದಿದ್ದೆ. ಅದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದರು. ಸೌಹಾರ್ದಯುತವಾಗಿ ಚರ್ಚೆಯಾಯಿತು ಅಷ್ಟೇ. ರಾಜಕೀಯದ ಬಗ್ಗೆ ಏನೇನೂ ಚರ್ಚೆ ನಡೆದಿಲ್ಲ ಎಂದರು.

ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುವ ಪ್ರಶ್ನೆಯೇ ಇಲ್ಲ. ಆದರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸದಿದ್ದರೆ ನಮ್ಮ ಪಕ್ಷ ನನಗೆ ಟಿಕೆಟ್‌ ಕೊಟ್ಟರೆ ಸ್ಪರ್ಧಿಸುತ್ತೇನೆ. ಧಾರವಾಡ ಲೋಕಸಭಾ ಕ್ಷೇತ್ರ ಲಿಂಗಾಯತ ಪ್ರಾಬಲ್ಯ ಇರುವಂತಹ ಕ್ಷೇತ್ರ. ನನಗೆ ಟಿಕೆಟ್‌ ನೀಡಿದರೆ ಸ್ಪರ್ಧಿಸುತ್ತೇನೆ ಎಂದು ಪ್ರದೀಪ ಶೆಟ್ಟರ್ ಸ್ಪಷ್ಟಪಡಿಸಿದರು.

Share this article